ವಿನಾಯಕನ ಮೂರ್ತಿಗೆ ಚಪ್ಪಲಿ ಹಾರ ಹಾಕಿರುವ ವಿಡಿಯೋ ವೈರಲ್, ಎಲ್ಲಿ?
ವಿಘ್ನ ನಿವಾರಕ ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿರುವ ಘಟನೆ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಬೇಲೂರಿನ ಪುರಸಭೆ ಆವರಣದಲ್ಲಿರುವ ಶ್ರೀವರಸಿದ್ಧಿ ವಿನಾಯಕನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಂದು ಬೆಳಿಗ್ಗೆ ಈ ಕೃತ್ಯ ಬೆಳಕಿಗೆ ಬಂದಿದ್ದು, ಭಕ್ತಾಧಿಗಳು ಕೈಮುಗಿಯಲು ಹೋದಾಗ ಗಣಪತಿಗೆ ಚಪ್ಪಲಿ ಹಾರ ಹಾಕಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಇದು ಕೋಮು ಸೌಹಾರ್ದ ಕದಡಲು ಮಾಡಿರುವ ಕೃತ್ಯ ಎಂದು ಅನುಮಾನ ವ್ಯಕ್ತವಾಗಿದ್ದು, ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಚಪ್ಪಲಿ ಹಾಕಿದ್ದು ಮಹಿಳೆ ಎಂದು ಹೇಳಲಾಗುತ್ತಿದ್ದು, ಆಕೆ ಮುಖ ಮುಚ್ಚಿಕೊಂಡು ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಆದರೆ ಇದು ಯಾರೋ ಕಿಡಿಗೇಡಿಗಳು ಮಾಡಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು, ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಸ್ಥಳೀಯರು ಹಾಗೂ ಹಿಂದೂ ಕಾರ್ಯಕರ್ತರು ಈ ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಕೃತ್ಯದ ಬಗ್ಗೆ ಹಿಂದೂ ಹುಲಿ ಖ್ಯಾತಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ವಿಗ್ರಹ ಭಂಜಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಹಾಗೂ ಜಾಮೀನುರಹಿತ ಪ್ರಕರಣವನ್ನು ಸರ್ಕಾರ ದಾಖಲಿಸಲಿ ಎಂದಿದ್ದಾರೆ. ಮದ್ದೂರಿನ ಘಟನೆ ಮಾಸುವ ಮುನ್ನವೇ ಸಮಾಜಘಾತುಕ ಶಕ್ತಿಗಳು ಹಿಂದೂ ದೇವರ ಮೂರ್ತಿಗಳನ್ನು ಭಿನ್ನ ಮಾಡುವ ದುಷ್ಕೃತ್ಯವೆಸಗಿರುವುದು ಹಾಗೂ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಕ್ಷಮಿಸಲಾಗದ ದುಷ್ಕೃತ್ಯ ಎಂದು ಖಂಡಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಹೃದಯಭಾಗವಾದ ಪುರಸಭೆ ಆವರಣದಲ್ಲಿ ಸ್ಥಾಪಿತವಾದ ಶ್ರೀವರಸಿದ್ಧಿ ವಿನಾಯಕ ದೇವಾಲಯವು ಗಣೇಶ ಭಕ್ತರಿಗೆ ಪ್ರಸಿದ್ಧ ಸ್ಥಳವಾಗಿದ್ದು, ಈ ದೇವಸ್ಥಾನದಲ್ಲಿರುವ ಗಣೇಶ ಮೂರ್ತಿಯ ಗಣೇಶನ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಮತಾಂಧರು ವಿಕೃತಿ ಮೆರೆದಿರುವುದು ನಿಜಕ್ಕೂ ಹೇಯ ಹಾಗೂ ಖಂಡನೀಯ. ಸರ್ಕಾರ ಕೂಡಲೇ ಈ ಕಿಡಿಗೇಡಿಗಳನ್ನು ಬಂಧಿಸಿ, ಜಾಮೀನು ರಹಿತ ಪ್ರಕರಣವನ್ನು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರ ಭಯವಿಲ್ಲ
ಜೆಡಿಎಸ್ ಪಕ್ಷ ಕೂಡ ಈ ಘಟನೆಗೆ ಆಕ್ರೋಶ ಹೊರಹಾಕಿದೆ. ಹಾಸನ ಜಿಲ್ಲೆಯ ಬೇಲೂರಿನ ಪುರಸಭೆ ಆವರಣದಲ್ಲಿರುವ ಶ್ರೀವರಸಿದ್ಧಿ ವಿನಾಯಕನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ಕಿಡಿಗೇಡಿಗಳು ವಿಕೃತಿ ಮೆರೆದಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರು ಹಾಗೂ ಕಾನೂನಿನ ಭಯವಿಲ್ಲದೇ, ಪದೇ ಪದೇ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ದುಷ್ಟ ಕೆಲಸಗಳು ಹೆಚ್ಚುತ್ತಲೇ ಇದೆ. ಹಿಂದೂ ಧಾರ್ಮಿಕ ಮತ್ತು ಶ್ರದ್ಧಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದುಷ್ಕೃತ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ನೀಡಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರೇ ಗಣೇಶನ ವಿಗ್ರಹಕ್ಕೆ ಅಪಚಾರವೆಸಗಿ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಮತ್ತು ಭಕ್ತರ ನಂಬಿಕೆಗಳನ್ನು ಘಾಸಿಗೊಳಿಸಿರುವ ದುಷ್ಟರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.












Click it and Unblock the Notifications