ಕ್ರಿಮಿನಲ್ ಆಕ್ಟ್, 'ನರೇಂದ್ರ ಮೋದಿ ಪ್ರಜಾಪ್ರಭುತ್ವ': ಸಿದ್ದರಾಮಯ್ಯ ಎಸೆದ ಸಪ್ತ ಪ್ರಶ್ನೆಗಳು
ಬೆಂಗಳೂರು, ಡಿ 15: ಚಿಂತಕರ ಚಾವಡಿ ಎಂದೇ ಕರೆಯಲ್ಪಡುವ ವಿಧಾನ ಪರಿಷತ್ತಿನಲ್ಲಿ ಇಂದು (ಡಿ 15) ನಡೆಯಬಾರದು ಘಟನೆ ನಡೆದು ಹೋಗಿದೆ. ಮೇಲ್ಮನೆಯ ಇತಿಹಾಸದಲ್ಲೇ ಇದೊಂದು ಕಪ್ಪುಚುಕ್ಕೆ.
ಬಿಜೆಪಿ ಮತ್ತು ಜೆಡಿಎಸ್ ನವರು ಕಾಂಗ್ರೆಸ್ ಮೇಲೆ, ಕಾಂಗ್ರೆಸ್ ಮುಖಂಡರು ಯಡಿಯೂರಪ್ಪ ಸರಕಾರದ ವಿರುದ್ದ ಕಿಡಿಕಾರುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದಿನ ಘಟನೆಯನ್ನು ವಾಖ್ಯಾನಿಸುತ್ತಾ, "ಇದು ಕ್ರಿಮಿನಲ್ ಆಕ್ಟ್, ನರೇಂದ್ರ ಮೋದಿಯವರ ಪ್ರಜಾಪ್ರಭುತ್ವ"ಎಂದು ಕಿಡಿಕಾರಿದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಸರಕಾರಕ್ಕೆ ಏಳು ಪ್ರಶ್ನೆಗಳನ್ನು ಕೇಳಿದ್ದಾರೆ. ಅದು ಹೀಗಿದೆ"
"ವಿಧಾನಪರಿಷತ್ ನಲ್ಲಿ @BJP4Karnataka ಸಚಿವರು ಮತ್ತು ಸದಸ್ಯರಿಂದ ನಡೆದಿರುವ ಗೂಂಡಾಗಿರಿ ರಾಜ್ಯದ ಮಾತ್ರವಲ್ಲ, ದೇಶದ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಕಪ್ಪು ಅಧ್ಯಾಯ. ಇದು ಖಂಡಿತ ಸಾಂವಿಧಾನಿಕ ಪ್ರಜಾಪ್ರಭುತ್ವ ಅಲ್ಲ, ಇದು @narendramodi ಪ್ರಜಾಪ್ರಭುತ್ವ. This is Criminal act" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
"ವಿಧಾನಪರಿಷತ್ ಸಭಾಪತಿಗಳನ್ನು ಅವರ ಕಚೇರಿಯಲ್ಲಿ ಬಲತ್ಕಾರದಿಂದ ಕೂಡಿಹಾಕಿ, ಅವರ ಅನುಮತಿ ಇಲ್ಲದೆ ಉಪಸಭಾಪತಿಗಳನ್ನು ಸಭಾಪತಿ ಪೀಠದ ಮೇಲೆ ಕೂರಿಸಿ ಕಲಾಪ ನಡೆಸಲು ಹೊರಟಿರುವ @BJP4Karnataka ಸದಸ್ಯರು ಹಾಡಹಗಲೇ ಸಂವಿಂಧಾನಕ್ಕೆ ಅಪಚಾರ ಎಸಗಿದ್ದಾರೆ, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದಾರೆ" ಇದು ಸಿದ್ದರಾಮಯ್ಯ ಮಾಡಿದ ಟ್ವೀಟ್. ಸಿದ್ದರಾಮಯ್ಯ ಎಸೆದ 7 ಪ್ರಶ್ನೆಗಳು ಹೀಗಿದೆ:

ವಿಧಾನಪರಿಷತ್ ಕಲಾಪ
1. ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪ ನಡೆಸಲು ಸರ್ವಸಮ್ಮತಿಯಿಂದ ರಚಿಸಲಾದ ನಿಯಮಾವಳಿಗಳಿವೆ. @BJP4Karnataka ಸದಸ್ಯರ ಇಂದಿನ ನಡವಳಿಕೆ ಆ ನಿಯಮಾಳಿಗಳಿಗೆ ಅನುಗುಣವಾಗಿತ್ತೇ ಎಂದು ಕಾನೂನು ಸಚಿವ @JCMBJP ಮತ್ತು @CMofKarnataka ರಾಜ್ಯದ ಜನತೆಗೆ ತಿಳಿಸಬೇಕು.

