Vinay Kulkarni: ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಭಾರೀ ಹಿನ್ನಡೆ
ಬೆಂಗಳೂರು, ಏಪ್ರಿಲ್ 18; ಧಾರವಾಡದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ನ್ಯಾಯಾಲಯದಲ್ಲಿ ಭಾರೀ ಹಿನ್ನಡೆಯಾಗಿದೆ. ಅವರು ಧಾರವಾಡ ಪವೇಶಿಸಲು ಕೋರಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಮೇ 10ರಂದು ನಡೆಯುವ ಚುನಾವಣೆಗೆ ಈಗಾಗಲೇ ವಿನಯ್ ಕುಲಕರ್ಣಿ ಹೆಸರಿನಲ್ಲಿ ನಾಮಪತ್ರ ಸಲ್ಲಿಕೆಯಾಗಿದೆ.
ಬಿಜೆಪಿ ನಾಯಕ ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ. ಈ ಹತ್ಯ್ಎ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿಯನ್ನು ಬಂಧಿಸಲಾಗಿತ್ತು. ಸುಪ್ರೀಂಕೋರ್ಟ್ ಆರೋಪಿಗೆ ಜಾಮೀನು ನೀಡುವಾಗ ಧಾರವಾಡ ಪ್ರವೇಶ ಮಾಡದಂತೆ ಷರತ್ತು ವಿಧಿಸಿದೆ.

ಧಾರವಾಡ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೋರಿ ವಿನಯ್ ಕುಲಕರ್ಣಿ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಾರ್ಚ್‌ನಲ್ಲಿ ವಜಾಗೊಳಿಸಿತ್ತು. ಇದರಿಂದಾಗಿ ಅವರಿಗೆ 2023ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಹಿನ್ನಡೆ ಉಂಟಾಗಿತ್ತು. ಬಳಿಕ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ಅಭ್ಯರ್ಥಿಯಾಗಿ ಘೋಷಣೆ; 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ವಿನಯ್ ಕುಲಕರ್ಣಿ ಧಾರವಾಡ ಕ್ಷೇತ್ರದ ಅಭ್ಯರ್ಥಿ ಎಂದು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದೆ. ಏಪ್ರಿಲ್ 18ರಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಪರವಾಗಿ ಪ್ರೊ. ಸಿದ್ದಪ್ಪ ಪ್ಯಾಟಿ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಧಾರವಾಡ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ ಕಾರಣ ವಿನಯ್ ಕುಲಕರ್ಣಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿರುವ ಅವರು ಚುನಾವಣಾ ಪ್ರಚಾರವನ್ನು ಹೇಗೆ ನಡೆಸಲಿದ್ದಾರೆ?, ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡಿದಿದ್ದರೂ ಗೆಲ್ಲುವಷ್ಟು ಪ್ರಭಾವ ಹೊಂದಿದ್ದಾರೆಯೇ? ಎಂಬ ಪ್ರಶ್ನೆ ಎದುರಾಗಿದೆ.
ಸುಪ್ರೀಂನಲ್ಲಿ ಏನಾಗಿತ್ತು?; ವಿನಯ್ ಕುಲಕರ್ಣಿ ಧಾರವಾಡ ಭೇಟಿಗೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್‌ಗೆ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಕೆ ಮಾಡಿದಾಗ ಸಿಬಿಐ ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿತ್ತು. ಆರೋಪಿ ಪ್ರಭಾವಿಯಾಗಿದ್ದು ಧಾರವಾಡಕ್ಕೆ ಭೇಟಿ ನೀಡಿದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ ಎಂದು ಆಕ್ಷೇಪಿಸಿತ್ತು. ನನಗೆ 1200 ಹಸುಗಳಿವೆ, 2400 ಮೇಕೆಗಳ ನಿರ್ವಹಣೆ ಮಾಡಬೇಕು. ಪತ್ನ, ಮಕ್ಕಳಿಂದ ಸೂಕ್ತ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಮಾಜಿ ಸಚಿವರು ಉಲ್ಲೇಖ ಮಾಡಿದ್ದರು. ಆದರೆ ಕೋರ್ಟ್ ಅರ್ಜಿ ವಜಾಗೊಳಿಸಿತ್ತು.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿಯೂ ಸಿಬಿಐ ಧಾರವಾಡ ಪ್ರವೇಶಕ್ಕೆ ಅವಕಾಶ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿತು. ಸಿಬಿಐ ಪರವಾಗಿ ವಾದ ಮಂಡನೆ ಮಾಡಿದ ವಿಶೇಷ ಅಭಿಯೋಜಕ ಗಂಗಾಧರ ಶೆಟ್ಟಿ ಆರೋಪಿ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುತ್ತಾರೆ. ಆದ್ದರಿಂದ ಅನುಮತಿ ನೀಡಬಾರದು ಎಂದರು.
ಆರೋಪಿ ಪರವಾದಿಸಿದ ವಕೀಲ ಸಿ. ಎಚ್. ಹನುಮಂತರಾಯಪ್ಪ ಧಾರವಾಡಕ್ಕೆ ಹೋಗಲು ಅವಕಾಶ ನೀಡಬೇಕು. ತಮ್ಮ ಕಕ್ಷಿದಾರರು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂಬ ಅನುಮಾನಗಳಿದ್ದರೆ ಭದ್ರತೆ ನೀಡಬಹುದು. ಸಿಬಿಐನಿಂದ ಸಾಧ್ಯವಾಗದಿದ್ದರೆ ಸ್ಥಳೀಯ ಪೊಲೀಸರು ಭದ್ರತೆ ನೀಡಬಹುದು ಎಂದು ವಾದಿಸಿದರು.
ಆದರೆ ಸಿಬಿಐ ಎಲ್ಲಾ 90 ಸಾಕ್ಷಿಗಳಿಗೆ ಪೊಲೀಸ್ ಭದ್ರತೆ ನೀಡುವುದು ಸಾಧ್ಯವಿಲ್ಲ. ಸ್ಥಳೀಯ ಪೊಲೀಸರು ಈ ಪ್ರಕರಣದಲ್ಲಿ ಹಣ ಪಡೆದಿರುವುದು ಸಿಬಿಐ ತನಿಖೆಯಲ್ಲಿಯೇ ತಿಳಿದಿದೆ. ಸೂಚಕರ ಮೂಲಕ ನಾಮಪತ್ರ ಸಲ್ಲಿಕೆ ಮಾಡಬಹುದು ಎಂದು ವಾದ ಮಂಡಿಸಿದ್ದರು. ಎರಡೂ ಕಡೆಯ ವಾದ ಆಲಿಸಿದ್ದ ನ್ಯಾಯಾಲಯ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಮೇ 10ರಂದು ನಡೆಯುವ ಚುನಾವಣೆಗೆ ವಿನಯ್ ಕುಲಕರ್ಣಿ ಹೇಗೆ ಪ್ರಚಾರ ನಡೆಸುತ್ತಾರೆ? ಎಂದು ಕಾದು ನೋಡಬೇಕಿದೆ.












Click it and Unblock the Notifications