Vande Bharat Express: ವಂದೆ ಭಾರತ್‌ಗೆ ಕಲ್ಲು ಹೊಡೆದರೆ 5 ವರ್ಷ ಜೈಲು!
ಬೆಂಗಳೂರು, ಮಾರ್ಚ್ 06: ನೈಋತ್ಯ ರೈಲ್ವೆ ವಲಯದಲ್ಲಿ ಹಾದು ಹೋಗುತ್ತಿದ್ದ ಮೂರು ಬೇರೆ ಬೇರೆ ವಂದೇ ಭಾರತ್ ರೈಲುಗಳ ಮೇಲೆ ಮಾರ್ಚ್ 3ರ ಭಾನುವಾರ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಈ ಘಟನೆಯನ್ನು ರೈಲ್ವೇ ಇಲಾಖೆ ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದು, ಇದು ಕ್ರಿಮಿನಲ್ ಅಪರಾಧ ಎಂದು ಪ್ರಕಟಣೆ ಹೊರಡಿಸಿದೆ.
ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗದಿದ್ದರೂ ರೈಲಿನ ಕಿಟಕಿ ಗಾಜುಗಳಿಗೆ ಹಾನಿಯಾಗಿತ್ತು. ಕಲ್ಲು ತೂರಾಟ ವರದಿಯಾಗಿದ್ದ ಮೂರು ಘಟನೆಗಳಲ್ಲಿ ಎರಡು ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ಸಂಭವಿಸಿವೆ. ಮತ್ತೊಂದು ಘಟನೆ ಮೈಸೂರು-ಎಂಜಿಆರ್ ಸೆಂಟ್ರಲ್ ವಂದೇ ಭಾರತ್ ರೈಲಿನ ಮೇಲೆ ಕಲ್ಲು ಎಸೆಯಲಾಗಿತ್ತು.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನೈಋತ್ಯ ರೈಲ್ವೇ ಈ ಬಗ್ಗೆ ಶಿಕ್ಷೆ ಮತ್ತು ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದ್ದು, ಕಿಡಿಗೇಡಿಗಳನ್ನು ಎಚ್ಚರಿಸಿದೆ. "ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೆಲವು ಕಡೆ ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದ ಕೆಲ ಘಟನೆಗಳು ಸಂಭವಿಸಿವೆ. ಚಳಗೇರಿ - ಕುಮಾರಪಟ್ಟಣಂ ಸೈಡಿಂಗ್ ಮತ್ತು ಚಿಕ್ಕಬಾಣಾವರ, ಕುಪ್ಪಂ ಮತ್ತು ಧರ್ಮಾವರಂ ರೈಲ್ವೆ ನಿಲ್ದಾಣಗಳ ಬಳಿ ವರದಿಯಾಗಿವೆ. ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ರೈಲ್ವೆ ರಕ್ಷಣಾ ಪಡೆ ಮತ್ತು ರೈಲ್ವೆ ಪೊಲೀಸ್ ಸಿಬ್ಬಂದಿ ಅಂತಹ ಪ್ರದೇಶಗಳಲ್ಲಿ ಜಾಗರೂಕರಾಗಿದ್ದಾರೆ" ಎಂದು ತಿಳಿಸಿದೆ.
"ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವುದು ರೈಲ್ವೆ ಕಾಯ್ದೆಯಲ್ಲಿ ಸೂಚಿಸಿರುವ ಸೆಕ್ಷನ್ 153 ಮತ್ತು 154 ರ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ. ಯಾವುದೇ ವ್ಯಕ್ತಿ, ಕಾನೂನುಬಾಹಿರ ಕೃತ್ಯ ಅಥವಾ ಉದ್ದೇಶಪೂರ್ವಕ ಲೋಪ ಅಥವಾ ನಿರ್ಲಕ್ಷ್ಯದಿಂದ, ರೈಲ್ವೆಯಲ್ಲಿ ಪ್ರಯಾಣಿಸುವ ಅಥವಾ ಇರುವ ವ್ಯಕ್ತಿಯ ಸುರಕ್ಷತೆಗೆ ಅಪಾಯವನ್ನುಂಟುಮಾಡಿದರೆ, ಅಥವಾ ರೈಲ್ವೆಯ ರೋಲಿಂಗ್ ಸ್ಟಾಕ್ ಗೆ ಅಡ್ಡಿಪಡಿಸುವುದು ಮತ್ತು ಅಡ್ಡಿಪಡಿಸಲು ಪ್ರಯತ್ನಿಸುವುದು, ರೈಲ್ವೆ ಕಾಯ್ದೆ 1989 ರ ಸೆಕ್ಷನ್ - 153 ರ ಅಡಿಯಲ್ಲಿ ಅಂತಹ ವ್ಯಕ್ತಿಗೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ" ಎಂದು ಮಾಹಿತಿ ನೀಡಿದೆ.

