Jagadish Shettar: ಜಗದೀಶ್ ಶೆಟ್ಟರ್‌ಗೆ ನಾವು ಟಿಕೆಟ್ ನಿರಾಕರಿಸಿರಲಿಲ್ಲ ಎಂದ ಮಹೇಶ್ ಟೆಂಗಿನಕಾಯಿ
ಬೆಂಗಳೂರು, ಏಪ್ರಿಲ್. 27: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿರಲಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ. ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಶೆಟ್ಟರ್ ಅವರನ್ನು ಬಿಟ್ಟು ಮಹೇಶ್ ಟೆಂಗಿನಕಾಯಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಮುಖಂಡ ಮಹೇಶ್ ಟೆಂಗಿನಕಾಯಿ, ಪಕ್ಷ ಅವರಿಗೆ ಟಿಕೆಟ್ ನಿರಾಕರಿಸಿರಲಿಲ್ಲ, ಆದರೆ ಅವರು ಪಕ್ಷದ ಪ್ರಸ್ತಾಪವನ್ನು ನಿರಾಕರಿಸಿದರು. ಬಿಜೆಪಿ ಹೈಕಮಾಂಡ್ ನಿರ್ಧಾರಗಳು ಯಾರ ವೈಯಕ್ತಿಕ ಲಾಭವನ್ನೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಮಹೇಶ ಟೆಂಗಿನಕಾಯಿ ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಭಾರಿ ಪ್ರಚಾರ ನಡೆಸುತ್ತಿರುವು ಅವರು ತಮ್ಮ ಎದುರಾಳಿ ಜಗದೀಶ್ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿಂದೆ ಮಹೇಶ್ ಟೆಂಗಿನಕಾಯಿ ಅವರು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಭೇಟಿ ನೀಡಿ ಮನ್ಮಹಾರಾಜ ನಿರಂಜನ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ, "ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಟಿಕೆಟ್ ನಿರಾಕರಿಸಿರುವುದು ಸುಳ್ಳು. ಪಕ್ಷವು ಈಶ್ವರಪ್ಪ, ರಘುಪತಿ ಭಟ್ ಮತ್ತು ರಾಮದಾಸ್‌ಗೆ ಟಿಕೆಟ್ ನಿರಾಕರಿಸಿದೆ. ಆದರೆ ಪಕ್ಷದ ಪ್ರಸ್ತಾಪವನ್ನು ಶೆಟ್ಟರ್ ನಿರಾಕರಿಸಿದ್ದಾರೆ. ಪಕ್ಷವು ಹಿರಿಯ ನಾಯಕರಿಗೆ ದೊಡ್ಡ ಸ್ಥಾನವನ್ನು ನೀಡಲು ಬಯಸಿದೆ. ಜಗದೀಶ್ ಶೆಟ್ಟರ್‌ಗೂ ಇದೇ ಆಫರ್ ನೀಡಲಾಗಿತ್ತು. ಆದರೆ ಅವರೇ ಪ್ರಸ್ತಾಪ ತಿರಸ್ಕರಿಸಿ ಕಾಂಗ್ರೆಸ್ ಸೇರಿದರು" ಎಂದು ಮಾಹಿತಿ ನೀಡಿದ್ದಾರೆ.

ಮಹೇಶ್ ಟೆಂಗಿನಕಾಯಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿದ್ದು, ಜಗದೀಶ್ ಶೆಟ್ಟರ್ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಶೆಟ್ಟರ್ ಅವರನ್ನು ಸೋಲಿಸಲು ಪಣ ತೊಟ್ಟಿರುವ ಮಾಜಿ ಸಿಎಂ ಯಡಿಯೂರಪ್ಪ ಕೂಡ ಹುಬ್ಬಳ್ಳಿ ಭಾಗದಲ್ಲಿ ಭಾರಿ ಪ್ರಚಾರ ನಡೆಸುತ್ತಿದ್ದಾರೆ.
ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಬೇಕು, ಮಹೇಶ್ ಟೆಂಗಿನಕಾಯಿ ಅವರನ್ನು ಗೆಲ್ಲಿಸಬೇಕು ಎಂದಿರುವ ಅವರು, ಜಗದೀಶ್ ಶೆಟ್ಟರ್ ಬಿಜೆಪಿ ಹಾಗೂ ಪಕ್ಷದ ಸದಸ್ಯರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನೆಲ್ಲ ಸ್ವಾರ್ಥದಿಂದ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಸೋತು ಮನೆಗೆ ಹೋಗ್ತಾರೆ, ಮಹೇಶ್ ತೆಂಗಿನಕಾಯಿ ಗೆದ್ದು ನಿಮ್ಮ ಸೇವೆ ಮಾಡ್ತಾರೆ. ನಾನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಗೆ ಮಾತು ಕೊಟ್ಟು ಬಂದಿದ್ದೇನೆ. 150 ಸ್ಥಾನದಲ್ಲಿ ಗೆದ್ದು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications