ಧರ್ಮಗುರುಗಳು ಇದನ್ನು ಪ್ರಶ್ನಿಸುವುದಿಲ್ಲ ಏಕೆ ಎಂದ ಯತ್ನಾಳ್
ಧರ್ಮಗುರುಗಳು ಕೆಲವು ವಿಷಯಗಳ ಬಗ್ಗೆ ಮೌನ ವಹಿಸುತ್ತಿರುವುದು ಏಕೆ ಎಂದು ಬಿಜೆಪಿ ಶಾಸಕ ಹಾಗೂ ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಗಳಿಸಿರುವ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರಶ್ನೆ ಮಾಡಿದ್ದಾರೆ. ಒಂದು ನಿರ್ದಿಷ್ಟ ಧರ್ಮದ ಧರ್ಮಗುರುಗಳು ಕೆಲವು ವಿಷಗಳಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ತಪ್ಪು ನಡೆದರೂ ಇವರು ಮಾತನಾಡುತ್ತಿಲ್ಲ. ಕಣ್ಣ ಮುಂದೆಯೇ ತಪ್ಪುಗಳು ನಡೆಯುತ್ತಿದ್ದರೂ ಕಣ್ಮುಂಚಿಕೊಂಡು ಕುಳಿತಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಹಿಂದೂಗಳ ಹಬ್ಬಕ್ಕೆ ಒಂದು ನಿಯಮ ಅನ್ಯ ಧರ್ಮಕ್ಕೆ ಒಂದು ಎನ್ನುವಂತೆ ಮಾಡಲಾಗುತ್ತಿದೆ. ಹಿಂದೂಗಳ ಪ್ರತಿ ಹಬ್ಬಕ್ಕೂ ಕಾಂಗ್ರೆಸ್ ಏನಾದರೂ ಒಂದು ಷರತ್ತು ವಿಧಿಸುತ್ತದೆ. ಆದರೆ, ಅನ್ಯ ಧರ್ಮೀಯರು ಮಾಡುತ್ತಿರುವ ಜನ ವಿರೋಧಿ ಹಾಗೂ ದೇಶ ವಿರೋಧಿ ಚಟುವಟಿಕೆಗಳ ಬಗ್ಗೆ ಚರ್ಚೆ ಸಹ ಆಗುತ್ತಿಲ್ಲ. ಅನ್ಯಧರ್ಮೀಯರ ಧರ್ಮಗುರುಗಳು ಈ ಬಗ್ಗೆ ಮಾತನಾಡಿರುವುದನ್ನು ನೀವು ಕೇಳಿದ್ದೀರಾ ಎಂದು ಯತ್ನಾಳ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಸರಣಿ ಪ್ರಶ್ನೆಗಳ ಟ್ವೀಟ್ ಅವರು ಮಾಡಿದ್ದಾರೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಯತ್ನಾಳ ಅವರು, ರಾಜ್ಯದಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದ್ದಕ್ಕೆ ಅನ್ಯಕೋಮಿನ ಧರ್ಮ ಗುರುಗಳು ಖಂಡಿಸಿದ್ದು ನೀವು ಕೇಳಿದ್ದೀರಾ, ಪಾಕಿಸ್ತಾನ ಧ್ವಜ ಹಾರಿಸಿದ್ದಕ್ಕೆ ಇವರ ಮೇಲೆ ಕ್ರಮ ಕೈಗೊಳ್ಳಿ ಎಂದು ಯಾವುದಾದರೂ ಕುಲಸಚಿವರಾಗಲಿ, ಕಾಲೇಜಿನ ಪ್ರಾಂಶುಪಾಲರಾಗಲಿ ಹೇಳಿದ್ದು ಕೇಳಿದ್ದೀರಾ. ಇಲ್ಲವೇ ರೈಲ್ವೆ ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್, ಬಂಡೆ ಕಲ್ಲು ಇಡುವುದು, ಆಹಾರ ಪದಾರ್ಥಗಳಲ್ಲಿ ಉಗುಳುವುದನ್ನು ಟೀಕಿಸಿದ್ದು ಕೇಳಿದ್ದೀರಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಅಷ್ಟೇ ಅಲ್ಲ ಮದರಸಾದಲ್ಲಿ ಗಣಿತ, ಕನ್ನಡ, ವಿಜ್ಞಾನ, ಸಮಾಜ ಹೇಳಿಕೊಡಬೇಕೆಂದು ಈ ಸಮಾಜದ ಮುಖಂಡರಾಗಲಿ, ಧರ್ಮಗುರುಗಳಾಗಲಿ ಹೇಳಿದ್ದು ಕೇಳಿದ್ದೀರಾ. ಮುಸಲ್ಮಾನ ಬಹುಸಂಖ್ಯಾತ ದೇಶಗಳಲ್ಲೇ ಇಲ್ಲದ ವಕ್ಫ್ ಎಂಬ ಪರಿಕಲ್ಪನೆ ಭಾರತದಲ್ಲೇಕೆ ಎಂದು ಯಾರಾದರೂ ಇಲ್ಲಿಯವರೆಗೆ ಪ್ರಶ್ನೆ ಮಾಡಿದ್ದಾರೆಯೇ. ನಮ್ಮ ಧರ್ಮದ ಯುವಕರು ಕಲ್ಲೆಸೆತ ಮಾಡುವುದು, ಬೇರೆ ಧರ್ಮದ ದೇವರುಗಳ ಅವಹೇಳನ ಮಾಡುವುದು, ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಬಾರದು ಎಂದು ಯಾವುದಾದರೂ ಧರ್ಮಗುರುಗಳು ಹೇಳಿದ ನಿದರ್ಶನ ಇದೆಯೇ ಎಂದು ಪ್ರಶ್ನೆ ಮಾಡಿರುವ ಅವರು ಹಿಂದೂ ಧರ್ಮ ಬಂದಾಗ ಮಾತ್ರ ಏಕೆ ನಿರ್ಬಂಧಗಳನ್ನು ವಿಧಿಸಲಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಹಿಂದೂ ಹಬ್ಬಗಳ ಬಗ್ಗೆ ಮಾತ್ರ ನಿರ್ಬಂಧವೇಕೆ
ಹಿಂದೂಗಳ ಹಬ್ಬಕ್ಕೆ ಮಾತ್ರ ನಿರ್ಬಂಧಗಳನ್ನು ಹೇರಲಾಗುತ್ತದೆ. ದೀಪಾವಳಿ ಆಚರಿಸಿದರೆ ವಾಯುಮಾಲಿನ್ಯ, ನಾಗಪಂಚಮಿ ಆಚರಿಸಿದರೆ ಮೌಢ್ಯ ಎಂದು, ಗಣಪತಿ ವಿಸರ್ಜನೆಯಲ್ಲಿ ಭಾಗವಹಿಸಿದರೆ ಶಿಸ್ತು ಕ್ರಮ, ಗಣಪತಿ ಪ್ರಸಾದಕ್ಕೆ ನಿಯಮಾವಳಿ ಹಾಗೂ ಗಣಪತಿ ಕೂರಿಸುವುದಕ್ಕೆ ನಿಯಮಾವಳಿ ಮಾಡಲಾಗುತ್ತಿದೆ. ಇದು ಕಾಂಗ್ರೆಸ್ ಸರ್ಕಾರ ಹಿಂದೂಗಳಿಗೆ ಕೊಟ್ಟಿರುವ ಸ್ವಾತಂತ್ರ್ಯ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ ಮತದಾನದ ದಿನದಂದು ಮೈ ಮರೆಯದಿರಿ ಎಂದೂ ಹೇಳಿದ್ದಾರೆ.
ಭಾಗವಹಿಸಬೇಡಿ ಎಂದು ಹೇಳುವುದಕ್ಕೆ ಇವರು ಯಾರು ?
ಕೋಮು ಗಲಭೆ ಮಾಡುತ್ತಿರುವುದು ದ್ವೇಷದ ಭಾವನೆ ತುಂಬಿಕೊಂಡಿರುವ ರೋಗಗ್ರಸ್ತ ಮನಃಸ್ಥಿತಿಯವರು. ಗಣಪತಿ ಮೆರವಣಿಗೆಯಲ್ಲಿ ಭಾಗವಹಿಸಬಾರದು ಎಂದು ವಿದ್ಯಾರ್ಥಿಗಳಿಗೆ ಫರ್ಮಾನು ಹೊರಡಿಸುವುದಕ್ಕೆ ಇವರಿಗೇನು ಅಧಿಕಾರವಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಮನವಿ ಮಾಡಲಿ. ಅದನ್ನು ಬಿಟ್ಟು ಹಿಂದೂ ಆಚರಣೆಗಳಿಗೆ ನಿರ್ಬಂಧ ಹೇರುವುದು ಮೂರ್ಖತನದ ಪರಮಾವಧಿ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಸಚಿವೆಯ ಆದೇಶದ ಬಗ್ಗೆಯೂ ಕಿಡಿಕಾರಿದ್ದಾರೆ.












Click it and Unblock the Notifications