ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಹಿಂಸಾಚಾರ: ಬೆಳಗಾವಿ ಜಿಲ್ಲೆಯಾದ್ಯಂತ ಪೊಲೀಸರ ಹೈ ಅಲರ್ಟ್- ಕಾರಣವೇನು ಗೊತ್ತೇ?
ಬೆಳಗಾವಿ, ಜೂನ್ 09: ಕರ್ನಾಟಕ ಗಡಿಯಿಂದ ಕೇವಲ 23 ಕಿಮೀ ದೂರದಲ್ಲಿರುವ ಮಹಾರಾಷ್ಟ್ರದ ಕೊಲ್ಲಾಪುರ ನಗರದಲ್ಲಿ ಕೋಮುಗಲಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮತ್ತು ಗ್ರಾಮಾಂತರ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅವರನ್ನು ಹೊಗಳಿ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಪೊಸ್ಟ್ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಹಿಂದು ಪರ ಸಂಘಟನೆಗಳು ಕೊಲ್ಲಾಪುರದ ಶಿವಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದವು. ಈ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಕೋಮಗಲಭೆಯ ವಾತಾವರಣ ಸೃಷ್ಟಿಯಾಗಿದೆ.

ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಕೋಮು ಭಾವನೆಗಳಿಗೆ ಧಕ್ಕೆ ತರುವ ಮತ್ತು ಕೋಮುಗಲಭೆಗೆ ಕಾರಣವಾಗುವ ಯಾವುದೇ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡದಂತೆ ಜಿಲ್ಲಾ ಪೊಲೀಸರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇಂತಹ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡುವವರ ವಿರುದ್ಧ ಸೆಕ್ಷನ್ 153 ಎ, 295 ಮತ್ತು 295 ಎ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಇಲಾಖೆ ಎಚ್ಚರಿಕೆ ನೀಡಿದೆ.
ಕೊಲ್ಲಾಪುರ ಹಿಂಸಾಚಾರದ ಹಿನ್ನಲೆಯಲ್ಲಿ ಬೆಳಗಾವಿ ನಗರದ ಎಲ್ಲಾ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತು ಜಿಲ್ಲೆಯಾದ್ಯಂತ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ನಿಪ್ಪಾಣಿ ಪಟ್ಟಣದ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸರು ಗುರುವಾರ ಕ್ರಮ ಕೈಗೊಂಡಿದ್ದಾರೆ.

ಮರಾಠ ಯೋಧ ಛತ್ರಪತಿ ಶಿವಾಜಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ನಗರದ ಶಾಹುನಗರದ ಇಬ್ಬರು ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಎಸಿಪಿ ನಾರಾಯಣ ಬರಮಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬೆಳಗಾವಿ ಮತ್ತು ನಿಪ್ಪಾಣಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿರುವ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ನೇತೃತ್ವದಲ್ಲಿ ಕಾರ್ಯಕರ್ತರು ಆಗ್ರಹಿಸಿದರು.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಮುದಾಯಗಳ ಮುಖಂಡರೊಂದಿಗೆ ಶಾಂತಿ ಸಮಿತಿ ಸಭೆ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೂಕ್ಷ್ಮ ವಿಷಯಗಳನ್ನು ಪೋಸ್ಟ್ ಮಾಡದಂತೆ ಎಸ್ಪಿ ಸಂಜೀವ್ ಪಾಟೀಲ್ ಸೂಚನೆ ನೀಡಿದ್ದಾರೆ.
'ನಾವು ಜನರನ್ನು, ವಿಶೇಷವಾಗಿ ಯುವಕರು ಕೋಮು ಸೂಕ್ಷ್ಮ ವಿಷಯಗಳಲ್ಲಿ ತೊಡಗಿಕೊಳ್ಳದಿರುವಂತೆ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಕೋಮು ದ್ವೇಷವನ್ನು ಹರಡದಂತೆ ವಿನಂತಿಸುತ್ತಿದ್ದೇವೆ. ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಾವು ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಪರೇಡ್ ಅನ್ನು ನಡೆಸುತ್ತಿದ್ದೇವೆ' ಎಂದು ಎಸ್ಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.












Click it and Unblock the Notifications