ಒಕ್ಕಲಿಗ-ಪಂಚಮಸಾಲಿ ಸಮುದಾಯಗಳಿಂದ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ: ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ
ಬೆಂಗಳೂರು, ನವೆಂಬರ್ 25: ರಾಜ್ಯದ ಎರಡು ಪ್ರಬಲ ಹಾಗೂ ದೊಡ್ಡ ಸಮುದಾಯಗಳು ತಮಗಿರುವ ಹಾಲಿ ಮೀಸಲಾತಿಯನ್ನು ಹೆಚ್ಚಿಸುವಂತೆ ಪಟ್ಟು ಹಿಡಿದಿವೆ.
ಇತ್ತೀಚೆಗಷ್ಟೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ (ಶೇ.15ರಿಂದ 17) ಮತ್ತು ಪರಿಶಿಷ್ಟ ಪಂಗಡ (ಶೇ.3ರಿಂದ 7)ಕ್ಕೆ ಮೀಸಲಾತಿ ಹೆಚ್ಚಿಸಿ ಆದೇಶಿಸಿತ್ತು. ಬಿಜೆಪಿ ಸರ್ಕಾರ ತಳ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಎಲ್ಲ ಸಮುದಾಯದವರನ್ನು ಒಂದೇ ರೀತಿ ನೋಡುತ್ತಿದ್ದೇವೆ ಎನ್ನುತ್ತಲೇ ಎದುರಾಳಿ ಕಾಂಗ್ರೆಸ್‌ಗೆ ಈ ಮೂಲಕ ಟಕ್ಕರ್ ನೀಡಿತ್ತು.
ಇದರ ಬೆನ್ನಲ್ಲೆ ಈಗ ಪ್ರಬಲ ಸಮುದಾಯಗಳ ಪೈಕಿ ಒಕ್ಕಲಿಗರ ಸಮುದಾಯ ಮೀಸಲಾತಿಗೆ ಆಗ್ರಹಿಸಿ ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಿದೆ. ಇತ್ತ ಪಂಚಮಸಾಲಿ ಸಮುದಾಯವು ಮೀಸಲಾತಿ ಹೆಚ್ಚಳದ ಪಟ್ಟು ಸಡಿಲಿಸದೇ ಸರ್ಕಾರ ಡಿ.19ರವರೆಗೆ ಗಡುವು ನೀಡಿ ಎಚ್ಚರಿಸಿದೆ. ವಿಧಾನಸಭೆ ಚುನಾವಣೆ 2023 ಹೊಸ್ತಿಲಲ್ಲಿರುವ ಆಡಳಿತ ಬಿಜೆಪಿ ಪಕ್ಷಕ್ಕೆ ಈ ಸಮುದಾಯಗಳ ಬೇಡಿಕೆ ಈಡೇರಿಕೆ ಸವಾಲು ಎದುರಿಸಬೇಕಿದೆ. ಎಲ್ಲ ಸಮುದಾಯಗಳ ಮತಗಳು ಮುಖ್ಯವಾಗಿರುವ ಬಿಜೆಪಿ ಸರ್ಕಾರ ಈ ಭಾರಿ ಇಕ್ಕಟ್ಟಿಗೆ ಸಿಲುಕಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಶೇ. 4ರಿಂದ ಶೇ.12ಕ್ಕೆ ಹೆಚ್ಚಿಸಲು ಆಗ್ರಹ
ಒಕ್ಕಲಿಗರು ಮೀಸಲಾತಿಯನ್ನು ಶೇ. 4ರಿಂದ ಶೇ 12ಕ್ಕೆ ಹೆಚ್ಚಿಸಲು ಆಗ್ರಹಿಸಿದ್ದಾರೆ. ಈ ಸಂಬಂಧ ಸರ್ಕಾರದ ಗಮನ ಸೆಳೆಯಲು ದೊಡ್ಡ ಮಟ್ಟದ ಹೋರಾಟಕ್ಕೆ ಒಕ್ಕಲಿಗರ ಸಂಘ ಮತ್ತು ಮೀಸಲಾತಿ ಹೋರಾಟ ಸಮಿತಿ ಅಣಿಯಾಗಿದೆ. ಇದಕ್ಕೆಂದೆ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಮುಖಂಡರೆಲ್ಲರು ನ. 27ರಂದು ಸಭೆ ನಡೆಸಲಿದ್ದಾರೆ. ಅಂದು ಹೋರಾಟ ಹಾಗೂ ಮುಂದಿನ ನಡೆ ಬಗ್ಗೆ ನಿರ್ಧರಿಸಲಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಸಭೆ ಕುರಿತು ವಿವರಿಸಿದ್ದಾರೆ. ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಕುಮಾರ ಚಂದ್ರಶೇಖರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ಮೇರೆಗೆ ಸಭೆ ಕರೆಯಲಾಗಿದೆ ಎಂದರು.

