ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
ಬೆಂಗಳೂರು: ಲೈಸನ್ಸ್ ಇಲ್ಲದೇ ಬಂದೂಕು ಹೊಂದಿರುವವರು ತಮ್ಮ ವ್ಯಾಪಿಗೆ ಬರುವ ಪೊಲೀಸ್ ಠಾಣೆಗೆ ನವೆಂಬರ್ 1 ರೊಳಗೆ ಬಂದೂಕನ್ನು ವಶಕ್ಕೆ ನೀಡುವಂತೆ ಅರಣ್ಯದಂಚಿನಲ್ಲಿ ವಾಸಿಸುತ್ತಿರುವವರಿಗೆ ನಾನು ಮನವಿ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ವಿಧಾನ ಸಭೆಯಲ್ಲಿಂದು ತಿಳಿಸಿದರು. ಮಧ್ಯಾಹ್ನ ವಿಧಾನ ಸಭೆಯಲ್ಲಿ ಕಸ್ತೂರಿ ರಂಗನ್ ವರದಿಗೆ ರಾಜ್ಯದ ನಿಲುವನ್ನು ಮಂಡಿಸುವ ವೇಳೆಯಲ್ಲಿ ಮಾತನಾಡಿದ ಸಂದರ್ಭದಲ್ಲಿ ಈ ವಿಷಯವನ್ನು ಡಿ ಕೆ ಶಿವಕುಮಾರ್ ಸದನದಲ್ಲಿ ತಿಳಿಸಿದರು.

weapons license: ಯಾರೂ ಪ್ರಾಣಿಗಳ ಬೇಟೆ ಮಾಡಬೇಡಿ
ಅರಣ್ಯದಂಚಿನಲ್ಲಿ ವಾಸಿಸುವ ಜನರಲ್ಲಿ ಕೆಲವರು ಲೈಸನ್ಸ್ ಇಲ್ಲದೇ ಬಂದೂಕು ಇಟ್ಟುಕೊಂಡು ಕಾಡು ಪ್ರಾಣೆಗಳನ್ನು ಭೇಟೆ ಆಡುತ್ತಿರುವುದು ಕಂಡುಬರುತ್ತಿದೆ. ಈಗ ಹೊಸ ತಂತ್ರಜ್ಞಾನದಿಂದ ಕಾಡಿನಲ್ಲಿ ಸಾವಿರಾರು ಕ್ಯಾಮೆರಾಗಳನ್ನು ಅರಣ್ಯ ಮತ್ತು ಪ್ರಾಣಿಗಳ ರಕ್ಷಣೆಗಾಗಿ ಅಳವಡಿಸಲಾಗಿದೆ. ಆದ್ದರಿಂದ ಸುಮ್ಮನೆ ಯಾರೋ ಹೇಳಿದರೆಂದು ಕಾಡಿಗೆ ಹೋಗಿ ಪ್ರಾಣಿಗಳ ಬೇಟೆಗೆ ಮಾಡಬೇಡಿ.
ಬೇಟೆಗೆ ನಿಮ್ಮನ್ನು ಪ್ರಚೋದಿಸುವವರಿದ್ದರೆ, ಇನ್ನು ಕೆಲವರು ನಿಮ್ಮನ್ನು ಇದರಲ್ಲಿ ತಗಲಾಕುವವರಿರುತ್ತಾರೆ. ಆದ್ದರಿಂದ ಯಾರೂ ಪ್ರಾಣಿಗಳ ಬೇಟೆ ಮಾಡಬೇಡಿ ಎಂದು ಸದನದ ಮೂಲಕ ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದರು. ಶಾಸಕರುಗಳು ಕೂಡ ತಮ್ಮ ಕ್ಷೇತ್ರದ ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಬಂದೂಕಿನ ಅವಶ್ಯಕತೆ ಇರುವವರಿಗೆ ಸರ್ಕಾರದಿಂದ ಪರವಾನಗಿ ನೀಡಲಾಗುವುದು ಎಂದರು.
ಕಸ್ತೂರಿ ರಂಗನ್ ವರದಿ; ಹಿರಿಯ ವಕೀಲರ ನೇಮಕ
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ನಲ್ಲಿ ರಾಜ್ಯದ ಸ್ಪಷ್ಟ ಅಭಿಪ್ರಾಯ ಮಂಡಿಸಲು ಹಿರಿಯ ವಕೀಲರನ್ನು ನೇಮಿಸಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಮಂಗಳವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಸಿಎಂ ಮಂಗಳವಾರ ಉತ್ತರಿಸಿದರು.
ನನಗಿರುವ ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು ಕಸ್ತೂರಿ ರಂಗನ್ ವರದಿ ಜಾರಿ ಹಿನ್ನೆಯಲ್ಲಿ ಕೇಂದ್ರ ಸರ್ಕಾರವನ್ನು ಅಂತಿಮ ಅಧಿಸೂಚನೆ ಹೊರಡಿಸುವ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ. ಅಧಿಸೂಚನೆ ಹೊರಡಿಸಿದ ನಂತರ ತನ್ನ ಗಮನಕ್ಕೆ ತರುವಂತೆ ಹೇಳಿದೆ. ಆದರೆ, ಮಂಡಳಿಯು ಪಶ್ಚಿಮಘಟ್ಟವನ್ನು ಹಂಚಿಕೊಂಡಿರುವ ರಾಜ್ಯದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದರು.
ಹಾಗಂತ ಕಸ್ತೂರಿ ರಂಗನ್ ಸಮಿತಿಯು ಮಾಡಿರುವ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳ ಶಿಫಾರಸ್ಸನ್ನು ನಾವು ಅಗೌರವಿಸುತ್ತಿಲ್ಲ. ಬದಲಾಗಿ, ಅದನ್ನು ನಮ್ಮ ರಾಜ್ಯದ ಹಿತದೃಷ್ಟಿ ಇಟ್ಟುಕೊಂಡು ವೈಜ್ಞಾನಿಕ ಹಾದಿಯಲ್ಲಿ ಪರಿಷ್ಕರಿಸಿ ಎಂದು ಮನವಿ ಮಾಡುತ್ತಿದ್ದೇವೆ ಎಂದರು. ಡ್ರೋಣ್ ಸರ್ವೇ ಮಾಡಿಸಿದರೆ ಎಲ್ಲವೂ ಹಸಿರು ಕಾಣುತ್ತದೆ ಎನ್ನುವ ವಿಚಾರ ಸದನದಲ್ಲಿ ಪ್ರತಿಧ್ವನಿಸಿದೆ. ಹಾಗಾಗಿ, ರೆವಿನ್ಯೂ ಇಲಾಖೆಯ ಮೂಲಕ ಸರ್ವೇ ಮಾಡಿಸಬೇಕಾಗುತ್ತದೆ ಎಂದು ತಿಳಿಸಿದರು.


Click it and Unblock the Notifications