ಉಪಸಭಾಪತಿಯವರಿಗೆ ಅವಕಾಶ
2. ವಿಧಾನ ಪರಿಷತ್ ಸಭಾಪತಿ, ವಿದೇಶ ಪ್ರವಾಸ, ಅನಾರೋಗ್ಯ ಇಲ್ಲವೇ ಇನ್ನು ಯಾವುದೋ ಕಾರಣಕ್ಕೋ ಕರ್ತವ್ಯನಿರ್ವಹಣೆ ಮಾಡಲು ಸಾಧ್ಯವಾಗದೆ ಇದ್ದಾಗ ಸಭಾಪತಿಯಾಗಿ ಕಾರ್ಯನಿರ್ವಹಿಸಲು ಅವರು ಉಪಸಭಾಪತಿಯವರಿಗೆ ಅವಕಾಶವನ್ನು ನೀಡಬಹುದೆಂದು ಸದನದ ನಿಯಮಾವಳಿ ಹೇಳಿದೆ. ಇದರ ಪಾಲನೆಯಾಗಿದೆಯೇ? @CMofKarnataka. @BJP4Karnataka ವಿಧಾನಪರಿಷತ್ ಸಭಾಪತಿ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ನೋಟೀಸ್ ನೀಡಿದ್ದರು. ನಿಯಮಾವಳಿ ಪ್ರಕಾರ ಅದರ ಇತ್ಯರ್ಥಕ್ಕೆ 14 ದಿನಗಳ ಕಾಲಾವಕಾಶ ಇದೆ. ಆದರೆ ನೋಟೀಸ್ ಕ್ರಮಬದ್ದವಾಗಿಲ್ಲ ಎಂದು ಸಭಾಪತಿಯವರು ತಿರಸ್ಕರಿಸಿದ್ದ ಕಾರಣ ಆ ವಿಷಯ ಇಂದಿನ ಅಜೆಂಡಾದಲ್ಲಿ ಇರಲಿಲ್ಲ.

ಅವಿಶ್ವಾಸ ನಿರ್ಣಯ ಅಜೆಂಡಾ
3. ಅವಿಶ್ವಾಸ ನಿರ್ಣಯ ಅಜೆಂಡಾದಲ್ಲಿ ಸೇರ್ಪಡೆಯಾದ ನಂತರ ಸದನದಲ್ಲಿ ಅದನ್ನು ಕನಿಷ್ಠ ಹತ್ತು ಜನ ಯಾವುದೇ ಚರ್ಚೆ ಇಲ್ಲದೆ ಬೆಂಬಲಿಸಬೇಕು. ಅದರ ಆಧಾರದಲ್ಲಿ ಮುಂದಿನ ಐದು ದಿನಗಳೊಳಗೆ ನಿರ್ಣಯದ ಚರ್ಚೆಗೆ ಸಭಾಪತಿಗಳು ದಿನ ಗೊತ್ತುಪಡಿಸಬೇಕು. ಈ ನಿಯಮ ಪಾಲನೆಯಾಗಿದೆಯೇ? @CMofKarnataka

ಇದೇನು ಬನಾನ ರಿಪಬ್ಲಿಕಾ?
4. @BJP4Karnataka ಸದಸ್ಯರ ಅವಿಶ್ವಾಸ ನಿರ್ಣಯದ ನೊಟೀಸ್ ಸಭಾಪತಿಯವರಿಂದ ತಿರಸ್ಕೃತಗೊಂಡಿದೆ ಮತ್ತು ಅಜೆಂಡಾದಲ್ಲಿಯೂ ಇರಲಿಲ್ಲ. ಹೀಗಿದ್ದಾಗ ಅವರೇ ಉಪಸಭಾಪತಿಯವರನ್ನು ಅಕ್ರಮವಾಗಿ ಪೀಠದಲ್ಲಿ ಕೂರಿಸಿ ತಾವೇ ನಿರ್ಧರಿಸಿದ ಅಜೆಂಡಾ ಮೂಲಕ ಕಲಾಪ ನಡೆಸಲು ಇದೇನು ಬನಾನ ರಿಪಬ್ಲಿಕಾ?