"ದುಡುಕಿನ ಮತ್ತು ನಿರ್ಲಕ್ಷ್ಯದ ರೀತಿಯಲ್ಲಿ ಯಾವುದೇ ಕಾರ್ಯವನ್ನು ಮಾಡುವ ಅಥವಾ ಯಾವುದೇ ರೈಲ್ವೆಯಲ್ಲಿ ಪ್ರಯಾಣಿಸುವ ವ್ಯಕ್ತಿಯ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಸಾಧ್ಯತೆಯಿರುವ ವ್ಯಕ್ತಿಗೆ, ರೈಲ್ವೇ ಕಾಯಿದೆ 1989 ರ ಸೆಕ್ಷನ್ - 154 ರ ಅಡಿಯಲ್ಲಿ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, ಅಥವಾ ದಂಡ, ಎರಡನ್ನೂ ವಿಧಿಸಬಹುದು" ಎಂದಿದೆ.
ಜಾಗರೂಕತೆಯನ್ನು ಹೆಚ್ಚಿಸುವುದರ ಹೊರತಾಗಿ, ಅಂತಹ ಘಟನೆಗಳ ಸ್ಥಳಗಳಲ್ಲಿ ಮತ್ತು ಶಾಲೆಗಳು, ಗ್ರಾಮಗಳು ಇತ್ಯಾದಿಗಳನ್ನು ಒಳಗೊಂಡ ನೆರೆಹೊರೆಯ ಪ್ರದೇಶಗಳಲ್ಲಿ ರೈಲ್ವೆ ಪೊಲೀಸ್ ಜಾಗೃತಿ ಅಭಿಯಾನಗಳನ್ನು ಆಯೋಜಿಸುತ್ತಿದೆ.ಇದರಿಂದಾಗಿ ದುಷ್ಕರ್ಮಿಗಳು ರೈಲು ಕಾರ್ಯಾಚರಣೆಯ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳಿಂದ ದೂರವಿರುತ್ತಾರೆ ಎಂದು ತಿಳಿಸಿದೆ.
ಅತಿಕ್ರಮಣ ಮತ್ತು ಕಲ್ಲು ತೂರಾಟದಂತಹ ಘಟನೆಗಳು ಕಂಡುಬಂದರೆ ಸಹಾಯವಾಣಿ ಸಂಖ್ಯೆ (139) ಗೆ ಮಾಹಿತಿ ನೀಡುವಂತೆ ಪ್ರಧಾನ ವ್ಯವಸ್ಥಾಪಕಾರದ ಅರವಿಂದ್ ಶ್ರೀವಾಸ್ತವ ಅವರು ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ಸೂಚಿಸಿದ್ದಾರೆ. ರೈಲ್ವೆ ಆಸ್ತಿಯು ಸಾರ್ವಜನಿಕ ಆಸ್ತಿ ಮತ್ತು ಸಾರ್ವಜನಿಕ ಆಸ್ತಿಯ ರಕ್ಷಣೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ನೈಋತ್ಯ ರೈಲ್ವೆ ರೈಲ್ ಸೌಧ ವಿಭಾಗ ಪ್ರಕಟಣೆ ಹೊರಡಿಸಿದೆ.












Click it and Unblock the Notifications