Siddaramaiah: ಸವಾಲುಗಳ ರಾಜಕೀಯ ಹಾದಿಯಲ್ಲಿ ಸಿಎಂ ಸಿದ್ದರಾಮಯ್ಯ ದರ್ಬಾರ್..!

ಬೆಂಗಳೂರು, ಸೆಪ್ಟೆಂಬರ್‌ 09: ಸಾಮಾನ್ಯವಾಗಿ ಚುನಾವಣೆ ಕಳೆದು ಪಕ್ಷವೊಂದು ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಆರೋಪ ಪ್ರತ್ಯಾರೋಪದ ನಡುವೆ ಸರ್ಕಾರ ನಡೆಯುತ್ತಾ ಹೋಗುತ್ತದೆ. ಅದರಲ್ಲೂ ಬಹುಮತದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಐದು ವರ್ಷಗಳ ಕಾಲ ಯಾವುದೇ ಅಡೆತಡೆಯಿಲ್ಲದೆ ಸಾಗುತ್ತದೆ. ಆದರೆ ಅದ್ಯಾಕೋ ಗೊತ್ತಿಲ್ಲ ರಾಜ್ಯದಲ್ಲಿ ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ವಿಘ್ನಗಳು ಕಾಡುತ್ತಲೇ ಇದ್ದು, ಅಧಿಕಾರ ಹಿಡಿದು ವರ್ಷ ಪೂರೈಸಿದರೂ ಭಯ, ಆತಂಕ ದೂರವಾದಂತೆ ಕಾಣುತ್ತಿಲ್ಲ.

ಇದರ ನಡುವೆ ಹತ್ತು ಹಲವು ಸವಾಲ್ ಗಳನ್ನು ಎದುರಿಸಿ ಸಿಎಂ ಸಿದ್ದರಾಮಯ್ಯ ಮುನ್ನಡೆಯಬೇಕಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ವಿರುದ್ಧ ರಾಜಕೀಯ ಅಸ್ತ್ರಗಳನ್ನು ಬಳಸಿ, ಜತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಅಧಿಕಾರ ಹಿಡಿದ ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರ ನಡೆಸುತ್ತಿದ್ದರೂ ಅಲ್ಲಿಂದ ಇಲ್ಲಿ ತನಕ ಹೂವಿನ ಹಾದಿಯಲ್ಲಿ ಸಾಗಿ ಬಂದಂತೆ ಕಾಣುತ್ತಿಲ್ಲ. ಬದಲಾಗಿ ಮುಳ್ಳಿನ ಹಾದಿಯಲ್ಲಿ ಸರ್ಕಸ್ ಮಾಡುತ್ತಿರುವುದು ಗೋಚರಿಸುತ್ತಿದೆ.

What Are The Challenges Faced By Siddaramaiah After Coming To Power

ಸರ್ಕಾರದ ಬೊಕ್ಕಸದ ಬಹುತೇಕ ಪಾಲು ಗ್ಯಾರಂಟಿ ಯೋಜನೆಗಳಿಗೆ ಸಂದಾಯವಾಗುತ್ತಿದೆ. ಅದು ಅಭಿವೃದ್ಧಿ ಕಾಮಗಾರಿ ಮೇಲೆ ಪರಿಣಾಮ ಬೀರುತ್ತಿದೆ. ಇನ್ನು ಗ್ಯಾರಂಟಿ ಯೋಜನೆ ಪಡೆದರೂ ಜನ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುವುದು ನಿಂತಿಲ್ಲ. ರಾಜ್ಯದಲ್ಲಿ ಸುಮಾರು 136 ಸ್ಥಾನಗಳನ್ನು ಪಡೆದು ಅಧಿಕಾರ ಗಟ್ಟಿಯಾಗಿದ್ದರೂ ತಾವು ಕುಳಿತಿರುವ ಕುರ್ಚಿ ಮಾತ್ರ ಆಗಾಗ್ಗೆ ಅಲ್ಲಾಡುತ್ತಿರುವುದು ಸಿಎಂ ಸಿದ್ದರಾಮಯ್ಯರ ದುರಾದೃಷ್ಟವೇ

ಈ ಹಿಂದೆ 2013ರಲ್ಲಿ ಅಧಿಕಾರ ಹಿಡಿದು ಐದು ವರ್ಷಗಳ ಕಾಲ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಅವರಿಗೆ ಈ ಬಾರಿ ಅಷ್ಟೊಂದು ಸುಲಭವಾದಂತೆ ಕಾಣಿಸುತ್ತಿಲ್ಲ. ಕೇವಲ ಒಂದು ವರ್ಷದ ಅವಧಿಯಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುವಂತಾಗಿದೆ. ಭ್ರಷ್ಟಾಚಾರದ ಆರೋಪದಡಿ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡುವಂತಾಗಿದ್ದರೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಡಾ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ.

