Vande Bharat Express: ಯಾದಗಿರಿ ಜನರಿಗೆ ರೈಲ್ವೆ ಇಲಾಖೆಯಿಂದ ಸಿಹಿಸುದ್ದಿ
ಯಾದಗಿರಿ, ಜುಲೈ 28: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವಿಚಾರದಲ್ಲಿ ರೈಲ್ವೆ ಇಲಾಖೆ ಯಾದಗಿರಿ ಜಿಲ್ಲೆಯ ಜನರಿಗೆ ಸಿಹಿಸುದ್ದಿ ನೀಡಿದೆ. ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ರೈಲು ಯಾದಗಿರಿಯಲ್ಲಿ ನಿಲುಗಡೆಗೊಳ್ಳಲು ಮತ್ತೆ ದಿನಾಂಕ ನಿಗದಿ ಮಾಡಲಾಗಿದೆ.
ಬೆಂಗಳೂರು ನಗರದ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇಸರಿ ರೈಲು ಯಾದಗಿರಿಯಲ್ಲಿ ನಿಲುಗಡೆಗೊಳ್ಳಲಿದೆ. ಈಗಾಗಲೇ ಮೂರು ಬಾರಿ ದಿನಾಂಕ ಘೋಷಣೆ ಮಾಡಿ, ಅದನ್ನು ರದ್ದುಗೊಳಿಸಲಾಗಿದೆ.

ದಕ್ಷಿಣ ಮಧ್ಯ ರೈಲ್ವೆ ಈ ಕುರಿತು ಆದೇಶವನ್ನು ಹೊರಡಿಸಿದೆ. ರೈಲು ನಂಬರ್ 22232 ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ ರೈಲು 3/8/2024 ರಿಂದ ಮತ್ತು ರೈಲು ನಂಬರ್ 22231 ಕಲಬುರಗಿ-ಎಸ್‌ಎಂವಿಟಿ ಬೆಂಗಳೂರು ರೈಲು 4/8/2024 ರಿಂದ ಯಾದಗಿರಿಯಲ್ಲಿ 1 ನಿಮಿಷಗಳ ಕಾಲ ನಿಲುಗಡೆಗೊಳ್ಳಲಿದೆ ಎಂದು ಹೇಳಿದೆ.
ಸಚಿವ ವಿ. ಸೋಮಣ್ಣ ಕಾರ್ಯಕ್ರಮ: ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯಾದಗಿರಿಯಲ್ಲಿ ನಿಲುಗಡೆಗೊಳ್ಳುವ ಕಾರ್ಯಕ್ರಮವನ್ನು ರೈಲ್ವೆ ಖಾತೆ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಆಗಸ್ಟ್ 3ರಂದು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ರೈಲು ನಂಬರ್ 22232 ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ ರೈಲು 21.44ಕ್ಕೆ ಯಾದಗಿರಿಗೆ ಆಗಮಿಸಿ 21.45ಕ್ಕೆ ಹೊರಡಲಿದೆ. ರೈಲು ನಂಬರ್ 22231 ಕಲಬುರಗಿ-ಎಸ್‌ಎಂವಿಟಿ ಬೆಂಗಳೂರು ರೈಲು 5.54ಕ್ಕೆ ಯಾದಗಿರಿಗೆ ಆಗಮಿಸಿ 5.55ಕ್ಕೆ ಹೊರಡಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
4ನೇ ಬಾರಿಗೆ ಯಾದಗಿರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ದಿನಾಂಕ ನಿಗದಿ ಮಾಡಲಾಗಿದೆ. ವಂದೇ ಭಾರತ್ ರೈಲನ್ನು ಯಾದಗಿರಿಯಲ್ಲಿ ಜುಲೈ 27ರಿಂದಲೇ ರೈಲು ನಿಲುಗಡೆ ಮಾಡುವುದಾಗಿ ಜುಲೈ 26ರಂದು ಆದೇಶ ಹೊರಡಿಸಲಾಗಿತ್ತು. ಆದರೆ ಅದನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿತ್ತು.
ಭಾರತೀಯ ರೈಲ್ವೆ 2024 ಮಾರ್ಚ್ 15ರಿಂದ ಬೆಂಗಳೂರು ನಗರ-ಕಲಬುರಗಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಿದೆ. ರೈಲು ಯಾದಗಿರಿ ನಿಲ್ದಾಣದ ಮೂಲಕ ಸಾಗುತ್ತದೆ. ಆದರೆ ಜಿಲ್ಲಾ ಕೇಂದ್ರವಾದ ಯಾದಗಿರಿಯಲ್ಲಿ ರೈಲಿಗೆ ನಿಲುಗಡೆ ನೀಡಿಲ್ಲ. ಇದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಆದ್ದರಿಂದ ರೈಲ್ವೆ ಇಲಾಖೆಗೆ ವಂದೇ ಭಾರತ್ ರೈಲು ಯಾದಗಿರಿಯಲ್ಲಿ ನಿಲುಗಡೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಅಂತಿಮವಾಗಿ ರೈಲ್ವೆ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿತ್ತು. ಆದರೆ ಲೋಕಸಭೆ ಚುನಾವಣೆ 2024ರ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ರೈಲು ನಿಲುಗಡೆಗೊಳ್ಳಲು ದಿನಾಂಕ ಘೋಷಣೆ ಮಾಡಲಿಲ್ಲ.
ಬಳಿಕ ಮೂರು ಬಾರಿ ದಿನಾಂಕ ಘೋಷಣೆ ಮಾಡಿದರೂ ಸಹ ಅದನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಯಿತು. ಈಗ ರೈಲ್ವೆ ಖಾತೆ ರಾಜ್ಯ ಸಚಿವರ ಸಮ್ಮುಖದಲ್ಲಿಯೇ ಕಾರ್ಯಕ್ರಮವನ್ನು ನಡೆಸಿ ಯಾದಗಿರಿಯಲ್ಲಿ ರೈಲು ನಿಲುಗಡೆ ಮಾಡಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.
ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ನಡುವೆ ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತದೆ. ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ. ಗುರುವಾರ ಹೊರತುಪಡಿಸಿ ವಾರದ ಉಳಿದ ದಿನ ಬೆಂಗಳೂರು-ಕಲಬುರಗಿ ನಡುವೆ ರೈಲು ಸಂಚಾರ ನಡೆಸುತ್ತದೆ.
ರೈಲು ರಾಯಚೂರು ಜಂಕ್ಷನ್, ಮಂತ್ರಾಲಯ ರಸ್ತೆ, ಗುಂತಕಲ್ ಜಂಕ್ಷನ್, ಅನಂತಪುರ ಮತ್ತು ಯಲಹಂಕಹದಲ್ಲಿ ನಿಲುಗಡೆ ಹೊಂದಿದೆ. ಬೆಂಗಳೂರು ನಗರದಿಂದ ಮಂತ್ರಾಲಯಕ್ಕೆ ಹೋಗುವ ಭಕ್ತರು ಈ ಐಷಾರಾಮಿ ರೈಲಿನಲ್ಲಿ ಸಂಚಾರವನ್ನು ನಡೆಸಬಹುದಾಗಿದೆ.












Click it and Unblock the Notifications