• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Voters Data Theft: ಬಿಜೆಪಿಯವರು ಸೋಲಿನ ಭಯಕ್ಕೆ ಈ ರೀತಿ ಮಾಡಿದ್ದಾರೆ: ಸಿದ್ದು

|
Google Oneindia Kannada News

ಬೆಂಗಳೂರು, ನೆವಂಬರ್ 26: ಯಾವುದೇ ಚುನಾವಣೆ ಸಂವಿಧಾನದ ರೀತಿಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಈ ಕುರಿತು ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆ ಇರಬೇಕು ಅದನ್ನು ತಿರುಗಿಸುವ ಕೆಲಸಕ್ಕೆ ಅವಕಾಶ ನೀಡಬಾರದು. ಆದರೆ ಬಿಜೆಪಿ ಸರ್ಕಾರ ಖಾಸಗಿ ಸಂಸ್ಥೆ ಮೂಲಕ ಮತದಾರರ ಪಟ್ಟಿಯನ್ನು ತಿರುಚಿಸಿದೆ. ಚಿಲುಮೆ ಸಂಸ್ಥೆಯನ್ನು ಜಿಲ್ಲಾ ಚುನಾವಣಾ ಅಧಿಕಾರಿ ನೇಮಿಸಿದ್ದು, ಇವರೇ ಬಿಬಿಎಂಪಿಯ ಮುಖ್ಯ ಆಯುಕ್ತರಾಗಿದ್ದಾರೆ. ಮುಖ್ಯಮಂತ್ರಿಗಳೇ ಬಿಬಿಎಂಪಿ ಉಸ್ತುವಾರಿಗಳಾಗಿದ್ದು ಅವರು ಕೂಡ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದೆವು. ಇದರ ಜೊತೆಗೆ ಮತದಾರರ ಪಟ್ಟಿಯನ್ನು ಮರುಪರಿಷ್ಕರಣೆ ಮಾಡಿ, ಕುಂದು ಕೊರತೆ ಅರ್ಜಿ ದಿನಾಂಕವನ್ನು ವಿಸ್ತರಿಸಬೇಕು. ಕಳುವಾಗಿರುವ ಮತದಾರರ ಮಾಹಿತಿಯನ್ನು, ತಿರುಚಲಾಗಿರುವ ಮತದಾರ ಪಟ್ಟಿಯನ್ನು ವಶಪಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು.

ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ ಮಾಡಿ ಅವುಗಳ ಕಳ್ಳತನ ನಡೆಯುತ್ತಿದೆ. ಈ ಮಾಹಿತಿಗಳನ್ನು ಚಿಲುಮೆ ಎಂಬ ಖಾಸಗಿ ಸಂಸ್ಥೆಯು ಕೆಲವು ರಾಜಕಾರಣಿಗಳಿಗೆ ಮಾರಾಟ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಈ ಸಂಸ್ಥೆಯು ಕಾನೂನುಬಾಹಿರವಾಗಿ ಬಿ ಎಲ್ ಓ ಗಳನ್ನು ನೇಮಕ ಮಾಡಿಕೊಂಡು ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಬೇಡವಾದವರ ಹೆಸರನ್ನು ಕೈ ಬಿಟ್ಟು ತಮಗೆ ಬೇಕಾದವರ ಹೆಸರನ್ನು ಸೇರಿಸಿಕೊಂಡಿದ್ದಾರೆ. ಈ ಕೆಲಸವನ್ನು ಬಿಜೆಪಿ ಹಾಗೂ ರಾಜ್ಯ ಸರ್ಕಾರ ಮಾಡಿದೆ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆವು.

ರಾಜ್ಯ ಚುನಾವಣಾ ಆಯೋಗದಿಂದ ನ್ಯಾಯ ಸಿಗುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ಸುರ್ಜೆವಾಲ ಅವರ ನೇತೃತ್ವದ ಕಾಂಗ್ರೆಸ್ ನಿಯೋಗವು ಭೇಟಿ ಮಾಡಿ ದೂರು ನೀಡಿತ್ತು.

ವಿಭಾಗೀಯ ಅಧಿಕಾರಿ ಮೂಲಕ ಈ ಪ್ರಕರಣದ ತನಿಖೆ ನಡೆದರೆ ಮುಖ್ಯಮಂತ್ರಿಗಳು ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ವಿಚಾರಣೆ ಆಗುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ.

ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಬದ್ಧವಾಗಿ ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗವನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಸ್ಥಾಪಿಸಲಾಗಿದೆ. ಇದರಲ್ಲಿ ಪ್ರಧಾನ ಮಂತ್ರಿಗಳಾಗಲಿ ಅಥವಾ ರಾಷ್ಟ್ರಪತಿಗಳಾಗಲಿ ಹಸ್ತಕ್ಷೇಪ ಮಾಡುವಂತಿಲ್ಲ.

ಈ ತಿಂಗಳ 23ರಂದು ನಮ್ಮ ನಿಯೋಗವು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡಿತ್ತು. ಆಯೋಗವು ನಮ್ಮ ದೂರನ್ನು ಅರಿತು ರಂಗಪ್ಪ ಹಾಗೂ ಶ್ರೀನಿವಾಸ್ ಎಂಬ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಇಬ್ಬರು ಬಿಬಿಎಂಪಿ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳಾಗಿದ್ದಾರೆ.

ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿಯ ಗಮನಕ್ಕೆ ಬಾರದೆ ಈ ಇಬ್ಬರು ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿ ಮಾಹಿತಿ ಕಳೆದು ಮಾಡಲು ಸಾಧ್ಯವೇ? ನಮ್ಮ ದೂರಿನಲ್ಲಿರುವ ಆರೋಪಗಳನ್ನು ಕೇಂದ್ರ ಚುನಾವಣಾ ಆಯೋಗವು ಅರಿತಿರುವ ಹಿನ್ನೆಲೆಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ಮಾಹಿತಿ ಕಳವು ಆಗದೆ, ಮತದಾರರ ಪಟ್ಟಿ ತಿರುಚದೆ, ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಹಾಗೂ ತೆಗೆದು ಹಾಕದೆ ಇದ್ದರೆ ಅಮಾನತುಗೊಳಿಸಲು ಸಾಧ್ಯವೇ? ಈ ಪ್ರಕರಣದಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಅವರು ಈ ಕ್ರಮಗಳನ್ನು ಕೈಗೊಂಡಿದ್ದಾರೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಆದರೆ ಈ ಪ್ರಕರಣವನ್ನು ಶಿವಾಜಿನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ಈ ಮೂರೂ ಕ್ಷೇತ್ರಗಳಿಗೆ ಮಾತ್ರ ಉಸ್ತುವಾರಿಯಾಗಿದ್ದ ಅಧಿಕಾರಿಗಳನ್ನು ಮಾತ್ರ ಅಮಾನತು ಮಾಡಿದ್ದಾರೆ. ನಂತರ ಮೂವರು ಐಎಎಸ್ ಆಫೀಸರ್ ಗಳನ್ನು ಈ ಕ್ಷೇತ್ರಗಳ ಉಸ್ತುವಾರಿಯಾಗಿ ನೇಮಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿನ ಆಕ್ಷೇಪಗಳನ್ನು ಸಲ್ಲಿಸಲು ಡಿಸೆಂಬರ್ 9 ರಂದು ಅಂತಿಮ ಗಡುವಾಗಿತ್ತು. ಆದರೆ ಈಗ 15 ದಿನಗಳ ಕಾಲಾವಧಿಯನ್ನು ವಿಸ್ತರಿಸಲಾಗಿದೆ. ಇನ್ನು ವೀಕ್ಷಕರಾಗಿ ಉಜ್ವಲ್ ಘೋಷ್ ಅವರನ್ನು ಬಿಬಿಎಂಪಿ ಕೇಂದ್ರಕ್ಕೆ, ರಾಮಚಂದ್ರನ್ ಆರ್ ಅವರನ್ನು ಬಿಬಿಎಂಪಿ ಉತ್ತರಕ್ಕೆ ಹಾಗೂ ರಾಜೇಂದ್ರ ಚೋಳನ್ ಅವರನ್ನು ಬಿಬಿಎಂಪಿ ದಕ್ಷಿಣಕ್ಕೆ, ಡಾಕ್ಟರ್ ಎನ್ ಮಂಜುಳಾ ಅವರನ್ನು ಬೆಂಗಳೂರು ನಗರ ವಿಭಾಗಕ್ಕೆ ನಿಮಿಸಲಾಗಿದೆ. ಇವರನ್ನು ಯಾಕೆ ನೇಮಿಸಲಾಗಿದೆ? ಕಾರಣ ಈ ಪ್ರಕರಣದಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಈ ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸಲಾಗಿದೆ.

28 ವಿಧಾನಸಭಾ ಕ್ಷೇತ್ರಗಳಲ್ಲೂ ಕೂಡ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುತ್ತೇನೆ.

