ಕರ್ನಾಟಕ: ಮಳೆಯಿಂದಾಗಿ ತರಕಾರಿಗಳು ನಾಶ, ದರ ದಿಢೀರ್ ಏರಿಕೆ
ರಾಜ್ಯಾದ್ಯಂತ ಕಳೆದ ಒಂದು ತಿಂಗಳಿನಿಂದ ಭಾರಿ ಮಳೆಯಾಗುತ್ತಿರುವ ಪರಿಣಾಮ ತರಕಾರಿ ಎಲ್ಲೆಡೆ ಕೊಳೆತುಹೋಗಿವೆ. ಹೀಗಾಗಿ ನಗರಕ್ಕೆ ತರಕಾರಿಗಳ ಸರಬರಾಜು ಕಡಿಮೆಯಾಗಿದ್ದು, ಬೆಲೆ ಗಗನಕ್ಕೇರಿದೆ.
ಒಂದೆಡೆ ಜನರು ದರ ಏರಿಕೆ ಬಿಸಿಗೆ ತುತ್ತಾಗಿದ್ದರೆ ಇನ್ನೊಂದಡೆ ತಂದ ತರಕಾರಿ ಮಾರಾಟವಾಗದೆ ಚಿಲ್ಲರೆ ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ.
ಬದನೆ, ಬೀನ್ಸ್, ದಪ್ಪ ಮೆಣಸಿನಕಾಯಿ, ಕ್ಯಾರೆಟ್, ಕ್ಯಾಪ್ಸಿಕಂ, ಬಟಾಣಿ, ಈರುಳ್ಳಿ ಸೇರಿದಂತೆ ಹಲವು ತರಕಾರಿಗಳ ಬೆಲೆ ಏರಿಕೆಯಾಗಿದೆ.
ನಿರಂತರ ಮಳೆಯಿಂದಾಗಿ ರೈತರ ಜಮೀನಿಲ್ಲೆ ತರಕಾರಿಗಳು ಹಾಳಾಗಿವೆ. ಹೀಗಾಗಿ ದೇವನಹಳ್ಳಿ, ಕೋಲಾರ, ರಾಮನಗರ, ತುಮಕೂರು, ಮೈಸೂರು, ನಾಗಮಂಗಲದಿಂದ ನಗರದ ಮಾರುಕಟ್ಟೆಗಳಿಗೆ ಮೊದಲಿನಷ್ಟು ತರಕಾರಿಗಳು ಬರುತ್ತಿಲ್ಲ.
ಸದ್ಯ ಎಲ್ಲೆಡೆ ಮದುವೆ, ಗೃಹ ಪ್ರವೇಶ ಸೇರಿದಂತೆ ಕಾರ್ಯಕ್ರಮಗಳು ಹೆಚ್ಚಿವೆ. ಇಂತಹ ಸಮಯದಲ್ಲಿ ತರಕಾರಿ ಬೆಲೆ ಏರಿಕೆ ಕಂಡಿರುವುದು ಕಾರ್ಯಕ್ರಮ ಮಾಡುವವರನ್ನು ದಿಗಿಲುಗೊಳಿಸಿದೆ. ಕೆಜಿಗೆ 10 ರೂಪಾಯಿ ತೂಗುತ್ತಿದ್ದ ಟೊಮೇಟೊ ಸದ್ಯ 100 ರೂಪಾಯಿ ಗಡಿ ದಾಟಿದೆ. ಊಟಕ್ಕೆ ಅವಶ್ಯವಾಗಿ ಬೇಕಿರುವ ತರಕಾರಿಗಳು ದುಬಾರಿಯಾಗಿರುವುದು ಚಿಂತೆಗೆ ಕಾರಣವಾಗಿದೆ. ಮದುವೆ ಮಾಡುವವರು ಅನಿವಾರ್ಯವಾಗಿಯೇ ಖರೀದಿಸಬೇಕಾಗಿದೆ. ಇದಲ್ಲದೆ ಹೋಟೆಲ್‌ಗಳಲ್ಲಿ ಟೊಮೇಟೊ ಬಳಕೆ ತಗ್ಗಿಸಲಾಗಿದೆ.
