Gruha Lakshmi Scheme: ಬೋರ್‌ವೆಲ್ ಕೊರೆಸಿ ಬದುಕು ಕಟ್ಟಿಕೊಂಡ ಅತ್ತೆ - ಸೊಸೆಯ ಮಾತು ಕೇಳಿ ಖುಷಿಯಾಯಿತು: ಸಿದ್ದರಾಮಯ್ಯ
ಬೆಂಗಳೂರು,ಡಿಸೆಂಬರ್ 15: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಹಲವು ಯಶೋಗಾಥೆಗಳಿಗೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ಮನೆಯ ಯಜಮಾನಿಯರಿಗೆ ಸಿಗುತ್ತಿರುವ ಈ ಯೋಜನೆಯ 2000 ರೂಪಾಯಿ ಹಣದಿಂದ ಹಲವರು ತಮ್ಮ ಬದುಕಿನಲ್ಲಿ ಬದಲಾವಣೆಗೆ ಕಾರಣವಾಗಿದೆ. ಇದೀಗ ಅತ್ತೆ-ಸೊಸೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಬೋರ್‌ವೆಲ್ ಕೊರೆಸಿ ಯಶಸ್ಸು ಕಂಡಿದ್ದಾರೆ.
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಅತ್ತೆ ಮಾಬುಬಿ ಹಾಗೂ ಸೊಸೆ ರೋಷನ್ ಬೇಗಂ ಸೇರಿ ಬೋರ್‌ವೆಲ್ ಕೊರೆಸಿದ್ದಾರೆ. ಇನ್ನು ಬೋರ್‌ವೆಲ್ ಕೊರೆಸಿದ ನಂತರ ಉತ್ತಮ ನೀರು ಕೂಡ ಸಿಕ್ಕಿದೆ. ಇದರಿಂದ ಗೃಹಲಕ್ಷ್ಮಿ ಈ ಕುಟುಂಬ ಧನ್ಯವಾದಗಳನ್ನು ಅರ್ಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಧನ್ಯವಾದವನ್ನ ತಿಳಿಸುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವೀಟ್ ಖಾತೆಯಲ್ಲಿ ಅತ್ತೆ-ಸೊಸೆ ಹೇಳಿರುವ ಖುಷಿ ಕ್ಷಣದ ವಿಡಿಯೋವನ್ನ ಶೇರ್ ಮಾಡಿದ್ದಾರೆ. ನಮ್ಮ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡೆದ ಹಣದಲ್ಲಿ ಬೋರ್‌ವೆಲ್ ಕೊರೆಸಿ ಬದುಕು ಕಟ್ಟಿಕೊಂಡ ಅತ್ತೆ - ಸೊಸೆಯ ಮಾತುಗಳು ಕೇಳಿ ಖುಷಿಯಾಯಿತು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲದಾರ ಓಣಿಯ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮಿ ಹಣ ಕೂಡಿಟ್ಟು ಕೃಷಿ ಭೂಮಿಗೆ ಬೋರ್‌ವೆಲ್ ಕೊರೆಸಿ, ಸಮೃದ್ಧ ನೀರು ಪಡೆದಿದ್ದಾರೆ. ನಾಡಿನ ಬಡಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಈ ಯೋಜನೆಯ ಉದ್ದೇಶ ಯಶಸ್ವಿಯಾಗಿ ಈಡೇರುತ್ತಿರುವುದು ಯೋಜನೆಯನ್ನು ಜಾರಿಗೆ ಕೊಟ್ಟ ನನ್ನಲ್ಲಿ ಸಂತೃಪ್ತಭಾವ ಮೂಡಿಸಿದೆ.
ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಅತ್ತೆ - ಸೊಸೆಯ ನಡುವೆ ಜಗಳ ಆರಂಭವಾಗುತ್ತದೆ, ಸಂಸಾರಗಳು ಒಡೆಯುತ್ತವೆ ಎಂದು ಟೀಕಿಸಿದ ಜನರಿಗೆ ಬಾರಿಸಿದ ತಪರಾಕಿ ಇದು. ಬೆಳಕಿಗೆ ಬಾರದ ಇಂತಹ ಇನ್ನೂ ಸಾವಿರಾರು ಯಶೋಗಾಥೆಗಳಿವೆ, ಗೃಹಲಕ್ಷ್ಮಿ ನಾಡಿನ ತಾಯಂದಿರ ಬಾಳಿಗೆ ಅಕ್ಷರಶಃ ಭಾಗ್ಯಲಕ್ಷ್ಮಿಯಾಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಗೃಹಲಕ್ಷ್ಮಿ ಹಣದಿಂದ ಬೊರವೆಲ್: ಲಕ್ಷ್ಮಿ ಹೆಬ್ಬಾಳ್ಕರ್
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಅನುಷ್ಠಾನಗೊಂಡಾಗಿನಿಂದ ರಾಜ್ಯದಲ್ಲಿ ತನ್ನದೇ ಆದ ಸದ್ದನ್ನು ಮಾಡುತ್ತಿದ್ದು, ಲಕ್ಷಾಂತರ ಕೆಲಸ ಕಾರ್ಯಗಳಿಗೆ ಗೃಹಲಕ್ಷ್ಮಿಯ ಹಣ ವರದಾನವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2,000/- ರೂ, ಹಣ ಕೂಡಿಟ್ಟು ಗದಗ ಜಿಲ್ಲೆಯ ಗಜೇಂದ್ರಗಡ್ ಪಟ್ಟಣದ ಮಾಲದಾರ ಓಣಿಯ ಅತ್ತೆ ಹಾಗೂ ಸೊಸೆ ಬೊರವೆಲ್ ಹಾಕಿಸಿದ್ದು, ಬೊರವೆಲ್ ನಿಂದ ಒಳ್ಳೆಯ ನೀರನ್ನು ಪಡೆದಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಬೊರವೆಲ್ ಹಾಕಿಸಲು ಒಟ್ಟು 60 ಸಾವಿರ ರೂ,ಗಳು ಖರ್ಚಾಗಿದ್ದು, ಗೃಹಲಕ್ಷ್ಮಿ ಯೋಜನೆಯ 44 ಸಾವಿರ ಬಳಕೆ ಮಾಡಲಾಗಿದೆ, ಇನ್ನುಳಿದ ಹಣ ಮಗ ನೀಡಿರುವುದಾಗಿ ತಿಳಿದು ಬಂದಿದೆ.
ಟೀಕೆಗಳು ಸಾಯ್ತವೆ, ಕೆಲಸಗಳು ಉಳಿತವೆ: ಡಿ ಕೆ ಶಿವಕುಮಾರ್
ವಿರೋಧ ಪಕ್ಷಗಳು ನಮ್ಮ ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ, ಸೊಸೆ ನಡುವೆ ಜಗಳ ಉಂಟಾಗುತ್ತದೆ ಎಂದು ಟೀಕೆ ಮಾಡಿದ್ದರು. ಆದರೆ ವಾಸ್ತವವೇ ಬೇರೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2000 ರೂ. ಹಣವನ್ನು ಕೂಡಿಟ್ಟು ಕೊಳವೆ ಬಾವಿ ಕೊರೆಸಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ. ನಮ್ಮ ದೃಢಸಂಕಲ್ಪ ಜನಪರವಾಗಿದ್ದು, ಗ್ಯಾರಂಟಿಗಳಿಂದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎನ್ನುವ ಸಾರ್ಥಕತೆ ಇದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.












Click it and Unblock the Notifications