ಬಿಜೆಪಿಯವರು ಸೋಲಿನ ಭಯದಿಂದ ಈ ರೀತಿ ಮಾಡಿದ್ದಾರೆ. ನಾವು ಈ ವಿಚಾರವನ್ನು ಪ್ರಸ್ತಾಪ ಮಾಡಿದರೆ, ಸಿದ್ದರಾಮಯ್ಯ ಅವರ ಕಾಲದಲ್ಲಿ ಆಗಿರಲಿಲ್ಲವೇ? ಎಂದು ಹೇಳುತ್ತಿದ್ದಾರೆ.

ನನ್ನ ಅವಧಿಯಲ್ಲಿ ನಾನು ಯಾವುದೇ ಸಂಸ್ಥೆಯು ಈ ರೀತಿಯ ಕ್ರಮ ನಡೆಸಲು ಆದೇಶ ನೀಡಿಲ್ಲ. ನನ್ನ ಅವಧಿಯ ನಂತರ 2018 ಹಾಗೂ 2019 ರ ಚುನಾವಣೆ ನಡೆದಿದೆ. ಈ ಚುನಾವಣೆಗಳಲ್ಲಿ ಬಿಜೆಪಿಯವರೇ ಶಾಸಕರಾಗಿದ್ದಾರೆ. ಹಾಗಿದ್ದರೆ ನೀವು ಕಿರುಚಿತ ಮತದಾರರ ಪಟ್ಟಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದೀರಾ?

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಅವಧಿಯಲ್ಲಿ ಇದಕ್ಕೆ ಅವಕಾಶ ನೀಡಿದ್ದರೆ ನನ್ನ ಅವಧಿ ಸೇರಿದಂತೆ ಎಲ್ಲಾ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಿ. ಇದರಲ್ಲಿ ಯಾವುದೇ ತಪ್ಪಿಲ್ಲ.

Voters Data Theft: BJP has done this for fear of defeat

ಇಂದಿನ ಸರ್ಕಾರ ಮಾಡಿರಲಿಲ್ಲವೆಂದು ಸಬೂಗೂ ಹೇಳುವ ರೋಗ ಬಿಜೆಪಿ ಸರ್ಕಾರಕ್ಕೆ ಅಂಟಿಕೊಂಡಿದೆ. ನೀವು ಅಧಿಕಾರದಲ್ಲಿದ್ದು, ರಾಜ್ಯದ ಜನರ ತೆರಿಗೆ ಹಣವನ್ನು ಖರ್ಚು ಮಾಡುತ್ತಿರುವವರು ನೀವು. ಲೂಟಿ ಹೊಡೆಯುತ್ತಿರುವವರು ನೀವು. ತನಿಖೆ ಮಾಡಿಸಿ. 2018ರಲ್ಲಿ ನೀವು ಹೇಳುತ್ತಿರುವ ತಿರುಚನಾದ ಮತದಾರರ ಪಟ್ಟಿಯ ಮೇಲೆ ಚುನಾವಣೆ ನಡೆದಿದೆಯಲ್ಲವೇ? ನನ್ನ ಪ್ರಕಾರ ಇದೆಲ್ಲವೂ ಕಪೋಕಲ್ಪಿತ ಆರೋಪ.

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಮುಖ ಕಿಂಗ್ ಪಿನ್ ಆಗಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಈ ಮೂರು ಕ್ಷೇತ್ರಗಳಲ್ಲಿ ಆಗಿರುವ ಅಧಿಕಾರಿಗಳ ಬದಲಾವಣೆಯಂತೆ ಕ್ರಮಗಳನ್ನು ಕೈಗೊಳ್ಳಬೇಕು.

ಮುಕ್ತ ಹಾಗೂ ನ್ಯಾಯ ಬದ್ಧ ರೀತಿಯಲ್ಲಿ ಚುನಾವಣೆ ನಡೆಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಯಾರಿಗೆ ಆಶೀರ್ವಾದ ಮಾಡುತ್ತಾರೆ ಅವರು ಅಧಿಕಾರ ನಡೆಸಲಿ. ಇದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಮೇಲ್ ಉಸ್ತುವಾರಿಯಲ್ಲಿ ಈ ಪ್ರಕರಣ ನ್ಯಾಯಾಂಗ ತನಿಖೆ ಆಗಬೇಕು. ಆಗ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ ನೀಡಬಹುದು. ಆಗ ಮಾತ್ರ ಚುನಾವಣಾ ಆಯೋಗದ ಮೇಲೆ ಜನರಿಗೆ ನಂಬಿಕೆ ಹಾಗೂ ವಿಶ್ವಾಸ ಮೂಡುತ್ತದೆ.

