Vachanananda Sri: ವಚನಾನಂದ ಶ್ರೀ ಪದಚ್ಯುತಿ: ವಿದ್ಯಾರ್ಥಿಗಳಿಂದ ಮಸಾಜ್ ಆರೋಪ, ನೀವು ತಿಳಿಯಬೇಕಾದ 5 ಅಂಶಗಳು
Vachanananda Sri: ವಚನಾನಂದ ಶ್ರೀಗಳನ್ನು ಮಠದಿಂದ ಪದಚ್ಯುತಿಗೊಳಿಸಲಾಗಿದೆ. ದಾವಣಗೆರೆಯ ಹರಿಹರದಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಯನ್ನು ಮಠದ ಮುಖಂಡರು ಪದಚ್ಯುತಿಗೊಳಿಸಿರುವುದಾಗಿ ಗುರುಪೀಠದ ಟ್ರಸ್ಟ್ ಮಾಹಿತಿ ನೀಡಿದೆ. ಈ ಪದಚ್ಯುತಿ ಹಾಗೂ ನಂತರದ ಬೆಳವಣಿಗೆಯು ಪರ - ವಿರೋಧ ಸೇರಿದಂತೆ ಗಂಭೀರ ಚರ್ಚೆಗಳಿಗೆ ಕಾರಣವಾಗಿದೆ. ಸೋಮವಾರ ನಡೆದ ಸಭೆಯಲ್ಲಿ 15 ಟ್ರಸ್ಟಿಗಳ ಪೈಕಿ 13 ಜನರು ಶ್ರೀಗಳ ಪದಚ್ಯುತಿಗೆ ನಿರ್ಣಯ ತೆಗೆದುಕೊಂಡಿದ್ದಾರೆ. ಈ ಮೂಲಕ ಟ್ರಸ್ಟಿಗಳು ಹಾಗೂ ಶ್ರೀಗಳ ನಡುವಿನ ಸುದೀರ್ಘ ತಿಕ್ಕಾಟ ಸೋಮವಾರ ಬಹಿರಂಗವಾಗಿ ಮುಕ್ತಾಯವಾದಂತೆ ಆಗಿದೆ. ಆದರೆ ಇದರ ಬೆನ್ನಲ್ಲೇ ವಚನಾನಂದ ಶ್ರೀಗಳ ಮೇಲೆ ಹಲವು ಗಂಭೀರ ಆರೋಪಗಳು ಕೇಳಿ ಬಂದಿವೆ.
1. ವಚನಾನಂದ ಶ್ರೀ ಪದಚ್ಯುತಿಗೆ ಕಾರಣವೇನು
ಮುಖ್ಯವಾಗಿ ವಚನಾನಂದ ಶ್ರೀಗಳು ಬೆಂಗಳೂರಿನ ಶ್ವಾಸಯೋಗ ಪೀಠವನ್ನು ತ್ಯಜಿಸಬೇಕು ಎಂದು ಒತ್ತಾಯಿಸಲಾಗಿತ್ತು. 2018ರಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಪೀಠಾರೋಹಣ ಮಾಡುವ ಸಂದರ್ಭದಲ್ಲಿಯೇ ಈ ವಿಷಯವನ್ನು ಪ್ರಸ್ತಾಪಿಸಲಾಗಿತ್ತು ಎಂದು ಹೇಳಲಾಗಿದೆ. ಅಲ್ಲದೆ ಶ್ರೀಗಳು ಈ ವಿಚಾರಕ್ಕೆ ಒಪ್ಪಿದ್ದರು. ಆದರೆ ಇಷ್ಟು ವರ್ಷವಾದರೂ ಶ್ವಾಸ ಯೋಗ ಪೀಠ ತ್ಯಜಿಸಿಲ್ಲ. ಇದೇ ಕಾರಣಕ್ಕೆ ಪದಚ್ಯುತಿ ನಿರ್ಣಯವನ್ನು ತೆಗೆದುಕೊಂಡಿರುವುದಾಗಿ ಟ್ರಸ್ಟಿಗಳು ಹೇಳಿದ್ದಾರೆ.

