ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಬೆಟ್ಟೇಗೌಡ ಕಾಂಗ್ರೆಸ್ ಸೇರ್ಪಡೆ
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಮನ್‌ಮುಲ್ ಮಾಜಿ ಅಧ್ಯಕ್ಷರಾದ ಜವರೇಗೌಡ ಹಾಗೂ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾದ ಬೆಟ್ಟೇಗೌಡ ಅವರು ಕಾಂಗ್ರೆಸ್ ಸೇರಿದರು.
ಬೆಂಗಳೂರು, ಮಾರ್ಚ್ 13; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಹಲವು ಶಾಸಕರು, ಮುಖಂಡರು ಪಕ್ಷಾಂತರ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸೇರುವವರ ಸಂಖ್ಯೆ ಹೆಚ್ಚಾಗಿದೆ ಎಂದರೂ ತಪ್ಪಾಗಲಾರದು, ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು ಟಿಕೆಟ್ ಹಂಚುವಾಗ ಸವಾಲು ಎದುರಿಸಲಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ.
ಸೋಮವಾರ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮನ್‌ಮುಲ್ ಮಾಜಿ ಅಧ್ಯಕ್ಷ ಜವರೇ ಗೌಡ ಹಾಗೂ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಬೆಟ್ಟೇಗೌಡ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಮಾಜಿ ಸಚಿವ ಚೆಲುವರಾಯ ಸ್ವಾಮಿ ಸೇರಿದಂತೆ ಅನೇಕ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡಿ. ಕೆ. ಶಿವಕುಮಾರ್ ಈ ಕುರಿತು ಟ್ವೀಟ್ ಮಾಡಿದ್ದು, "ನಾಗಮಂಗಲದಲ್ಲಿ ಇಂದು ಮನ್‌ಮುಲ್ ಮಾಜಿ ಅಧ್ಯಕ್ಷರಾದ ಶ್ರೀ ಜವರೇಗೌಡ ಹಾಗೂ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಬೆಟ್ಟೇಗೌಡ ಅವರು ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ನಂಬಿ ಪಕ್ಷ ಸೇರ್ಪಡೆಗೊಂಡರು. ಅವರನ್ನು ಅಭಿನಂದಿಸಿ, ಭವಿಷ್ಯದ ರಾಜಕೀಯ ಜೀವನ ಚೆನ್ನಾಗಿರಲಿ ಎಂದು ಹಾರೈಸಿದೆ" ಎಂದು ಹೇಳಿದ್ದಾರೆ. ಫೋಟೋವನ್ನು ಸಹ ಟ್ವೀಟ್ ಮಾಡಿದ್ದಾರೆ.
ಬೆಟ್ಟೇಗೌಡ ಪದಚ್ಯುತಿಗೊಂಡಿದ್ದರು; 2018ರಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿದ್ದರು ಬೆಟ್ಟೇಗೌಡ. 19 ನಿರ್ದೇಶಕರು ಅವಿಶ್ವಾಸ ನಿರ್ಣಯ ಮಂಡಿಸಿದ ಹಿನ್ನಲೆಯಲ್ಲಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿತ್ತು. ರಾಜ್ಯ ಒಕ್ಕಲಿಗರ ಸಂಘಕ್ಕೆ 35 ನಿರ್ದೇಶಕರಿದ್ದರು, 7 ದಿನದಲ್ಲಿ ವಿಶ್ವಾಸ ಮತ ಸಾಬೀತು ಮಾಡುವಂತೆ ಪಟ್ಟು ಹಿಡಿದಿದ್ದರು. ವಿಶ್ವಾಸ ಮತ ಸಾಬೀತು ಮಾಡಲು ಸಾಧ್ಯವಾಗದ ಕಾರಣ ಬೆಟ್ಟೇಗೌಡರನ್ನು ಪದಚ್ಯುತಿಗೊಳಿಸಲಾಗಿತ್ತು.
ಅದಕ್ಕೂ ಮೊದಲು ಒಕ್ಕಲಿಗರ ಸಂಘಕ್ಕೆ ಡಾ. ಅಪ್ಪಾಜಿ ಗೌಡ ಅಧ್ಯಕ್ಷರಾಗಿದ್ದರು. 2017ರಲ್ಲಿ ಅವರನ್ನು ಅಧ್ಯಕ್ಷ ಹುದ್ದೆಯಿಂದ ಪದಚ್ಯುತಿಗೊಳಿಸಿ ನಿರ್ಣಯ ಕೈಗೊಳ್ಳಲಾಗಿತ್ತು. ಆಗ ಬೆಟ್ಟೇಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬೆಟ್ಟೇಗೌಡರು ಪದಚ್ಯುತಿಗೊಳ್ಳುವ ಮೂಲಕ ಅವರ ಒಂದೂವರೆ ವರ್ಷದ ಆಡಳಿತ ಕೊನೆಗೊಂಡಿತ್ತು.

