ಕಾಂಗ್ರೆಸ್‌ನಿಂದ ವೀರಶೈವ ಲಿಂಗಾಯತರಿಗೆ 65 ಟಿಕೆಟ್ ನೀಡಲು ಆಗ್ರಹ
ಶಾಮನೂರು ಶಿವಶಂಕರಪ್ಪ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ-ಲಿಂಗಾಯತ ಸಮಾಜದ ಮುಖಂಡರಿಗೆ 70 ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ
ನವದೆಹಲಿ, ಮಾರ್ಚ್ 16: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ 65 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಸಮುದಾಯದ ನಾಯಕರು ದೆಹಲಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆದ ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ಬುಧವಾರ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ-ಲಿಂಗಾಯತ ಸಮಾಜದ ಮುಖಂಡರಿಗೆ 70 ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಡಿಎಚ್ ವರದಿ ಮಾಡಿದೆ.

ಶಾಮನೂರು ಹಾಗೂ ಇತರ ಸಮುದಾಯದ ಮುಖಂಡರು ಖರ್ಗೆ ಅವರನ್ನು ಭೇಟಿ ಮಾಡಿ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಮುಖಂಡರಿಗೆ ಕಾಂಗ್ರೆಸ್ 42 ಟಿಕೆಟ್ ನೀಡಿದ್ದು, 18 ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಬಾರಿ ಸೀಟುಗಳನ್ನು ಹೆಚ್ಚಿಸಬೇಕು ಎಂದು ಎಐಸಿಸಿ ಮುಖ್ಯಸ್ಥರೂ ಆದ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಮನವಿಯಲ್ಲಿ ತಿಳಿಸಿದ್ದಾರೆ.
ಸಮುದಾಯದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಸ್‌ಆರ್ ಪಾಟೀಲ್ ಕೂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಆದರೂ ಪಕ್ಷ ಟಿಕೆಟ್ ನೀಡಿದರೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಪಕ್ಷದ ಮುಖಂಡರಿಗೆ ತಿಳಿಸಿದ್ದಾರೆ. ಸೋಮವಾರ ಹಿರಿಯ ಮುಖಂಡ ಎಂ ಬಿ ಪಾಟೀಲ್ ಕೂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ವೀರಶೈವ-ಲಿಂಗಾಯತ ಸಮುದಾಯದ ಮುಖಂಡರಿಗೆ 65 ಸ್ಥಾನ ನೀಡುವಂತೆ ಒತ್ತಾಯಿಸಿದ್ದರು.

ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ಲಾಭಿ ಎಲ್ಲ ಪಕ್ಷಗಳಲ್ಲೂ ಹೆಚ್ಚಾಗುತ್ತಿದೆ. ಮಠಾಧೀಶರು, ಸಮುದಾಯದ ನಾಯಕರು ತಮ್ಮ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವಂತೆ ರಾಜಕೀಯ ಪಕ್ಷಗಳ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಕುರಿತು ಈಗಾಗಲೇ ಸಾಲು ಸಾಲು ಸಭೆ ನಡೆಸಿರುವ ಕಾಂಗ್ರೆಸ್ ನಲ್ಲಿ ಜಾತಿವಾರು ಟಿಕೆಟ್ ಕುರಿತು ಸಾಕಷ್ಟು ಲಾಭಿಗಳು ನಡೆಯುತ್ತಿವೆ. ತಮ್ಮ ತಮ್ಮ ಸಮುದಾಯದವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಜಾತಿವಾರು ಟಿಕೆಟ್ ಗಾಗಿ ಒತ್ತಡ ಹಾಕಿದ್ದಾರೆ. ಇನ್ನೂ ಕಳೆದ ಬಾರಿ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಸ್ಥಾನಗಳನ್ನ ನೀಡುವಂತೆ ಒತ್ತಡ ಹಾಕಿದ್ದು, ಈ ವಿಚಾರವೇ ಕಾಂಗ್ರೆಸ್ ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇನ್ನೂ ಲಿಂಗಾಯತ ಸಮುದಾಯಾದ ನಾಯಕರು ಬೇಡಿಕೆ ಇಟ್ಟ ಬೆನ್ನಲ್ಲೇ ಕುರುಬ ಸಮುದಾಯದ ನಾಯಕರು ತಮಗೂ 40 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಆಗ್ರಹ ಮಾಡಿದ್ದಾರೆ. ಈ ಬಗ್ಗೆ ಕರ್ನಾಟಕ ಪ್ರದೇಶ ಕುರುಬರ ಸಂಘ ಪತ್ರಿಕಾಗೋಷ್ಠಿ ನಡೆಸಿ, ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಕುರುಬ ಸಮುದಾಯದ 20 ಜನರಿಗೆ ಟಿಕೆಟ್ ನೀಡಿತ್ತು. 2018 ರಲ್ಲಿ 8 ಮಂದಿ ಕುರುಬ ಸಮುದಾಯದ ಶಾಸಕರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 150 ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಮತದಾರರು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದು, ಈ ನಿಟ್ಟಿನಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕೆನ್ನುವುದು ಕುರುಬ ಸಮುದಾಯದ ಬೇಡಿಕೆ ಆಗಿದೆ.












Click it and Unblock the Notifications