ಜತೆಗೆ ಆಂಧ್ರ ಪ್ರದೇಶ, ತಮಿಳುನಾಡಿನಿಂದ ತರಕಾರಿ ಪೂರೈಕೆ ಅಷ್ಟಾಗಿ ಆಗಿಲ್ಲ. ಮಳೆ ಕಡಿಮೆ ಇರುವ ಮಹಾರಾಷ್ಟ್ರದಿಂದ ಕೊತ್ತಂಬರಿ ಮತ್ತಿತರೆ ತರಕಾರಿ ಉತ್ಪನ್ನ ತಕ್ಕಮಟ್ಟಿಗೆ ಬಂದಿದೆ ಎಂದು ಸಗಟು ವ್ಯಾಪಾರಿಗಳು ಹೇಳಿದ್ದಾರೆ.
ಇದರ ಪರಿಣಾಮ ವಿವಿಧ ಪ್ರದೇಶಗಳಲ್ಲಿ ಮಾರಾಟವಾಗುವ ತರಕಾರಿಗಳ ಚಿಲ್ಲರೆ ದರ ಹೆಚ್ಚಾಗಿದೆ. ತರಕಾರಿಗಳು ಸಗಟು ಬೆಲೆಯ ಕಳೆದ ವಾರಕ್ಕೆ ಹೋಲಿಸಿದರೆ 5-15ರೂವರೆಗೆ ಹೆಚ್ಚಾಗಿದೆ. 35-40ರೂ,ಗೆ ಸಿಗುತ್ತಿದ್ದ ಟೊಮೆಟೋ 50-60ರೂ.ಗೆ ಏರಿಕೆ ಕಂಡಿದೆ.
ಹಸಿಮೆಣಸಿನಕಾಯಿ35 ರೂ. ತಲುಪಿದ್ದರೆ, ಕೇಜಿ ಬಟಾಣಿ 210 ರೂ., ಕೇಜಿ ಬದನೆ 50 ರೂ., ಕ್ಯಾರೆಟ್ 50ರೂ., ಹೀರೇಕಾಯಿ 30 ರೂ. ಹಾಗೂ ಆಲೂಗಡ್ಡೆ 26 ರೂ.ಗೆ ಸಿಗುತ್ತಿದೆ.
ದರ ಏರಿಕೆಯಾದರೂ ಮಾಲು ತಂದು ಮಾರಾಟ ಮಾಡಲೇಬೇಕಾದ ಅನಿವಾರ್ಯತೆ ಇದೆ. ಸಾಲು ಸಾಲು ಹಬ್ಬ ಆಚರಿಸಿರುವ ಜನರು ಕಾರ್ತಿಕ ಮಾಸದಲ್ಲೂ ಮಾರುಕಟ್ಟೆಯತ್ತ ಹೆಚ್ಚು ಸುಳಿದಿಲ್ಲ.
ಇತ್ತೀಚೆಗೆ ಸಭೆ, ಸಮಾರಂಭಗಳಿಗೆ ಅವಕಾಶ ದೊರೆತಿದ್ದು, ಸಾವಿರಾರು ಜನ ಪಾಲ್ಗೊಳ್ಳುತ್ತಿದ್ದಾರೆ, ಆದರೆ ಚಿಲ್ಲರೆ ದರ ತುಟ್ಟಿ ಎಂಬ ಕಾರಣಕ್ಕೆ ಕಾರ್ಯಕ್ರಮಗಳ ಆಯೋಜನೆಗೆ ಸಗಟು ಮಳಿಗೆಗಳಲ್ಲೇ ಅಗತ್ಯ ತರಕಾರಿ ಖರೀದಿಸುತ್ತಿದ್ದಾರೆ. ಚಿಲ್ಲರೆ ಅಂಗಡಿಗಳಲ್ಲಿ 500 ಗ್ರಾಂ ತರಕಾರಿ ಕೊಳ್ಳುವ ಗ್ರಾಹಕರು ಹೆಚ್ಚುವರಿ 10-20 ಗ್ರಾಂಗೆ ಪೀಡಿಸುತ್ತಿದ್ದಾರೆ.