ಬೃಹತ್ ಸಮುದಾಯಕ್ಕೆ ಕೇವಲ ಶೇ.4 ಮೀಸಲಾತಿ
ಎಸ್‌ಸಿ, ಎಸ್‌ಟಿ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಿಸಿರುವುದು ಸಂತದ ವಿಷಯ. ಅದೇ ರೀತಿ ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಹೆಚ್ಚಿಸಬೇಕಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 3ಎ ಸಾಲಿನಲ್ಲಿರುವ ಬೃಹತ್ (ಶೇ.16ಕ್ಕು ಅಧಿಕ) ಸಮುದಾಯ ಕೇವಲ ಶೇ.4ರಷ್ಟು ಮಾತ್ರ ಮೀಸಲಾತಿ ಪಡೆದುಕೊಳ್ಳುತ್ತಿದೆ. ಹೀಗಾಗಿ ನಮಗೆ ಮೀಸಲಾತಿ ಹೆಚ್ಚಳದ ಅಗತ್ಯತೆ ಇದೆ ಎಂದು ವಿವರಿಸಿದರು.
ಸಭೆಯಲ್ಲಿ ರಾಜ್ಯಸಭೆ ಸದಸ್ಯ ಎಚ್.ಡಿ.ದೇವೇಗೌಡ, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ, ಸಂಸದ ಡಿ.ವಿ.ಸದಾನಂದಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಆರ್.ಅಶೋಕ, ಸಿ.ಎನ್.ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಬಾಲಕೃಷ್ಣ ತಿಳಿಸಿದರು.

ಚಳಿಗಾಲ ಅಧಿವೇಶನಕ್ಕೂ ಮುನ್ನ ವರದಿ ಪಡೆಯಿರಿ
ಬಹಳ ದಿನದಿಂದ ಪಂಚಮಸಾಲಿ ಸಮುದಾಯವು 2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸುತ್ತಲೇ ಇದೆ. ಈ ಸಂಬಂಧ ಉತ್ತರ ಕರ್ನಾಟಕ ಭಾಗದಿಂದ ಬೆಂಗಳೂರು ವಿಧಾನಸೌಧವರಗೆ ಪಾದಯಾತ್ರೆ ಸಹ ಮಾಡಲಾಗಿತ್ತು. ಸದ್ಯ ಬೆಳಗಾವಿಯಲ್ಲಿ ಡಿ.19ರಿಂದ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಮುನ್ನವೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರ ವರದಿ ಪಡೆಯಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗುಡುವು ನೀಡಿದ್ದಾರೆ.

ಬೆಳಗಾವಿಯಲ್ಲಿ ಡಿ.22ಕ್ಕೆ ಒಕ್ಕಲಿಗರ ಬೃಹತ್ ಸಮಾವೇಶ
ಗುರುವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಈ ಭಾರಿಯು ಗಡುವು ಮೀರಿದರೆ ಅಧಿವೇಶನ ನಡೆಯಲಿರುವ ಬೆಳಗಾವಿಯಲ್ಲಿ ಡಿ.22ರಂದು ಬೃಹತ್ ಸಮಾವೇಶ ನಡೆಸಲಾಗುವುದು. ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿ ಗಡುವು ನೀಡಿದ್ದರಿಂದ ಉದ್ದೇಶಿತ ಡಿ.12ರಂದು ಬೆಂಗಳೂರಲ್ಲಿ ನಡೆಬೇಕಿದ್ದ 'ವಿರಾಟ್ ಪಂಚಶಕ್ತಿ ಸಮಾವೇಶ' ನಡೆಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಹೋರಾಟ ಕುರಿತು ಶ್ರೀಗಳು ಗುರುವಾರ ಸಭೆ ನಡೆಸಿ ಹೋರಾಟ ಕುರಿತು ತಿಳಿಸಿದರು. ಸಚಿವರಾದ ಸಿ.ಸಿ. ಪಾಟೀಲ್ ಮತ್ತು ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇನ್ನಿತರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications