ಹೀನಾಯ ಸೋಲಿನ ಬಳಿಕ ಸೋಲಿನ ಪರಾಮರ್ಶೆ; ಸೋಲು ಗೆಲುವು ರಾಜಕಾರಣದಲ್ಲಿ ಇದ್ದಿದ್ದೆ: ಬಸವರಾಜ ಬೊಮ್ಮಾಯಿ
ಬೆಂಗಳೂರು, ಮೇ 16: ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಬಿಜೆಪಿ, ಹೀನಾಯವಾಗಿ ಸೋಲು ಕಂಡಿದೆ. ಈಗಾಗಲೇ ಸೋಲಿಗೆ ಕಾರಣವೇನು ಎನ್ನುವ ಪರಾಮರ್ಶೆ ಹಾಗೂ ಲೋಕಸಭಾ ಚುನಾವಣೆಗೆ ಬಿಜೆಪಿ ತಯಾರಿ ನಡೆಸಿದೆ.
ಈ ಕುರಿತು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಸೋಲು ಗೆಲುವು ರಾಜಕಾರಣದಲ್ಲಿ ಇದ್ದಿದ್ದೆ, ಚುನಾವಣೆಯ ಸೋಲು ಏಕೆ ಆಯ್ತು, ಏನು ಆಯ್ತು ಎಂದು ನಾವು ಪರಾಮರ್ಶೆ ಮಾಡಿದ್ದೇವೆ ಎಂದು ಹೇಳಿದರು.

ಈಗಾಗಲೇ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಸೋಮಣ್ಣ ಹಾಗೂ ಸುಧಾಕರ್ ಭೇಟಿ ಮಾಡಿರುವ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಮಾತನಾಡಿ, ಸುಧಾಕರ್ ಭೇಟಿ ಮಾಡಿದ್ದೀನಿ. ನಮ್ಮ ಜೊತೆ ಕೆಲಸ ಮಾಡಿದವರು ಅಲ್ಪ ಪ್ರಮಾಣದಲ್ಲಿ ಸೋತಿದ್ದಾರೆ. ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಸೋಲಿನ ಕಾರಣದ ಬಗ್ಗೆ ಚರ್ಚೆ ಮಾಡಿದ್ದೇವೆ. ಸೋಮಣ್ಣನವರು ಯಾವಾಗ ಹಿನ್ನೆಡೆಯಾದರೂ ಮತ್ತೆ ಪುಟಿದೇಳುತ್ತಾರೆ. ಬರುವ ದಿನಗಳಲ್ಲಿ ಅವರಿಗೆ ಒಳ್ಳೆಯ ಅವಕಾಶ ಸಿಗಲಿದೆ. ನಾವು ಅವರ ಜೊತೆ ನಿಂತಿದ್ದೇವೆ ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮಣ್ಣ ನಮ್ಮ ಹಿರಿಯ ನಾಯಕರು. ಸುಮಾರು 40 ವರ್ಷ ಜನಸೇವೆ ಮಾಡಿದವರು. ವಸತಿ ಸಚಿವರಾಗಿ ಅವರು ಬೆಂಗಳೂರಿನ ಅಭಿವೃದ್ಧಿಗೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಗೋವಿಂದರಾಜ ನಗರವನ್ನು ಮಾದರಿ ಕ್ಷೇತ್ರ ಮಾಡಿದ್ದಾರೆ. ಸೋಲು ಗೆಲುವು ರಾಜಕಾರಣದಲ್ಲಿ ಇದ್ದಿದ್ದೆ. ಅದನ್ನು ಮೀರಿ ಮತ್ತೆ ಬರಬೇಕು. ಸೋಮಣ್ಣ ಮತ್ತು ಪಕ್ಷ ಎರಡು ಕೂಡ ಆ ಕೆಲಸ ಮಾಡಲಿದೆ ಎಂದು ಹಂಗಾಮಿ ಸಿಎಂ ಬೊಮ್ಮಾಯಿ ಹೇಳಿದರು.
ಇನ್ನೂ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ತಿಳಿದ ಮೇಲಷ್ಟೇ ಮಾತನಾಡಬಹುದು. ನಾಳೆ ಅಥವಾ ನಾಡಿದ್ದು ಅಧ್ಯಕ್ಷರು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮಾಡಬಹುದು ಎಂದು ಬೊಮ್ಮಾಯಿ ಹೇಳಿದರು