ಜವರೇಗೌಡರು ಜೆಡಿಎಸ್ ಪಕ್ಷದಲ್ಲಿದ್ದರು ಫೆಬ್ರವರಿ ತಿಂಗಳಿನಲ್ಲಿಯೇ ಅವರು ಕಾಂಗ್ರೆಸ್ ಸೇರುವುದಾಗಿ ಹೇಳಿದ್ದರು. "ಜೆಡಿಎಸ್ ಪಕ್ಷ ಒಂದು ಕುಟುಂಬಕ್ಕೆ ಸೀಮಿತವಾಗಿದೆ. ಕುಟುಂಬ ರಾಜಕಾರಣದಿಂದ ಬೇಸತ್ತು, ಪಕ್ಷದಿಂದ ಹೊರಬಂದು ಕಾಂಗ್ರೆಸ್ ಬೆಂಬಲಿಸು ತೀರ್ಮಾನಿಸಿದ್ದೇನೆ. 45 ವರ್ಷದಿಂದ ಜೆಡಿಎಸ್ ಪಕ್ಷಕ್ಕಾಗಿ ದುಡಿದುಕೊಂಡು ಬಂದಿದ್ದೇನೆ. ಆದರೆ ಅಲ್ಲಿ ಹಿರಿಯರು ಎಂಬ ಯಾವುದೇ ಗೌರವಿಲ್ಲ. ಅವರ ಮಕ್ಕಳು, ಮೊಮ್ಮಕ್ಕಳಿಗೆ ಜೀತ ಮಾಡಲು ನಾವು ಸಿದ್ಧರಿಲ್ಲ" ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
"ನನ್ನ ಮತ್ತು ಚಲುವರಾಯಸ್ವಾಮಿ ನಡುವೆ ಭಿನ್ನಾಭಿಪ್ರಾಯವಿತ್ತು. ಆದರೆ ಅವರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿಬೆಳೆಸಿದರು. ಕಾಂಗ್ರೆಸ್‌ಗೆ ಬಂದು ಪಕ್ಷವನ್ನು ಸದೃಢವಾಗಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಾನು ಬೆಟ್ಟೇಗೌಡರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ದಾಸೇಗೌಡ ಮೂವರು ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತೇವೆ" ಎಂದು ಘೋಷಣೆ ಮಾಡಿದ್ದರು.
ಮಂಡ್ಯ ಜೆಡಿಎಸ್ ಪಕ್ಷದ ಭದ್ರಕೋಟೆ ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಬೇಕು ಎಂದು ಕಾಂಗ್ರೆಸ ತಂತ್ರ ರೂಪಿಸಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಈಗಾಗಲೇ ಜೆಡಿಎಸ್ ಅಭ್ಯರ್ಥಿಗೆ ಸೋಲಿನ ರುಚಿ ತೋರಿಸಿ ಉತ್ಸಾಹದಲ್ಲಿದೆ. ಜಿಲ್ಲೆಯ ಹಲವು ಮುಖಂಡರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿರುವುದು ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆಯೇ? ಎಂದು ಕಾದು ನೋಡಬೇಕಿದೆ.
ಇಂದು ಡಿ. ಕೆ. ಶಿವಕುಮಾರ್ ನಾಗಮಂಗಲ ಪ್ರವಾಸದಲ್ಲಿದ್ದರು. ಭರವಸೆಯ ನಾಳೆಗಳಿಗೆ ಕಾಂಗ್ರೆಸ್‌ನ 3 ಗ್ಯಾರಂಟಿಗಳು ಎನ್ನುವುದಕ್ಕೆ ಮುನ್ನುಡಿ ಬರೆದರು. ಇಂದು ನಾಗಮಂಗಲದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮುನ್ನ ಕಾಚೇನಹಳ್ಳಿಯ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗೆ ಮಹಿಳೆಯರ ಹೆಸರನ್ನು ಡಿ. ಕೆ. ಶಿವಕುಮಾರ್ ನೋಂದಾಯಿಸಿದರು.












Click it and Unblock the Notifications