ಈ ರೀತಿಯಾಗಿ ಮತದಾನ ಮಾಹಿತಿಯ ಕಳವು ಯಾವ ಕಾಲದಲ್ಲೂ ಆಗಿರಲಿಲ್ಲ. ಆದರೆ ಈ ಬಿಜೆಪಿ ಸರ್ಕಾರದಲ್ಲಿ ಆಗುತ್ತಿದೆ. ಇಂತಹ ವಂಚಕರಿಗೆ ಶಿಕ್ಷೆ ಆಗಬೇಕು. ಸತ್ಯ ವಿಭಾಗೀಯ ಅಧಿಕಾರಿ ಯಿಂದ ಈ ಪ್ರಕರಣ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ಈ ಅಧಿಕಾರಿ ಮುಖ್ಯಮಂತ್ರಿ ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ತನಿಖೆ ಮಾಡಲು ಸಾಧ್ಯವೇ? ಈ ಕಾರಣಕ್ಕೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ. ಈ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳುತ್ತೇವೆ.

ಅಕ್ರಮದ ಮೂಲಕ ರಾಜ್ಯದ ಜನರಿಗೆ ಮೋಸ ಮಾಡಲಾಗಿದೆ. ಇದು ಸಣ್ಣ ಅಪರಾಧವಲ್ಲ. ಇದು ಜನಪ್ರತಿನಿಧಿ ಕಾಯ್ದೆ ಹಾಗೂ ಐಪಿಸಿ ಹಾಗೂ ಚುನಾವಣಾ ಕಾಯ್ದೆಯ ಪ್ರಕಾರ ಗಂಭೀರ ಅಪರಾಧವಾಗಿದೆ.

ಹೀಗಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಬಿಬಿಎಂಪಿಯ ಮುಖ್ಯ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು, ಹೊಸದಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ.

ಮತದಾರರ ಪಟ್ಟಿ ಪರಿಶೀಲಿಸಲು ನಾವು ನಮ್ಮ ನಾಯಕರು ಹಾಗೂ ಕಾರ್ಯಕರ್ತರಿಗೂ ಕರೆ ನೀಡಿದ್ದೇವೆ.

ಬಿಬಿಎಂಪಿ ಆಯುಕ್ತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಅವರನ್ನು ರಕ್ಷಿಸಲಾಗುತ್ತಿದೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ' ಅವರನ್ನು ಈ ಕೂಡಲೇ ಅಮಾನತುಗೊಳಿಸಬೇಕು. ಅವರ ಕೆಳಗಿರುವ ಹೆಚ್ಚುವರಿ ಚುನಾವಣಾ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು ಇವರನ್ನು ಯಾಕೆ ಅಮಾನತುಗೊಳಿಸಿಲ್ಲ? ಮುಖ್ಯ ಚುನಾವಣಾಧಿಕಾರಿ ಗೆ ಮಾಹಿತಿ ಇಲ್ಲದೆ ಹೆಚ್ಚುವರಿ ಚುನಾವಣೆ ಅಧಿಕಾರಿಗಳು ಅಕ್ರಮ ನಡೆಸಲು ಸಾಧ್ಯವೇ? ಮುಖ್ಯಮಂತ್ರಿಗಳು ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದು ಅವರಿಗೆ ತಿಳಿಯದಂತೆ ಅಕ್ರಮ ನಡೆಸಲು ಸಾಧ್ಯವೇ?' ಎಂದು ತಿಳಿಸಿದರು.

ತನಿಖೆ ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂಬ ಮುಖ್ಯಮಂತ್ರಿ ಹೇಳಿಕೆ ವಿಚಾರವಾಗಿ ಮಾತನಾಡಿ, ಇವರು ಯಾರ ಮೂಲಕ ತನಿಖೆ ಮಾಡಿಸುತ್ತಿದ್ದಾರೆ? ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಡೆ ದೂರು ದಾಖಲಾಗಿದ್ದು, ಹೆಚ್ಚುವರಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಆಯುಕ್ತರು ಭಾಗಿಯಾಗಿದ್ದು, ಕರ್ನಾಟಕ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂಬುದು ನಮ್ಮ ಅಗ್ರಹ ಎಂದು ತಿಳಿಸಿದರು.

English summary
Karnataka Congress requested Election Commission (EC) to scrutinise all 28 constituencies in connection with voter ID tampering case
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X