ಹುಸಿ ಗ್ಯಾರಂಟಿಗಳ ಭಾರದಿಂದಲೇ ಕುಸಿದು ಬೀಳುವ ಕಾಂಗ್ರೆಸ್!
ಬೆಂಗಳೂರು, ಜೂನ್ 13; ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳು ಕಳೆಯುತ್ತಾ ಬಂದಿದೆ. ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿಗಳ ಪೈಕಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುವ 'ಶಕ್ತಿ' ಯೋಜನೆಗೆ ಭಾನುವಾರ ಹಸಿರು ನಿಶಾನೆ ತೋರಿಸಲಾಗಿದೆ.
ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್‌ನ ಗ್ಯಾರಂಟಿಗಳ ವಿರುದ್ಧ ಟೀಕೆಗಳನ್ನು ಮುಂದುವರೆಸಿದೆ. ಪಕ್ಷ ಜನರಿಗೆ ಹುಸಿ ಭರವಸೆ ನೀಡಿದೆ ಎಂದು ಪಕ್ಷ ಆರೋಪ ಮಾಡುತ್ತಿದ್ದು, ಸರ್ಕಾರದ ವಿರುದ್ಧ ಜನಾಂದೋಲನ ನಡೆಯುವ ದಿನಗಳು ದೂರವಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದೆ.

ಮಾಜಿ ಸಚಿವ, ಕಾರ್ಕಳದ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಮಂಗಳವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಆಡಳಿತ ಮತ್ತು ಭವಿಷ್ಯದ ಬಗ್ಗೆ ಅವರು ಟ್ವೀಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.
ವಿ. ಸುನಿಲ್ ಕುಮಾರ್, 'ಕಾಂಗ್ರೆಸ್ ಸರ್ಕಾರದ ಆಡಳಿತದ ವೈಖರಿಯ ದಾರಿ ಮತ್ತು ದಾಟಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ತನ್ನ ಹುಸಿ ಗ್ಯಾರಂಟಿಗಳ ಭಾರದಿಂದಲೇ ಕುಸಿದು ಬೀಳುವುದು ನಿಶ್ಚಿತ' ಎಂದು ಟ್ವೀಟ್‌ನಲ್ಲಿ ಭವಿಷ್ಯ ನುಡಿದಿದ್ದಾರೆ.
ಅದೇ ಟ್ವೀಟ್‌ನಲ್ಲಿ, 'ಈ ಸಂಧರ್ಭದಲ್ಲಿ ರಾಜ್ಯ ಮತ್ತು ಜಿಲ್ಲೆಗಳಲ್ಲಿ ವೈಚಾರಿಕ ಬದ್ಧತೆಯ ಯುವಕರು ಬಿಜೆಪಿಯ ನೇತೃತ್ವವನ್ನು ವಹಿಸಿ ಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯ' ಎಂದು ಪಕ್ಷದ ಕಾರ್ಯಕರ್ತರಿಗೆ ಸಹ ಕರೆಯನ್ನು ನೀಡಿದ್ದಾರೆ.
ಇದೇ ಮೊದಲಲ್ಲ; ಬಿಜೆಪಿಯ ವಿ. ಸುನಿಲ್ ಕುಮಾರ್ ಸರ್ಕಾರದ ವಿರುದ್ಧ ಟ್ವೀಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಪಠ್ಯ-ಪುಸ್ತಕ ಪರಿಷ್ಕರಣೆ, ಪಶು ಸಂಗೋಪನಾ ಸಚಿವ ವೆಂಕಟೇಶ್ ಹೇಳಿಕೆ ಮುಂತಾದವುಗಳನ್ನು ಮುಂದಿಟ್ಟುಕೊಂಡು ಸಹ ಅವರು ಹಿಂದೆ ಟ್ವೀಟ್ ಮಾಡಿ ಸರ್ಕಾರವನ್ನು ಟೀಕಿಸಿದ್ದರು.
ಈ ಹಿಂದೆ ಸುನಿಲ್ ಕುಮಾರ್, 'ಸಚಿವ @PriyankKharge ಯವರಿಗೆ ಸಂಘ- ಪರಿವಾರ ನಿಷೇಧಿಸುವ ತವಕ, @MBPatil ರಿಗೆ ಚಕ್ರವರ್ತಿ ಸೂಲಿಬೆಲೆಯವರಿಂದ ಕಂಬಿ ಎಣಿಸುವ ಉಮೇದು, ಇನ್ನು ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರಿಗಂತೂ ಗೋವಧೆ ಮಾಡುವ ಬಗ್ಗೆ ಅತ್ಯುತ್ಸಾಹ. ಕಾಂಗ್ರೆಸ್ ಆಡಳಿತದ ವೈಖರಿ ನೋಡಿ. ಯಾರಿಗೆ ಯಾವುದು ಸಂಬಂಧವಿಲ್ಲವೋ ಅದನ್ನು ಮಾಡಲು ಅತ್ಯುತ್ಸಾಹ' ಎಂದು ಟ್ವೀಟ್ ಮಾಡಿದ್ದರು.
