ವಿ. ಸೋಮಣ್ಣ ಕಾಂಗ್ರೆಸ್‌ಗೆ?, ಬಿಗ್ ಅಪ್‌ಡೇಟ್ ಕೊಟ್ಟ ಬಿಜೆಪಿ ನಾಯಕ!
ಬೆಂಗಳೂರು, ಮಾರ್ಚ್ 05; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೆಲವು ನಾಯಕರು ಪಕ್ಷಾಂತರ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಸಹ ಈ ಪಟ್ಟಿಯಲ್ಲಿ ಇದ್ದಾರೆ ಎಂಬುದು ಕೆಲವರ ಅಚ್ಚರಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಸಚಿವರೊಬ್ಬರು ಕಾಂಗ್ರೆಸ್ ಸೇರಲಿದ್ದಾರೆ? ಎಂಬ ಸುದ್ದಿ ಹಬ್ಬಿದೆ.
ವಸತಿ ಇಲಾಖೆ, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಮತ್ತು ಚಾಮರಾಜನಗರ ಜಿಲ್ಲಾ ಉಸ್ತವಾರಿ ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರಲಿದ್ದಾರೆ ಎಂಬುದು ಸುದ್ದಿ. ಮುಂದಿನ ವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಸೋಮಣ್ಣ ಮಾತುಕತೆ ನಡೆಸಲಿದ್ದಾರೆ ಎಂದು ವರದಿಗಳು ಪ್ರಕಟವಾಗಿವೆ. ಈ ಕುರಿತು ಬಿಜೆಪಿ ನಾಯಕರೊಬ್ಬರು ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮಾತನಾಡಿ, "ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಅವರು ಬಿಜೆಪಿಯಲ್ಲೇ ಮುಂದುವರಿಯುವ ಇಚ್ಚೇ ಹೊಂದಿದ್ದಾರೆ. ಅವರು ನನ್ನ ಸಂಪರ್ಕದಲ್ಲಿದ್ದಾರೆ. ನಾನು ಸೋಮಣ್ಣ ಅವರೊಂದಿಗೆ ಮಾತಾಡಿದ್ದೇನೆ" ಎಂದು ಭಾನುವಾರ ಹುಬ್ಬಳ್ಳಿಯಲ್ಲಿ ಹೇಳಿದರು.
"ಬಿಜೆಪಿಯ ಕಾರ್ಯಕ್ರಮಗಳಲ್ಲಿ ವಿ. ಸೋಮಣ್ಣ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಈ ಕುರಿತಂತೆ ಸೋಮಣ್ಣ ಅವರ ಜೊತೆ ಮಾತನಾಡಿರುವುದಾಗಿ" ಜೋಶಿ ಸ್ಪಷ್ಟಪಡಿಸಿದರು. ಇನ್ನು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಬಿಜೆಪಿ ಪರವೇ ಇದ್ದಾರೆ ಎಂದು ಪ್ರಹ್ಲಾದ್ ಜೋಶಿ ಇದೇ ವೇಳೆ ಹೇಳಿದರು.
5 ಬಾರಿಯ ಶಾಸಕರಾಗಿರುವ ವಿ. ಸೋಮಣ್ಣ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಅವರು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರಾಗಿ ಮುಂದುವರೆದಿದ್ದಾರೆ. ಬೆಂಗಳೂರು ನಗರ ಉಸ್ತುವಾರಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಸೋಮಣ್ಣಗೆ ಆ ಸ್ಥಾನ ಸಿಗಲೇ ಇಲ್ಲ. ಇದರಿಂದಾಗಿ ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳಿವೆ. ಕಳೆದ ಬಾರಿ ಬೆಂಗಳೂರಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮಣ್ಣ ಮನೆಗೆ ಭೇಟಿ ಕೊಟ್ಟಿದ್ದರು.

ವಿ. ಸೋಮಣ್ಣ ಕಾಂಗ್ರೆಸ್ ಸೇರುವ ಕುರಿತು ಮೊದಲ ಸುತ್ತಿನ ಮಾತುಕತೆ ನಡೆದಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದರು. ಆದರೆ ಇದು ಉಹಾಪೋಹ ಸಚಿವರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಆಪ್ತರು ಹೇಳಿದ್ದರು. ಸಚಿವ ಸೋಮಣ್ಣ ಪುತ್ರನಿಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ರಾಮನಗರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಚಾಮರಾಜನಗರದಲ್ಲಿ ಪಕ್ಷದ ಪರವಾದ ಪ್ರಚಾರದ ಹೊಣೆಯನ್ನು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪಗೆ ನೀಡಲಾಗಿದೆ. ವಿ. ಸೋಮಣ್ಣ ಚಿತ್ತ ಎತ್ತ ಎಂಬುದು ಇನ್ನು ಗೊಂದಲದಲ್ಲೇ ಇದೆ.
ಮೋದಿ ಕಾರ್ಯಕ್ರಮ; ಪ್ರಹ್ಲಾದ್ ಜೋಶಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಭೇಟಿ ಕುರಿತು ಮಾತನಾಡಿದರು, "ಮಂಡ್ಯದ ಮದ್ದೂರಿನಲ್ಲಿ ಮಾರ್ಚ್ 12ರಂದು ಪ್ರಧಾನಿ ಮೋದಿ ಅವರು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಸಭೆಯ ತಯಾರಿ ಕುರಿತಂತ ಪರಿಶೀಲನೆಗಾಗಿ ನಾನು ಮಂಡ್ಯಕ್ಕೆ ಮೊನ್ನೆ ಭೇಟಿ ನೀಡಿದ್ದೆ. ಮಂಡ್ಯ ಸಂಸದೆಯಾಗಿ ಸಮುಲತಾ ಅವರು ನನ್ನ ಸ್ವಾಗತಿಸಿದ್ದರು. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಯ ಸರ್ಕಾರಿ ಕಾರ್ಯಕ್ರಮ ಕೂಡ ಇದೆ" ಎಂದರು.
ಸುಮಲತಾ ಅವರು ಬಿಜೆಪಿ ಪಕ್ಷ ಸೇರ್ಪಡೆ ಆಗುತ್ತಾರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, "ಲೋಕಸಭೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತವಿದ್ದರೂ, ಸುಮಲತಾ ಅಂಬರೀಷ್ ಅವರು ಲೋಕಸಭೆಯಲ್ಲಿ ಬಿಜೆಪಿಯ ಹಲವು ನಿರ್ಣಯಗಳನ್ನ ಬೆಂಬಲಿಸುತ್ತಾ ಬಂದಿದ್ದಾರೆ. ಹೀಗಾಗಿ ಸುಮಲತಾ ಅವರು ಬಿಜೆಪಿ ಪರವೇ ಇದ್ದಾರೆ" ಎಂದಷ್ಟೇ ಹೇಳಿದರು.












Click it and Unblock the Notifications