Waqf: 'ಮಕ್ಕಳ ಕೈಯಲ್ಲಿ ಪೆನ್ನು ಬದಲು ತಲ್ವಾರ್ ಕೊಡಿ' ಎಂದ ಮರುಳಾರಾಧ್ಯ ಸ್ವಾಮೀಜಿ ವಿರುದ್ಧ ಜಿ ಪರಮೇಶ್ವರ್ ಕ್ರಮ
ಬೆಂಗಳೂರು ನವೆಂಬರ್ 11: 'ಮಕ್ಕಳ ಕೈಯಲ್ಲಿ ಪೆನ್ನು ಬದಲು ತಲ್ವಾರ್ ಕೊಡಿ' ಎಂದು ಮರುಳಾರಾಧ್ಯ ಸ್ವಾಮೀಜಿ ವಿವಾದಾತ್ಮಕ ಹೇಳಿಕೆಗೆ ಖಂಡನೆ ವ್ಯಕ್ತವಾಗಿದೆ. ಗೃಹ ಸಚಿವ ಜಿ ಪರಮೇಶ್ವರ್ ಅವರು ಸ್ವಾಮೀಜಿ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ವಾಮೀಜಿ ಹೇಳಿಕೆ ಸ್ವೀಕಾರಕ್ಕೆ ಅರ್ಹವಲ್ಲ ಎಂದಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ ಪರಮೇಶ್ವರ್ ಅವರು,'ಮರುಳಾರಾಧ್ಯ ಸ್ವಾಮೀಜಿಗಳು ಧರ್ಮವಾಗಿ ನಡೆದುಕೊಳ್ಳಬೇಕು. ಪ್ರಚೋದನಕಾರಿ ಮಾತುಗಳನ್ನು ಆಡಬಾರದು. ಸ್ವಾಮೀಜಿ ಸಮಾಜವನ್ನು ತಿದ್ದಬೇಕು. ದಾರಿ ತಪ್ಪಿದರೆ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು. ಅದನ್ನು ಬಿಟ್ಟು ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡುವುದು ತರವಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ' ಎಂದಿದ್ದಾರೆ. ಈ ಸಂಬಂಧ ಕಲಬುರಗಿಯಲ್ಲಿ ಎಫ್‌ಐಆರ್ ಕೂಡ ದಾಖಲಿಸಲಾಗಿದೆ. ಹಾಗಾದರೆ ಮರುಳಾರಾಧ್ಯ ಸ್ವಾಮೀಜಿ ಹೇಳಿದ್ದೇನು?

ಮರುಳಾರಾಧ್ಯ ಸ್ವಾಮೀಜಿ ಹೇಳಿದ್ದೇನು?
ಇಂದು ಕಲಬುರಗಿ ಜಿಲ್ಲೆಯಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿರುವುದನ್ನು ತೆಗೆದು ಹಾಕುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪೊಲೀಸರ ಮುಂದೆಯೇ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಾಶಾಳದ ಶ್ರೀ ಮುರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಭಟನೆ ವೇಳೆ, 'ಮಕ್ಕಳ ಕೈಯಲ್ಲಿ ಪೆನ್ನು ಬದಲು ತಲ್ವಾರ್ ಕೊಡಿ' ಎನ್ನುವ ಮೂಲಕ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಹೌದು... ಇಂದು ರೈತರ ಭೂಮಿಯ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿರುವುದನ್ನು ತೆಗೆದುಹಾಕುವಂತೆ ಒತ್ತಾಯಿಸಿ ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ 'ವಕ್ಫ್ ಹಠಾವೋ ದೇಶ ಬಚಾವೊ' ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸ್ವಾಮೀಜಿ ಪೊಲೀಸರ ಮುಂದೆಯೇ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.
'ಎಲ್ಲಾ ಯುವಕರ ಮನೆಯಲ್ಲಿ ತಲ್ವಾರ್‌ಗಳಿವೆ. ಯಾರು ಬರುತ್ತಾರೋ ಅವರನ್ನು ಕಡಿಯುತ್ತೇವೆ ಎನ್ನುತ್ತಿದ್ದಾರೆ ಅವರ (ಅಲ್ಪಸಂಖ್ಯಾತರು).ಭಾರತ ದೇಶವನ್ನು ಪಾಕಿಸ್ತಾನ ಮಾಡುತ್ತೇವೆ ಎನ್ನುತ್ತಿದ್ದಾರೆ. ಇನ್ನೂ ಎಚ್ಚೆತ್ತುಕೊಳ್ಳದೇ ಇದ್ದರೆ ಭಾರತ ದೇಶವೇ ಇರಲ್ಲ. ಇನ್ಮುಂದೆ ಮಕ್ಕಳ ಕೈಯಲ್ಲಿ ಪೆನ್ನು ಬದಲಿಗೆ ತಲ್ವಾರ್ ಕೊಡೋಣ' ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ವಕ್ಫ್ ಕಾಯ್ದೆ ರದ್ದಾಗದಿದ್ದರೆ ಜೀವ ತೆಗೆಯಲು, ಜೀವ ಕೊಡಲು ಸಿದ್ದರಿದ್ದೇವೆ ಎಂದಿದ್ದಾರೆ.
ಸರ್ಕಾರದ ಮಹತ್ವದ ಆದೇಶ:
ವಕ್ಫ್ ಮಂಡಳಿ ಆಸ್ತಿ ಗುರುತಿಸುವಿಕೆ ಕರ್ನಾಟಕದಲ್ಲಿ ವಿವಾದವನ್ನು ಸೃಷ್ಟಿಸಿದೆ. ಕೆರೆ, ಪ್ರವಾಸಿ ತಾಣಗಳು, ರೈತರ ಜಮೀನುಗಳನ್ನು ವಕ್ಫ್ ಮಂಡಳಿ ಆಸ್ತಿ ಎಂದು ಪಹಣಿಯಲ್ಲಿ ತೋರಿಸಲಾಗಿದ್ದು, ಇದಕ್ಕೆ ಜನಾಕ್ರೋಶ ವ್ಯಕ್ತವಾಗಿದೆ. ಪ್ರತಿಪಕ್ಷ ಬಿಜೆಪಿ ಇದನ್ನು ಮುಂದಿಟ್ಟುಕೊಮಡು ಸರ್ಕಾರದ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಅಲ್ಲದೆ ರೈತರ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿರುವುದನ್ನು ತೆಗೆದು ಹಾಕುವಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯನ್ನು ನಡೆಸಿ ಕೆಲ ಸೂಚನೆಗಳನ್ನು ಹೊರಡಿಸಿದ್ದಾರೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಮ್ಯುಟೇಷನ್ ಮಾಡಲು ಯಾವುದೇ ಕಛೇರಿ ಅಥವಾ ಯಾವುದೇ ಪ್ರಾಧಿಕಾರದಿಂದ ನೀಡಲಾದ ನಿರ್ದೇಶನಗಳನ್ನು ತಕ್ಷಣದಿಂದಲೇ ಹಿಂಪಡೆಯುವುದು ಹಾಗೂ ಮ್ಯುಟೇಷನ್ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸುವುದು. ಈ ಕುತಿರು ನೀಡಲಾದ ಎಲ್ಲಾ ನೋಟೀಸುಗಳನ್ನು ಹಿಂಪಡೆಯುವುದು, ಸದರಿ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರುಗಳ ವಿರುದ್ಧ ಯಾವುದೇ ಕ್ರಮವನ್ನು ಜರುಗಿಸತಕ್ಕದಲ್ಲ ಎಂದು ಹೇಳಿದ್ದಾರೆ. ಆದರೂ ಕೂಡ ರಾಜ್ಯದಲ್ಲಿ ಪ್ರತಿಭಟನೆಗಳು ಮುಂದುರೆದಿವೆ.












Click it and Unblock the Notifications