'ಮುಂಗಾರು ದುರ್ಬಲವಾಗಿದೆ, ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಮೊದಲು ಈ ಬಗ್ಗೆ ಗಮನ ಹರಿಸಿ. ಪ್ರೀತಿಯ ಅಂಗಡಿ ತೆರೆಯುತ್ತೇನೆಂದು ಘೋಷಿಸಿ ದ್ವೇಷದ ದುಖಾನು ಸ್ಥಾಪಿಸಬೇಡಿ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ' ಎಂದು ಹೊಸದಾಗಿ ಅಸ್ತಿತ್ವಕ್ಕೆ ಬಂದ ಸರ್ಕಾರಕ್ಕೆ ಮಾಜಿ ಸಚಿವರು ಸಲಹೆಯನ್ನು ಸಹ ನೀಡಿದ್ದರು.
ಗೃಹ ಜ್ಯೋತಿ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ಆದರೆ ಯೋಜನೆ, ಅದರ ಷರತ್ತುಗಳ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಯೋಜನೆ ಬಗ್ಗೆ ಟ್ವೀಟ್ ಮಾಡಿದ್ದ ಮಾಜಿ ಇಂಧನ ಸಚಿವರೂ ಆದ ಸುನಿಲ್ ಕುಮಾರ್, 'ಸಿದ್ದರಾಮಯ್ಯನವರೇ, ನುಡಿದಂತೆ ನಡೆಯುವುದು ಎಂದರೆ ದಾರಿ ತಪ್ಪಿಸುವುದಲ್ಲ. 200 ಯುನಿಟ್ ಉಚಿತ ಎಂದು ಹೇಳಿ ಈಗ ಸರಾಸರಿ ಬಳಕೆ ಆಧರಿಸಿ ಸೌಲಭ್ಯ ನೀಡುತ್ತೇನೆ ಎನ್ನುತ್ತಿದ್ದೀರಿ. ಇದರಿಂದ ಸಾಮಾನ್ಯ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಕಾಣದ ಷರತ್ತುಗಳ ಮೂಲಕ ಕಣ್ಣಿಗೆ ಮಣ್ಣೆರಚಬೇಡಿ. ಭರವಸೆಯಂತೆ 200 ಯುನಿಟ್ ಉಚಿತ ವಿದ್ಯುತ್ ಎಲ್ಲರಿಗೂ ಕೊಡಿ' ಎಂದು ಆಗ್ರಹಿಸಿದ್ದರು.
ಕಾಂಗ್ರೆಸ್‌ನ ಮತ್ತೊಂದು ಗ್ಯಾರಂಟಿ ಯೋಜನೆಯಾದ 'ಶಕ್ತಿ' ಬಗ್ಗೆ ಟ್ವೀಟ್ ಮಾಡಿದ್ದ ಅವರು, 'ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಬಹುತೇಕ ಭಾಗಗಳಿಗೆ ಸಾರಿಗೆ ಸಂಪರ್ಕ ಲಭ್ಯವಾಗುವುದು ಖಾಸಗಿ ಬಸ್ ಗಳ ಮೂಲಕ. ಇಲ್ಲಿ ಸರ್ಕಾರಿ ಬಸ್ ಸೇವೆ ಲಭ್ಯವಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ನೀಡುವ ಉಚಿತ ಬಸ್ ಸೇವೆಯನ್ನು ಸರ್ಕಾರಿ ಸಾರಿಗೆ ಸಂಸ್ಥೆಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿದೆ. ಇದರಿಂದ ಈ ಭಾಗದ ಜನರಿಗೆ ಅನ್ಯಾಯವಾಗಲಿದ್ದು, ಸರ್ಕಾರ ಈ ಮೂರು ಜಿಲ್ಲೆಗಳಲ್ಲಿ ಖಾಸಗಿ ಬಸ್ ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಬೇಕು' ಎಂದು ಟೀಕಿಸಿದ್ದರು.












Click it and Unblock the Notifications