ಸಭಾಪತಿಯವರಿಗೆ ನೇರವಾಗಿ ಪತ್ರಬರೆದಿದ್ದೇ ಅಕ್ರಮ ನಡವಳಿಕೆ
5. ವಿಧಾನಪರಿಷತ್ ಅಧಿವೇಶನ ನಡೆಸಲು ಸಂಸದೀಯ ವ್ಯವಹಾರಗಳ ಖಾತೆಯ ಕಾರ್ಯದರ್ಶಿಗಳು ಸಭಾಪತಿಯವರಿಗೆ ನೇರವಾಗಿ ಪತ್ರಬರೆದಿದ್ದೇ ಅಕ್ರಮ ನಡವಳಿಕೆ. ಹೀಗಿದ್ದರೂ ಸಭಾಪತಿಗಳು ಸಂಘರ್ಷಕ್ಕಿಳಿಯದೆ ಸೌಜನ್ಯಪೂರ್ವಕವಾಗಿ ಅಧಿವೇಶನ ಕರೆದಿದ್ದಾರೆ. ಈ ಸೌಜನ್ಯವೇ ತಪ್ಪಾಯಿತೇ?

ನಿಯಮಾವಳಿಯಂತೆ ಸದನದಲ್ಲಿ ಕೋರಮ್
6. ನಿಯಮಾವಳಿಯಂತೆ ಸದನದಲ್ಲಿ ಕೋರಮ್ ಬಗ್ಗೆ ಮಾರ್ಷಲ್ ಗಳಿಂದ ದೃಡೀಕರಿಸಿಕೊಂಡ ನಂತರ ಸೂಚನಾ ಗಂಟೆ ನಿಲ್ಲಿಸಲು ತಿಳಿಸಿ ಸಭಾಪತಿಗಳು ಬಂದು ಪೀಠವನ್ನು ಅಲಂಕರಿಸಬೇಕಾಗುತ್ತದೆ. ಇಂದು ಸೂಚನಾಗಂಟೆ ನಿಲ್ಲಿಸುವ ಮೊದಲೇ @BJP4Karnataka ಸದಸ್ಯರು ಉಪಸಭಾಪತಿಯವರನ್ನು ಕೂರಿಸಿ ಕಲಾಪ ನಡೆಸಲು ಹೊರಟಿದ್ದು ಅಕ್ರಮ ಅಲ್ಲವೇ?
Recommended Video

ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ
7. ರಾಜ್ಯದ ಸಚಿವರಾದ @drashwathcn ಅವರು ಖುದ್ದಾಗಿ ಸಭಾಪತಿ ಪೀಠದಲ್ಲಿ ಉಪಸಭಾಪತಿಯವರನ್ನು ಅಕ್ರಮವಾಗಿ ಕೂರಿಸ್ತಾರೆ, ಕಾನೂನು ಸಚಿವ @JCMBJP ಸದನದಲ್ಲಿ ಮಾರ್ಷಲ್ ಗಳಿಗೆ ಧಮಕಿ ಹಾಕ್ತಾರೆ. ತಮ್ಮ ಪಕ್ಷದ ಸದಸ್ಯರನ್ನು ಗೂಂಡಾಗಿರಿಗೆ ಪ್ರಚೋದಿಸುವ ಇವರು ಸಚಿವರಾಗಲು ಅರ್ಹರೇ? ವಿಧಾನಪರಿಷತ್ ನಲ್ಲಿ ಇಂದು ನಡೆದಿರುವ ಘಟನಾವಳಿಗಳು @BJP4Karnataka ಮತ್ತು @JanataDal_S ಸದಸ್ಯರು ಕೂಡಿ ನಡೆಸಿರುವ ಯೋಜಿತ ಷಡ್ಯಂತ್ರ.
ಇದರಿಂದ ಬಿಜೆಪಿ ಮತ್ತು ಜೆಡಿ (ಎಸ್) ನಡುವಿನ ಒಳಒಪ್ಪಂದ ಬಯಲಾಗಿದೆ. ಇದಕ್ಕಾಗಿ ಎರಡೂ ಪಕ್ಷಗಳ ನಾಯಕರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ವಿಧಾನಪರಿಷತ್ ನಲ್ಲಿ ನಡೆದ ಘಟನಾವಳಿಗಳನ್ನು ನಿಷ್ಪಕ್ಷಪಾತವಾಗಿ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಆಶಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಭರವಸೆ ನಮಗಿದೆ.












Click it and Unblock the Notifications