What Are The Challenges Faced By Siddaramaiah After Coming To Power

ಬಿಜೆಪಿ, ಜೆಡಿಎಸ್ ಒಂದಾಗಿ ಹೋರಾಟ

ಇನ್ನು ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಲೇ ಬರುತ್ತಿವೆ. ಸರ್ಕಾರ ಅಧಿಕಾರಕ್ಕೆ ಬಂದಲ್ಲಿಂದ ಇಲ್ಲಿವರೆಗೆ ವಿಪಕ್ಷಗಳು ಟೀಕೆ, ಟಿಪ್ಪಣಿ, ಆರೋಪ, ಹೋರಾಟ, ಪಾದಯಾತ್ರೆ, ಪ್ರತಿಭಟನೆ, ಹೀಗೆ ವಿಧಾನಸೌಧದ ಒಳಗೆ ಮತ್ತು ಹೊರಗೆ ಮಾಡುತ್ತಲೇ ಬರುತ್ತಿವೆ. ಆ ಮೂಲಕ ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧಿ ಅಲೆಯನ್ನು ಎಬ್ಬಿಸಲು ಬೇಕಾದ ಎಲ್ಲ ಅಸ್ತ್ರಗಳನ್ನು ಕೂಡಿ ಹಾಕಿಕೊಳ್ಳುತ್ತಿವೆ. ಬಹುಶಃ ಇಲ್ಲಿವರೆಗೆ ಆಡಳಿತ ನಡೆಸಿದ ಯಾವ ಮುಖ್ಯಮಂತ್ರಿಗಳಿಗೂ ಇಲ್ಲದ ಸವಾಲ್ ಈಗ ಸಿಎಂ ಸಿದ್ದರಾಮಯ್ಯ ಅವರ ಮುಂದಿದೆ.

ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮಂಕಾಗಿದ್ದ ಕಾಂಗ್ರೆಸ್ ಗೆ ಚೈತನ್ಯ ತುಂಬಿದ ಡಿ.ಕೆ.ಶಿವಕುಮಾರ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕಾಗಿದೆ. ಹೇಗಾದರೂ ಅಧಿಕಾರಕ್ಕೆ ಬರಲೇ ಬೇಕೆಂದು ಹಠಕ್ಕೆ ಬಿದ್ದು ಮೇಕೆದಾಟು ಯೋಜನೆಗೆ ಒತ್ತಾಯಿಸಿ ಪಾದಯಾತ್ರೆ ಆರಂಭಿಸುವ ಮೂಲಕ ಅವತ್ತಿನ ಬಿಜೆಪಿ ಸರ್ಕಾರದ ವಿರುದ್ಧ ರಾಜಕೀಯ ಹೋರಾಟ ಆರಂಭಿಸಿದ್ದರು. ಅದಾದ ನಂತರ ಪಾರ್ಟಿ ಪರ್ಸೆಂಟ್, ಪೇಸಿಎಂ ಹೋರಾಟಗಳು ಕಾಂಗ್ರೆಸ್ ಗೆ ಶಕ್ತಿ ತುಂಬಿತು.

What Are The Challenges Faced By Siddaramaiah After Coming To Power

'ಲೋಕಾ'ದಲ್ಲಿ ಕೈಹಿಡಿಯದ ಗ್ಯಾರಂಟಿ ಯೋಜನೆ

ಅವತ್ತು ಕಾಂಗ್ರೆಸ್ ರಾಜ್ಯದಾದ್ಯಂತ ಹೋರಾಟ ನಡೆಸುತ್ತಿದ್ದರೂ ಅದಕ್ಕೆ ತಕ್ಕ ಕೌಂಟರ್ ಕೊಡುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದರು. ಜತೆಜತೆಗೆ ಗ್ಯಾರಂಟಿ ಯೋಜನೆಗಳು ಭಾರೀ ಸದ್ದು ಮಾಡಿದ್ದವು. ಜನ ಆ ವಿಚಾರದಲ್ಲಿ ದೊಡ್ಡ ಮನಸ್ಸು ಮಾಡಿದ್ದರು. ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಮಹಿಳಾ ಮತದಾರರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅದು ಒಂದೊಳ್ಳೆಯ ಫಲಿತಾಂಶವನ್ನು ನೀಡಿತ್ತು. ಅದು ನಂತರದ ಲೋಕಸಭೆಯಲ್ಲಿಯೂ ಉತ್ತಮ ಫಲಿತಾಂಶ ನೀಡುತ್ತಿತ್ತೇನೋ? ಆದರೆ ಅಷ್ಟರಲ್ಲಿಯೇ ಬಿಜೆಪಿ ಮತ್ತು ಜೆಡಿಎಸ್ ಇದರ ಮರ್ಮ ಅರಿತು ಒಂದಾಗಿದ್ದರು.