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಹಗ್ಗಜಗ್ಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅದು ಅವರ ಪಕ್ಷದ ವಿಚಾರ. ಸಿಎಂ ಯಾರು ಆಗುತ್ತಾರೆ ಎನ್ನುವುದನ್ನು ಕಾಯ್ದು ನೋಡೊಣ ಎಂದರು.
ಡಿಜಿಪಿ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿರುವ ವಿಚಾರ ಪ್ರತಿಕ್ರಿಯಿಸಿ ಅವರು, ಪ್ರವೀಣ್ ಸೂದ್ ನಿರ್ದೇಶಕರನ್ನಾಗಿ ಮಾಡಿರುವುದು ಕೇಂದ್ರ ಸರ್ಕಾರದ ನಿರ್ಧಾರ. ಆಲ್ ಇಂಡಿಯಾ ಸರ್ವೀಸ್ ಇರುವುದರಿಂದ ಅವರು ಮಾಡಿದ್ದಾರೆ ಎಂದರು.
ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಅನೌಪಚಾರಿಕ ಮಾತುಕತೆ ನಡೆಸಿದ ಬೊಮ್ಮಾಯಿ
ನನ್ನ ಆಡಳಿತ ಅವಧಿಯಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸಹಕಾರ ನೀಡಿರುವುದಕ್ಕೆ ಧನ್ಯವಾದಗಳು ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು, ನಾವು ಸಂವಿಧಾನ ಒಪ್ಪಿಕೊಂಡಿದ್ದೇವೆ. ಆಡಳಿತದಲ್ಲಿ ಕಾರ್ಯಾಂಗ, ಶಾಸಕಾಂಗ ಎರಡೂ ಪ್ರಮುಖ ಪಾತ್ರ ವಹಿಸುತ್ತವೆ. ನಾವು ಅದರ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಾನು ಅಧಿಕಾರಕ್ಕೆ ಬಂದಾಗ ಕೋವಿಡ್, ಪ್ರವಾಹ ಸಂದರ್ಭ ಎದುರಾಯಿತು. ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ನಮ್ಮ ಆಡಳಿತದಲ್ಲಿ ಯಾವುದೇ ಹಿಂಸಾತ್ಮಕ ಚಟುವಟಿಕೆಗಳು ನಡೆಯಲಿಲ್ಲ. ಚುನಾವಣೆ ಸಂದರ್ಭದಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆಯದಿಲ್ಲ. ಗೃಹ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಾವು ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಮೀಸಲಾತಿ ಹೆಚ್ಚಳ, ಸರ್ಕಾರಿ ನೌಕರ ಸವಾಲು, ಹೊಸ ನೀತಿಗಳನ್ನು ಜಾರಿಗೆ ತಂದಿದ್ದೇವೆ. ಉದ್ಯೊಗ ನೀತಿ, ಕೈಗಾರಿಕಾ ನೀತಿ ಎಲ್ಲ ಹೊಸ ಯೊಜನೆಗಳ ತರಲು ಅಧಿಕಾರಿಗಳ ಪಾತ್ರ ಮಹತ್ವದ್ದು, ನಿಮ್ಮ ಸಹಕಾರ ಅತ್ಯಂತ ಮುಖ್ಯವಾಗಿತ್ತು ಎಂದರು.
ನಾವು ಐದು ವರ್ಷಕ್ಕೆ ಬರುವವರು, ನಿವು ಸುದೀರ್ಘ ಅಧಿಕಾರದಲ್ಲಿ ಇರುವವರು. ರಾಜ್ಯದ ಏಳಿಗೆಗೆ ಎಲ್ಲರೂ ಶ್ರಮಿಸೋಣ. ಕೆಲಸ ವೇಗವಾಗಿ ಆಗಲಿ ಅಂತ ನಾನು ಗಟ್ಟಿ ಧನಿಯಲ್ಲಿ ಹೇಳಿರಬಹುದು. ಆದರೆ ಯಾವುದೇ ವಯಕ್ತಿಕ ಅಭಿಪ್ರಾಯ ಇರಲಿಲ್ಲ ಎಂದರು.
ಕರ್ನಾಟಕ ಹಲವಾರು ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಜಿಎಸ್ಟಿಯಲ್ಲಿ ಮುಂಚೂಣಿಯಲ್ಲಿದ್ದೇವೆ. ಬಂಡವಾಳ ಸೆಳೆಯುವಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಕರ್ನಾಟಕದ ಅಭಿವೃದ್ಧಿಗೆ ಅಧಿಕಾರಿಗಳ ಪಾತ್ರ ಮುಖ್ಯವಾಗಿದ್ದು, ರಾಜ್ಯದ ಅಭಿವೃದ್ಧಿಗೆ ಎಲ್ಲರೂ ಕೆಲಸ ಮಾಡೋಣ ಎಂದರು.












Click it and Unblock the Notifications