ಯತ್ನಾಳ್ ಟ್ವೀಟ್‌ಗೆ ಸ್ಪಷ್ಟನೆ ಕೊಟ್ಟ ಉತ್ತರ ಕನ್ನಡದ ಡಿಸಿ!
ಬೆಂಗಳೂರು, ಆಗಸ್ಟ್ 23: ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ ಟ್ವೀಟ್‌ಗೆ ಉತ್ತರ ಕನ್ನಡದ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಶಾಸಕರು ಮಾಡಿರುವ ಸಂಪೂರ್ಣ ಸುಳ್ಳು ಎಂದು ಹೇಳುವ ಮೂಲಕ ಬಿಜೆಪಿ ನಾಯಕನಿಗೆ ಮುಖಭಂಗ ಉಂಟು ಮಾಡಿದ್ದಾರೆ.
ಬುಧವಾರ ಉತ್ತರ ಕನ್ನಡದ ಜಿಲ್ಲಾಧಿಕಾರಿ ಗಂಗೂಬಾಯಿ ರಮೇಶ ಮಾನಕರ್ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಟ್ವೀಟ್‌ನ ಫೋಟೋವನ್ನು ಹಾಕಿ, ಅದಕ್ಕೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಡಿಸಿ ಕಾರಿಗೆ ಇಂಧನವಿಲ್ಲ ಎಂದು ಯತ್ನಾಳ್ ಟ್ವೀಟ್ ಮಾಡಿದ್ದರು.

ವೆಬ್‌ಸೈಟ್‌ವೊಂದರ ವರದಿಯನ್ನು ಉಲ್ಲೇಖಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್, 'ಉತ್ತರ ಕನ್ನಡ ಜಿಲ್ಲಾಧಿಕಾರಿ ಕಾರಿನ ಇಂಧನಕ್ಕೆ ದುಡ್ಡಿಲ್ಲ!, ಅನುದಾನದ ಕೊರತೆಯಿಂದ ಸೆಡ್ ಸೇರಿದ ಜಿಲ್ಲಾಧಿಕಾರಿ ವಾಹನ, ಸರ್ಕಾರಿ ಖಜಾನೆಯಲ್ಲಿ ಬರಿದಾದ ಹಣ!, ಡ್ರೈವರ್‌ಗಳ ಕೊರತೆ ಡಿಸಿ ಕಾರು ಚಾಲಕನಾದ ಗ್ರಾಮ ಸಹಾಯಕ!' ಎಂದು ಟ್ವೀಟ್ ಮಾಡಿದ್ದರು. ಈ ಮೂಲಕ ಸರ್ಕಾರವನ್ನು ಟೀಕಿಸಿದ್ದರು.
This message is totally false.
— Deputy Commissioner Uttarakannada (@dcuttarakannada) August 23, 2023
I'm using the vehicle allotted to the DC Uttar kannada without any fuel fund deficiency ,fuel allocation is very much available. someone has intentionally spread this wrong news.
The vehicle shown in the picture is DV Vehicle allotted to DC office pic.twitter.com/KHV9K31fjQ
ಬುಧವಾರ ಸಂಜೆ ಈ ಕುರಿತು ಉತ್ತರ ಕನ್ನಡದ ಜಿಲ್ಲಾಧಿಕಾರಿ ಗಂಗೂಬಾಯಿ ರಮೇಶ ಮಾನಕರ್ ಉತ್ತರ ಕನ್ನಡದ ಜಿಲ್ಲಾಧಿಕಾರಿಗಳ ಅಧಿಕೃತ ಟ್ವೀಟ್ ಖಾತೆಯ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ. ಬಿಜೆಪಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು, 'ಈ ಸಂದೇಶ ಸಂಪೂರ್ಣ ಸುಳ್ಳು. ನಾನು ಉತ್ತರ ಕನ್ನಡದ ಜಿಲ್ಲಾಧಿಕಾರಿಗಳಿಗೆ ನಿಗದಿಪಡಿಸಿದ ವಾಹನವನ್ನೇ ಉಪಯೋಗಿಸುತ್ತಿದ್ದೇನೆ. ಯಾವುದೇ ಇಂಧನ, ಹಣದ ಕೊರತೆ ಇಲ್ಲ. ಇಂಧನದ ಲಭ್ಯತೆಯೂ ಸಾಕಷ್ಟಿದೆ. ಯಾರೋ ಬೇಕು ಎಂದೇ ಇಂತಹ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ' ಎಂದು ಹೇಳಿದ್ದಾರೆ.
ವರದಿ ಏನಿತ್ತು?; ವೆಬ್‌ಸೈಟ್‌ವೊಂದರ ವರದಿಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿಯವರ ಸಾರಿಗೆ ಇಂಧನ ಇಲ್ಲದೇ ನಿಂತಿದೆ. ಮತ್ತೊಂದು ಕಡೆ ಸರ್ಕಾರದ ಸೌಲಭ್ಯವನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸಬೇಕಾದ ಗ್ರಾಮ ಸಹಾಯಕರು ವಾಹನ ಚಾಲಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಹೇಳಿತ್ತು.
ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಸಂಚಾರಕ್ಕಾಗಿ ಎರಡು ಸರ್ಕಾರಿ ವಾಹನ ನೀಡಲಾಗಿದೆ. ಆದರೆ ಒಂದು ವಾಹನಕ್ಕೆ ಇಂಧನ ಹಾಕಲು ಅನುದಾನವಿಲ್ಲದೇ ಶೆಡ್ ಸೇರಿದೆ ಎಂದು ಉಲ್ಲೇಖಿಸಲಾಗಿತ್ತು.
ಸರ್ಕಾರ ಜಿಲ್ಲಾಧಿಕಾರಿಗಳ ಸಂಚಾರಕ್ಕೆ ನೀಡಿರುವ ವಾಹನದ ಇಂಧನಕ್ಕೆ ನೀಡಲು ಸರ್ಕಾರದ ಬಳಿ ಹಣವಿಲ್ಲದಂತಾಗಿದೆ. ಆದ್ದರಿಂದ ಡಿಸಿ ಜಿಲ್ಲೆಗೆ ಗಣ್ಯ ವ್ಯಕ್ತಿಗಳು ಆಗಮಿಸಿದಾಗ ಬಳಕೆ ಮಾಡುವ ವಿಐಪಿ ಕಾರನ್ನು ಬಳಕೆ ಮಾಡುವಂತಾಗಿದೆ.
ಕಾರಿನ ಇಂಧನಕ್ಕೆ ಅನುದಾನದ ಕೊರತೆ ಮಾತ್ರವಲ್ಲ. ಖಾಯಂ ಕಾರು ಚಾಲಕ ಇಲ್ಲದೇ ಗ್ರಾಮ ಸಹಾಯಕರನ್ನು ಸರ್ಕಾರಿ ವಾಹನದ ಚಾಲಕರನ್ನಾಗಿ ಮಾಡಲಾಗಿದೆ. ವಾಹನಕ್ಕೆ ಇಬ್ಬರು ಚಾಲಕರಿದ್ದಾರೆ. ಒಬ್ಬರು ನಿಯೋಜಿತ ಚಾಲಕರು ಮತ್ತೊಬ್ಬರು ಗ್ರಾಮ ಸಹಾಯಕರು ಎಂದು ವರದಿ ಹೇಳಿತ್ತು.












Click it and Unblock the Notifications