ಸಿಎಂ ಸಿದ್ದರಾಮಯ್ಯ ಅವರನ್ನು ಪ್ರತಿ ಹಂತದಲ್ಲಿಯೂ ವಿಪಕ್ಷದ ನಾಯಕರು ಕಾಡುತ್ತಲೇ ಬಂದಿದ್ದರು. ಗ್ಯಾರಂಟಿ ಯೋಜನೆಗಳ ಲೋಪವನ್ನು ತೆರೆದಿಡುತ್ತಲೇ ಬರಲಾರಂಭಿಸಿದ್ದರು. ಸರ್ಕಾರದ ವಿರುದ್ಧ ಹತ್ತು ಹಲವು ಆರೋಪಗಳನ್ನು ಮಾಡುತ್ತಾ ಮುಂದುವರೆದರು. ಅದರಲ್ಲೂ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಕಾಂಗ್ರೆಸ್ ನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಿದರು. ಇದರ ಪರಿಣಾಮ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ನೀಡಿದ್ದರೂ ಅದರ ಪರಿಣಾಮ ಬೀರಲೇ ಇಲ್ಲ. ಕಾಂಗ್ರೆಸ್ ಎರಡಂಕಿಗೆ ಹೋಗಲೇ ಇಲ್ಲ.

ಸಿಎಂ ಹಾದಿ ತುಂಬಾ ಬರೀ ಸವಾಲುಗಳೇ

ಇದೀಗ ಮೂಡಾ ಹಗರಣದ ಆರೋಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುತ್ತಿಕೊಂಡಿದೆ. ಇದರ ನಡುವೆ ಸ್ವಪಕ್ಷದವರೇ ಸಿಎಂ ಬದಲಾವಣೆ ವಿಚಾರವನ್ನು ತೇಲಿ ಬಿಡುತ್ತಿದ್ದಾರೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೆಲವು ನಾಯಕರು ತಾವು ಸಿಎಂ ಆಕಾಂಕ್ಷಿ ಎಂಬುದನ್ನು ಹೊರಗೆಡವುತ್ತಿದ್ದಾರೆ. ಇದೆಲ್ಲದರ ನಡುವೆ ಡಿ.ಕೆ.ಶಿವಕುಮಾರ್ ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆಯೂ ಹಲವು ಕಣ್ಣಿಟ್ಟಿದ್ದಾರೆ. ಇದೆಲ್ಲದರ ನಡುವೆ ಕಾಂಗ್ರೆಸ್ ನ ಶಾಸಕರು ಸಚಿವರು ಆಪರೇಷನ್ ಕಮಲದ ಆತಂಕವನ್ನು ಹೊರ ಹಾಕುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯನವರಿಗೆ ಪ್ರತಿ ದಿನವೂ ಸವಾಲ್ ಗಳನ್ನು ಎದುರಿಸಿಕೊಂಡು ಆಡಳಿತ ನಡೆಸುವುದು ಅನಿವಾರ್ಯವಾಗಿದೆ. ಸ್ವಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿರೋಧಪಕ್ಷದ ನಾಯಕ ಟೀಕೆಗಳನ್ನು ಎದುರಿಸಿ, ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಿಕೊಂಡು ಅಭಿವೃದ್ಧಿ ಕಾರ್ಯಗಳತ್ತ ಚಿತ್ತ ಹರಿಸುತ್ತಾ ಮುನ್ನಡೆಯ ಬೇಕಾಗಿದೆ. ಅದರ ಜತೆಗೆ ಸರ್ಕಾರದಲ್ಲಿ ಕೇಳಿ ಬಂದಿರುವ ವಾಲ್ಮೀಕಿ ಹಗರಣ ಮತ್ತು ಸ್ವತಃ ತಮ್ಮ ಮೇಲೆ ಬಂದಿರುವ ಮೂಡಾ ಹಗರಣದಿಂದಲೂ ಮುಕ್ತರಾಗಬೇಕಾಗಿದೆ. ಇದೆಲ್ಲವನ್ನು ನೋಡಿದರೆ ಸಿದ್ದರಾಮಯ್ಯರಿಗೆ ಮುಂದಿನ ಹಾದಿ ಸವಾಲಿನದ್ದಾಗಿದ್ದು, ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+