CM Siddaramaiah: ಕಾವೇರಿ ನೀರು ತಮಿಳುನಾಡಿಗೆ ನೀಡಲು ನಮ್ಮ ಬಳಿ ನೀರಿಲ್ಲ: ಸಿದ್ದರಾಮಯ್ಯ
ಮೈಸೂರು, ಜೂನ್ 11: ಕಾವೇರಿ ನೀರು ತಮಿಳುನಾಡಿಗೆ ನೀಡಲು ನಮ್ಮ ಬಳಿ ನೀರಿಲ್ಲ. ಕೊಡಬಾರದು ಎಂದೇನಿಲ್ಲ. ಆದರೆ ನಮಗೇ ಕೊರತೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರುನಲ್ಲಿ ಕೆಡಿಪಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ನಮಗೆ ಕುಡಿಯುವ ನೀರು, ನಮ್ಮ ಬೆಳೆಗಳಿಗೆ ನೀರು ಕೊಡುವುದು ಮುಖ್ಯ. ನಮಗೇ ನೀರಿಲ್ಲದಿದ್ದರೆ ತಮಿಳುನಾಡಿಗೆ ಕೊಡುವ ಪ್ರಶ್ನೆಯೇ ಇಲ್ಲ. ನಮಗೆ ನೀರಿಲ್ಲ ಎಂದರು.

ಮುಡಾ ಕ್ಕೆ ಸಂಬಂಧಿಸಿದಂತೆ ಮೂರು ತಿಂಗಳಿಂದ ಆಗಿರುವ ತೀರ್ಮಾನಗಳನ್ನು ತಡೆ ಹಿಡಿಯಲು ಸೂಚಿಸಲಾಗಿದೆ. ಮುಂಗಾರು ವಿಳಂಬವಾಗಿರುವುದರಿಂದ ಕುಡಿಯುವ ನೀರು, ಬಿತ್ತನೆ ಮಾಡಿರುವ ಬೆಳೆಗಳ ರಕ್ಷಣೆ ಮಾಡಲಿ ಸೂಚಿಸಲಾಗಿದೆ ಎಂದರು.
ಮಂಗಳೂರು, ಉಡುಪಿ, ರಾಯಚೂರು, ಕೊಪ್ಪಳಗಳಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಬಾರದು ಎಂದು ತಿಳಿಸಲಾಗಿದೆ. ಮೈಸೂರಿನಲ್ಲಿ ನೀರಿನ ತೊಂದರೆಯಾದರೆ ಸೂಕ್ತ ಯೋಜನೆ ತಯಾರು ಮಾಡಬೇಕು ಎಂದು ಸೂಚಿಸಿದೆ. ಜನರೊಂದಿಗೆ ಸೌಜನ್ಯ ದಿಂದ ವರ್ತಿಸಬೇಕು. ಹಿರಿಯ ಅಧಿಕಾರಿಗಳು ಕೆಳಗಿನ ಕಚೇರಿಗಳಿಗೆ ಆಗಾಗ್ಗೆ ಭೇಟಿ ನೀಡಿ, ಕ್ಷೇತ್ರ ಭೇಟಿಯನ್ನೂ ಮಾಡಲು ಸೂಚಿಸಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾವು ಅಧಿಕಾರಕ್ಕೆ ಬಂದರೆ ವರುಣಾ ಕ್ಷೇತ್ರವನ್ನು ತಾಲ್ಲೂಕು ಮಾಡುತ್ತೇವೆ ಎಂದು ಹೇಳಿದ್ದರು. ಇದನ್ನು ಜನ ಕೇಳಿಲ್ಲ. ವರುಣಾ ಕ್ಷೇತ್ರದಲ್ಲಿ ನಾನು ಮೂರು ದಿನ ಪ್ರಚಾರ ಮಾಡಿದ್ದೇನೆ ಎಲ್ಲಿಯೂ ಜನ ಕೇಳಿಲ್ಲ. ಬಸವರಾಜ ಬೊಮ್ಮಾಯಿ ಕೇಳಿದ ತಕ್ಷಣ ಇದನ್ನು ಮಾಡುವುದಿಲ್ಲ. ವರುಣಾ ಕ್ಷೇತ್ರದ ಜನ ಕೇಳಿದರೆ ಮಾಡುತ್ತೇವೆ ಎಂದರು.
ಪಿ.ಎಸ್.ಐ ಹಾಗೂ 40 % ಆರೋಪದ ಬಗ್ಗೆ ಸರ್ಕಾರ ತನಿಖೆ ಮಾಡಲಿ ಎಂದು ಮಾಜಿ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರು ಕೇಳಿ ನಾವು ಮಾಡಬೇಕಿಲ್ಲ. ಸಾಕ್ಷಿಗಳ ಆಧಾರದ ಮೇಲೆ ಖಂಡಿತವಾಗಿಯೂ ಮಾಡುತ್ತೇವೆ ಎಂದರು. ಪಿ.ಎಸ್.ಐ ಹಗರಣದ ತನಿಖೆ ಈಗಾಗಲೇ ನಡೆಯುತ್ತಿದ್ದು ಎಡಿಜಿಪಿ ಪೌಲ್ ಈಗಾಗಲೇ ಜೈಲಿನಲ್ಲಿದ್ದಾರೆ. ಇನ್ನು ಹಲವರ ಮೇಲೆ ತನಿಖೆ ನಡೆಯುತ್ತಿದೆ ಎಂದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ತಮಗೆ ಬೇಕಾದವರಿಗೆ ಭೂಮಿ ನೀಡಿರುವ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಮಾಹಿತಿ ಸಂಗ್ರಹಿಸಲು ತಿಳಿಸಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನುಡಿದಂತೆ ನಡೆವ ಸರ್ಕಾರ ನಮ್ಮದು. ಬಿಜೆಪಿಯಂತೆ ಸುಳ್ಳು ಹೇಳುವುದಿಲ್ಲ ಎಂದರು.












Click it and Unblock the Notifications