ವಿಶ್ವಕನ್ನಡ ಜಾಗೃತಿ ಸಮಾವೇಶದ ಮುಖ್ಯಾಂಶಗಳು
ಬೆಂಗಳೂರು, ಮಾ. 29 : ಭಾಷಾ ಮಾಧ್ಯಮ, ಮೇಕೆದಾಟು ಸೇರಿದಂತೆ ವಿವಿಧ ವಿಚಾರಗಳಲ್ಲಿ ಕರ್ನಾಟಕದ ಹಿತ ಕಾಪಾಡಲು ನಾವು ಆದ್ಯತೆ ನೀಡುತ್ತೇವೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಕನ್ನಡ ನಾಡಿನ ಹಿತ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ 15ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 'ವಿಶ್ವ ಕನ್ನಡ ಜಾಗೃತಿ ಸಮಾವೇಶ'ದಲ್ಲಿ ಮಾತನಾಡಿದ ಅವರು, ಕರ್ನಾಟಕದ ಮತ್ತು ಕನ್ನಡಿಗರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದರು.

ಕನ್ನಡ ಭಾಷಾ ಮಾಧ್ಯಮದ ವಿಚಾರದಲ್ಲಿ ಸಂವಿಧಾನದ ವ್ಯಾಪ್ತಿಯಲ್ಲಿ ತೀರ್ಪುಗಳು ಬಂದಿವೆ. ಈಗಲೂ ಭಾಷಾ ಮಾಧ್ಯಮ ಕಡ್ಡಾಯಕ್ಕೆ ಹಲವಾರು ಅವಕಾಶಗಳಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ತಮ್ಮ ತಮ್ಮ ವೇದಿಕೆಗಳಲ್ಲಿ ಈ ಬಗ್ಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಿವೆ ಎಂದು ಹೇಳಿದರು. [ಕಡ್ಡಾಯ ಕನ್ನಡ ಶಿಕ್ಷಣ ಹೋರಾಟಕ್ಕೆ ಮತ್ತೆ ಹಿನ್ನಡೆ]
ಪ್ರಧಾನಿ ಭರವಸೆ ನೀಡಿದ್ದಾರೆ : ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಅಣೆಕಟ್ಟು ನಿರ್ಮಾಣ ಮಾಡಲು ಅವಕಾಶ ನೀಡದಂತೆ ಅಲ್ಲಿನ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದ್ದಾರೆ. [ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಲು ಬಿಡೋಲ್ಲ]

ಕರ್ನಾಟಕದ ಎಲ್ಲಾ ಸಂಸದರು ಪಕ್ಷ ಭೇದ ಮರೆತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತಮಿಳುನಾಡಿನ ಒತ್ತಡಕ್ಕೆ ಮಣಿಯಬಾರದು ಎಂದು ಮನವಿ ಮಾಡಿದ್ದೇವೆ. ಪ್ರಧಾನಿ ಮೋದಿ ಅವರು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಕರ್ನಾಟಕದ ಸಂಸದರ ಜೊತೆ ಚರ್ಚೆ ನಡೆಸುವ ಭರವಸೆ ನೀಡಿದ್ದಾರೆ ಎಂದು ಸದಾನಂದ ಗೌಡರು ತಿಳಿಸಿದರು. [ಕನ್ನಡ, ಸಂಸ್ಕೃತಿ ರಕ್ಷಣೆಗೆ ಕನ್ನಡ, ಸಂಸ್ಕೃತಿ ರಕ್ಷಣೆಗೆ ಸಿದ್ದರಾಮಯ್ಯ]
ಬಿಬಿಎಂಪಿ ವಿಭಜನೆ ಹಿಂದೆ ದುರುದ್ದೇಶ : ಕರ್ನಾಟಕ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸುವ ನಿರ್ಧಾರ ಕೈಗೊಂಡಿರುವುದು ದುರುದ್ದೇಶ ಪೂರ್ವಕ ಎಂದು ಸದಾನಂದ ಗೌಡ ಹೇಳಿದ್ದಾರೆ. ಬೆಂಗಳೂರನ್ನು ವಿಭಜನೆ ಮಾಡಿದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಸಮಸ್ಯೆಗಳು ಹೆಚ್ಚಾಗಿ ಸಂಘರ್ಷ ಹೆಚ್ಚಾಗುತ್ತದೆ ಎಂದರು.











Click it and Unblock the Notifications