2. ಟ್ರಸ್ಟ್‌ನಿಂದ ಗಡುವು ನೀಡಲಾಗಿತ್ತು
ಟ್ರಸ್ಟ್ ತನ್ನ ನಿರ್ಣಯವನ್ನು ಸ್ವಾಮೀಜಿ ಅವರಿಗೆ ತಿಳಿಸಿದ ಸಂದರ್ಭದಲ್ಲಿ ಮಾರ್ಚ್ 24ರವರೆಗೆ ಸಮಯ ಕೇಳಿದ್ದರು ಎಂದು ಹೇಳಲಾಗಿದೆ. ಆದರೆ ಗಡುವು ಮೀರಿದ ಮೇಲೆಯೂ ಅವರು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಲಾಗಿದೆ. ಅಲ್ಲದೆ ಶ್ರೀಗಳು ಟ್ರಸ್ಟ್‌ನ ಮುಖಂಡರ ವಿರುದ್ಧವೇ ಸಮುದಾಯದವರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದರು ಎಂದು ಟ್ರಸ್ಟಿಗಳು ಆರೋಪ ಮಾಡಿದ್ದಾರೆ. ಅವರ ನಡೆ-ನುಡಿ ಸರಿ ಇರಲಿಲ್ಲ. ಟ್ರಸ್ಟಿಗಳನ್ನು ಕೆಟ್ಟದಾಗಿ
ನಿಂದಿಸುತ್ತಿದ್ದಾರೆ ಎನ್ನುವ ಆರೋಪವೂ ಅವರ ಮೇಲೆ ಕೇಳಿ ಬಂದಿದೆ.
3. ಲೆಕ್ಕ ಕೊಡಿ ಪ್ರತಿಭಟನೆ
ಇನ್ನು ಲೆಕ್ಕ ಕೊಡಿ ಅಭಿಯಾನದ ನಂತರ ಈ ವಿಚಾರವು ಇನ್ನಷ್ಟು ಜಟಿಲವಾಗಿತ್ತು. ಮಠದ ಒಳಗಡೆ ಸೋಮವಾರ ಟ್ರಸ್ಟಿಗಳ ಸಭೆ ನಡೆಯುತ್ತಿರುವಾಗ ಹೊರಗಡೆ ವಚನಾನಂದ ಶ್ರೀಗಳ ಕೆಲವು ಬೆಂಬಲಿಗರು ಲೆಕ್ಕ ಕೊಡಿ ಎನ್ನುವ ಅಭಿಯಾನದ ಮೂಲಕ ಪ್ರತಿಭಟನೆ ಮಾಡಿದ್ದರು. ಕೆಲವರು ಟ್ರಸ್ಟಿಗಳು ವಾಹನದಲ್ಲಿ ಹೋಗುವಾಗ ಚಪ್ಪಲಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಬೆಂಬಲಿಗರನ್ನು ಮಠದ ಒಳಗಡೆ ಬಿಡುವ ವಿಚಾರಕ್ಕೆ ವಚನಾನಂದ ಶ್ರೀ ಹಾಗೂ ಪೊಲೀಸರ ನಡುವೆಯೂ ವಾಗ್ವಾದ ನಡೆದಿತ್ತು.
4. ಹಣಕಾಸು ಅವ್ಯವಹಾರದ ಆರೋಪ - ವಿದ್ಯಾರ್ಥಿಗಳಿಂದ ಮಸಾಜ್
ಇನ್ನು ಮಠದ ಅಭಿವೃದ್ಧಿಯ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ನೀಡಿದ್ದ ಅನುದಾನದಲ್ಲಿ ಸುಮಾರು 3 ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಟ್ರಸ್ಟ್‌ನ ಸದಸ್ಯರೊಬ್ಬರು ಸ್ವಾಮೀಜಿಯವರು ವಿದ್ಯಾರ್ಥಿಗಳಿಂದ ಬಲವಂತವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.
5. ಭಕ್ತರು ಲೆಕ್ಕ ಕೇಳಿದ್ದಕ್ಕೆ ನಾನು ಟಾರ್ಗೆಟ್
ಇನ್ನು ಭಕ್ತರು ಲೆಕ್ಕ ಕೊಡಿ ಎಂದು ಕೇಳಿದ ಕಾರಣಕ್ಕೆ ನನ್ನ ಪದಚ್ಯುತಿ ಆಗಿದೆ ಎಂಬರ್ಥದಲ್ಲಿ ಪಂಚಮಸಾಲಿ
ಪೀಠದ ವಚನಾನಂದ ಶ್ರೀ ಪ್ರತಿಕ್ರಿಯಿಸಿದ್ದಾರೆ. ನನ್ನ ಉಚ್ಚಾಟನೆ ವಿಷಯವೇ ಹಾಸ್ಯಾಸ್ಪದವಾಗಿದೆ. ಟ್ರಸ್ಟ್‌ನವರಿಗೆ ಲೆಕ್ಕ ಕೊಡಿ ಎಂದು ಕೇಳಿ ಮಠದ ಭಕ್ತರು ಆಗ್ರಹಿಸಿದ್ದರು. ಹೀಗಾಗಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಷಡ್ಯಂತ್ರ ಮಾಡಿಯೇ ಉಚ್ಚಾಟನೆ ಮಾಡಿದ್ದಾರೆ ಎಂದು ವಚನಾನಂದ ಶ್ರೀ ಹೇಳಿದ್ದಾರೆ.












Click it and Unblock the Notifications