Karnataka: ಈ ಜಿಲ್ಲೆಯಲ್ಲಿ ಮಿನಿ ಪ್ಲಾನೆಟೇರಿಯಂ & ಹಾಸ್ಟೆಲ್ ಯೋಜನೆಗೆ ಸಂಪುಟ ಒಪ್ಪಿಗೆ
ಬೆಂಗಳೂರು, ಫೆಬ್ರವರಿ 22: ವಿಜಯಪುರದಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ (ಮಿನಿ ಪ್ಲಾನೆಟೇರಿಯಂ) ಹಾಗೂ ಬಬಲೇಶ್ವರ ಮತ್ತು ವಿಜಯಪುರದಲ್ಲಿ ಎರಡು ಹಾಸ್ಟೆಲ್ ಗಳ ನಿರ್ಮಾಣಕ್ಕೆ ಒಟ್ಟು ₹56.88 ಕೋಟಿ ವ್ಯಯಿಸಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಈ ಮೂಲಕ ತವರು ಜಿಲ್ಲೆಗೆ ಉಸ್ತುವಾರಿ ಸಚಿವರೂ ಆದ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ ಅವರು ಹೇಳಿದರು.
ಇಂದು ಶನಿವಾರ ಮಾಹಿತಿ ನೀಡಿದ ಸಚಿವರ '2015-16ನೇ ಸಾಲಿನ ಬಜೆಟ್ಟಿನಲ್ಲೇ ವಿಜಯಪುರವೂ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ ಸ್ಥಾಪಿಸುವ ಘೋಷಣೆ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಇದು ಅನುಷ್ಠಾನಕ್ಕೆ ಬರಲಿಲ್ಲ. ಈಗ ₹12.88 ಕೋಟಿಗೆ ಪರಿಷ್ಕೃತ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಇದಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಈ ಯೋಜನೆಯನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಮೂಲಕ ಕಾರ್ಯಗತಗೊಳಿಸಲಾಗುವುದು. ವಿಜಯಪುರದಲ್ಲಿ ಈ ಯೋಜನೆಯ ಕಾಮಗಾರಿಗೆ ಇದುವರೆಗೆ 1.44 ಕೋಟಿ ರೂ. ವೆಚ್ಚವಾಗಿದೆ.
ತಾರಾಲಯದಲ್ಲಿ ಡೋಮ್, ಪ್ರೊಜಕ್ಷನ್ ಸಿಸ್ಟಂ, ಒಳಾಂಗಣ, ಹೊರಾಂಗಣ ವಿಜ್ಞಾನ ಪ್ರದರ್ಶಿಕೆಗಳು, ಆಡಿಯೋ ವ್ಯವಸ್ಥೆ, ಹವಾ ನಿಯಂತ್ರಣ ವ್ಯವಸ್ಥೆ ಎಲ್ಲವೂ ಇರಲಿದೆ. ಇದರ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ತಿಳಿವಳಿಕೆಯನ್ನು ಹೆಚ್ಚಿಸಲಾಗುವುದು. ನನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯಲಾಗಿತ್ತು ಎಂದು ಅವರು ತಿಳಿಸಿದರು.
2 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಮದಾಪುರದಲ್ಲಿರುವ, ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಡಾ.ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಮತ್ತು ವಿಜಯಪುರದಲ್ಲಿರುವ ವಸತಿಸಹಿತ ಪದವಿಪೂರ್ವ ಕಾಲೇಜಿಗೆ ಸ್ವಂತ ಕಟ್ಟಡಕ್ಕಾಗಿ ತಲಾ 22 ಕೋಟಿ ರೂ.ಗಳಂತೆ ಒಟ್ಟು 44 ಕೋಟಿ ರೂ. ಒದಗಿಸಲು ಕೂಡ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ಸಿಕ್ಕಿದೆ.
ಈ ಎರಡೂ ವಸತಿ ಶಾಲೆಗಳು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದು, ಇಲ್ಲಿ ತಲಾ 250ರಂತೆ ಒಟ್ಟು 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈಗ ಇವು ಬಾಡಿಗೆ ಕಟ್ಟಡದಲ್ಲಿ ಇರುವುದರಿಂದ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ಹೊಸ ಕಟ್ಟಡಗಳಲ್ಲಿ ಶಾಲಾ ಕಟ್ಟಡ, ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್, ಭೋಜನಾಲಯ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವಸತಿ ಗೃಹಗಳು, ರಂಗಮಂದಿರ, ಕಾಂಪೌಂಡ್, ಸೋಲಾರ್ ವಾಟರ್ ಹೀಟರ್, ಒಳಚರಂಡಿ ವ್ಯವಸ್ಥೆ ಮುಂತಾದವು ಇರಲಿವೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿರುವ 61 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಕ್ಕಾಗಿ ಒಟ್ಟು 1292.50 ಕೋಟಿ ರೂ. ಒದಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರಲ್ಲಿ ಜಿಲ್ಲೆಯ ಈ ಎರಡು ಶಾಲೆಗಳೂ ಸೇರಿವೆ ಎಂದು ಅವರು ಹೇಳಿದರು.












Click it and Unblock the Notifications