Breaking; ವಾರಾಂತ್ಯ ಕರ್ಫ್ಯೂ, ಬಿಜೆಪಿಯ ಮಹತ್ವದ ಸಭೆ ಮುಂದೂಡಿಕೆ
ಬೆಂಗಳೂರು, ಜನವರಿ 06; ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರ ವಾರಾಂತ್ಯದ ಕರ್ಫ್ಯೂ ಸೇರಿದಂತೆ ವಿವಿಧ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ವಾರಾಂತ್ಯದ ಕರ್ಫ್ಯೂ ಹಿನ್ನಲೆಯಲ್ಲಿ ಕರ್ನಾಟಕ ಬಿಜೆಪಿಯ ಮಹತ್ವದ ಸಭೆ ಮುಂದೂಡಿಕೆಯಾಗಿದೆ. ಚಿಕ್ಕಬಳ್ಳಾಪುರದಲ್ಲಿರುವ ನಂದಿ ಗಿರಿಧಾಮದಲ್ಲಿ ಈ ಸಭೆ ನಿಗದಿಯಾಗಿತ್ತು. ರಾಷ್ಟ್ರೀಯ ನಾಯಕರಿಗೆ ಸಹ ಆಹ್ವಾನ ನೀಡಲಾಗಿತ್ತು.
ಕರ್ನಾಟಕ ಬಿಜೆಪಿ ನಾಯಕರ ಸಭೆ ಜನವರಿ 7 ರಿಂದ 9ರ ತನಕ ನಿಗದಿಯಾಗಿತ್ತು. 2023ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಈ ಚಿಂತನಾ ಸಭೆ ಆಯೋಜನೆ ಮಾಡಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸಹ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು.

ರಾಜ್ಯದ ಬಿಜೆಪಿ ಸರ್ಕಾರ ಮತ್ತು ಪಕ್ಷದ ಕುರಿತು ಹಲವಾರು ವಿಚಾರಗಳನ್ನು ಚರ್ಚಿಸಲು ಬಿಜೆಪಿ ಕರೆಯಲಾಗಿತ್ತು. ಜೆ. ಪಿ. ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಬೇಕಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಸಚಿವರು, ಪಕ್ಷದ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು.
ಹೈಕಮಾಂಡ್ ನಾಯಕರು ಸಚಿವರ ಮೌಲ್ಯ ಮಾಪನದ ಬಗ್ಗೆ ವರದಿ ತರಿಸಿಕೊಂಡಿದ್ದಾರೆ. ಈ ಸಭೆಯಲ್ಲಿ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇತ್ತು. ಆದರೆ ಸಭೆ ಮುಂದೂಡಿಕೆಯಾಗಿದ್ದು ಸಚಿವರಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ.
ಕರ್ನಾಟಕ ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ 50 ಜನಕ್ಕಿಂತ ಹೆಚ್ಚು ಜನರು ಸೇರುವ ಯಾವುದೇ ಸಭೆ-ಸಮಾರಂಭ ನಡೆಸುವಂತಿಲ್ಲ. ಮದುವೆಗೆ ಒಳಾಂಗಣದಲ್ಲಿ 100, ಹೊರಾಂಗಣದಲ್ಲಿ 200 ಜನರಿಗೆ ಅವಕಾಶ ನೀಡಲಾಗಿದೆ.
ಅಲ್ಲದೇ ಬಿಜೆಪಿಯ ಸಭೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ನಿಗದಿಯಾಗಿತ್ತು. ವಾರಾಂತ್ಯದ ಕರ್ಫ್ಯೂ ಹಿನ್ನಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ. ಕೋವಿಡ್ ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಸಭೆ ನಡೆಯುವ ನಿರೀಕ್ಷೆ ಇದೆ.












Click it and Unblock the Notifications