ಮಾರುಕಟ್ಟೆಯಿಂದ 20 ಸಾವಿರ ಮೌಲ್ಯದ ಸಗಟು ಮಳಿಗೆಯಿಂದ ತರಕಾರಿ ತರಲು 1500 ರೂ. ಖರ್ಚು ಬರುತ್ತದೆ. ಬೆಂಡೆಕಾಯಿ 40 ರೂ, ಕ್ಯಾಪ್ಸಿಕಂ ಕೇಜಿಗೆ 50-60 ರೂ, ಅಲಸಂದೆ 40 ರೂ., ಅವರೆಕಾಯಿ 35 ರೂ., ಬೀಟ್‌ರೂಟ್ 30 ರೂ., ಹಾಗೂ ನವಿಲುಕೋಸು ಕೆಜಿಗೆ 70 ರೂ. ಆಗಿದೆ.
ಕರಿಬೇವು ಕೆಜಿಗೆ 30 ರೂ. ಇದ್ದರೆ, ಒಂದು ಕಟ್ಟು ಕೊತ್ತಂಬರಿ ಸೊಪ್ಪಿಗೆ 20-30ರೂ. ಆಗಿದೆ.ಮಳೆ ನೀರಿನಿಂದಾಗಿ ಹೊಲಗಳಲ್ಲಿ ಬೆಳೆಗಳು ಕೊಳೆಯಲು ಪ್ರಾರಂಭಿಸುತ್ತಿದ್ದರೆ, ಮಳೆಯ ಸಮಯದಲ್ಲಿ ಕೆಲಸ ಮಾಡಲು ಕೂಲಿಗಳು ಲಭ್ಯವಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಿದ್ದಾರೆ ರೈತರು.
ಚಿಲ್ಲರೆ ಮಾರಾಟದಲ್ಲಿ ಬೀನ್ಸ್ ಬೆಲೆ ಕೆಜಿಗೆ 40 ರೂಪಾಯಿಯಿಂದ 80 ರೂ.ಗೆ ಏರಿಕೆಯಾಗಿದ್ದು, ಬದನೆಕಾಯಿ ಕೆಜಿಗೆ 30ರಿಂದ 90 ರೂ.ಗೆ 1 ವಾರದ ಸಮಯದಲ್ಲಿ ಏರಿಕೆಯಾಗಿದೆ. ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಕೆಆರ್ ಪುರಂ, ಯಶವಂತಪುರ ಮತ್ತು ಗಾಂಧಿ ಬಜಾರ್ಗಳಲ್ಲಿ ದುಬಾರಿ ಬೆಲೆಯಿಂದಾಗಿ ಗ್ರಾಹಕರು ತರಕಾರಿ ಖರೀದಿಗೆ ಮುಂದಾಗುತ್ತಿಲ್ಲ.
ಸಗಡು ಬೆಲೆ ಏರಿಕೆ ಬಳಿಕ ಸಹಜವಾಗಿ ಚಿಲ್ಲರೆ ದರ ದುಪ್ಪಟ್ಟಾಗುತ್ತಿದೆ. ನಿತ್ಯ ಈ ಬೆಲೆಗಳಲ್ಲಿ ವ್ಯತ್ಯಾಸವಾಗಲಿದ್ದು, ಸದ್ಯಕ್ಕೆ ಮಳೆ ಕಡಿಮೆಯಾದರೂ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ ಇದೆ.
ಮಳೆ ಹೀಗೆ ಮುಂದುವರೆದರೆ ಇನ್ನಷ್ಟು ಬೆಲೆ ಏರಿಕೆಯಾಗಬಹುದೆಂದು ಅಂದಾಜಿಸಲಾಗಿದೆ.