ಆಗಸ್ಟ್ 15ರಿಂದ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ; ಕೃಷ್ಣ ಬೈರೇಗೌಡ
ಬೆಂಗಳೂರು, ಆಗಸ್ಟ್ 01; "ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳು ಆಗಸ್ಟ್ 15ರಿಂದ ಸರ್ಕಾರಕ್ಕೆ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ ಮಾಡಬೇಕು. ಭೌತಿಕವಾಗಿ ಬರುವ ಪತ್ರ ಸ್ವೀಕರಿಸುವುದಿಲ್ಲ" ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಸಚಿವರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. "ಹಳೇ ಕಾಲದ ಪತ್ರ ವ್ಯವಹಾರವನ್ನು ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿ ಇ-ಆಫೀಸ್ ಅನುಷ್ಠಾನಗೊಳಿಸಬೇಕು" ಎಂದು ಸೂಚನೆ ನೀಡಿದರು.

"ಒಂದು ಪ್ರಕರಣದಲ್ಲಿ ಗ್ರಾಮ ಪಂಚಾಯತಿಯ ಸ್ವಚ್ಛತಾ ಸಂಕೀರ್ಣಕ್ಕೆ ಜಮೀನು ನೀಡಲು ಎರಡು ವರ್ಷ ಬೇಕೆ?. ಮೊನ್ನೆ ಈ ಕಡತ ಇ-ಆಫೀಸ್‌ನಲ್ಲಿ ನನ್ನ ಲಾಗಿನ್‌ಗೆ ಬಂದಾಗ ಎರಡು ದಿನದಲ್ಲಿ ವಿಲೇವಾರಿ ಮಾಡಿದ್ದೇನೆ" ಎಂದು ಸಚಿವರು ತಿಳಿಸಿದರು.
ಆಗಸ್ಟ್ 15ರಿಂದ ಪತ್ರ ವ್ಯವಹಾರ; ಸಚಿವ ಕೃಷ್ಣ ಬೈರೇಗೌಡ, "ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳು ಆಗಸ್ಟ್ 15ರಿಂದ ಸರ್ಕಾರಕ್ಕೆ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ ಮಾಡಬೇಕು. ಇ-ಆಫೀಸ್‌ನಿಂದಾಗಿ ಸಹಜವಾಗಿ ಕಾರ್ಯ ದಕ್ಷತೆ ಹೆಚ್ಚಿಸಲಿದೆ" ಎಂದು ಹೇಳಿದರು.
"ಇ-ಆಫೀಸ್‌ನಿಂದಾಗಿ ಯಾವುದೇ ಸ್ಥಳದಿಂದಲೂ ನೀವು ಕಡತ ವಿಲೇವಾರಿ ಮಾಡಬಹುದಾಗಿದೆ. ಸ್ವತ ನಾನು ಇ-ಆಫೀಸ್ ಮೂಲಕ ಕಡತ ವಿಲೇವಾರಿ ಮಾಡುತ್ತಿದ್ದೇನೆ. ಶಾಲೆ, ಗ್ರಾಮ ಪಂಚಾಯತಿಗೆ ಜಮೀನು ನೀಡಲು ಇಷ್ಟೊಂದು ವಿಳಂಬವೇಕೆ?, ಇದರಲ್ಲಿ ಕಾಯುವಂತದ್ದೇನಿದೆ?" ಎಂದು ಅವರು ಸಚಿವರು ಪ್ರಶ್ನಿಸಿದರು.
ಸಭೆಯಲ್ಲಿ ಮಾತನಾಡಿದ ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, "ಇ-ಕಚೇರಿ ಅನುಷ್ಟಾನಕ್ಕೆ ಕೂಡಕೇ ಎಲ್ಲಾ ಜಿಲ್ಲಾಧಿಕಾರಿಗಳು, ಕೆಸ್ವಾನ್ ಸಂಪರ್ಕ ಪಡೆದುಕೊಳ್ಳಬೇಕು ಮತ್ತು ತಹಶೀಲ್ದಾರ್ ಕಚೇರಿ ಹಂತದಲ್ಲಿಯೂ ಇದನ್ನು ಅನುಷ್ಟಾನಕ್ಕೆ ಕಾಲಮಿತಿ ನಿಗದಿಪಡಿಸಬೇಕು" ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
"ಸರ್ವೆ ಡಿಸ್ಪೂಟ್ ಪ್ರಕರಣಗಳ ಚರ್ಚೆಯಲ್ಲಿ 2-3 ವರ್ಷದಿಂದ ಸರ್ವೆಗೆ ಬಾಕಿ ಏಕಿವೆ?" ಎಂದು ಡಿ. ಡಿ.ಎಲ್. ಆರ್.ಗಳನ್ನು ಸಚಿವರು ಪ್ರಶ್ನಿಸಿರು. ಕೆಲ ತಾಂತ್ರಿಕ ಸಮಸ್ಯೆಗಳ ಕಾರಣ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಚಿವರ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ರಾಜೇಂದ್ರ ಕುಮಾರ್ ಕಠಾರಿಯಾ ಮಾತನಾಡಿ, "ಈ ಕುರಿತು ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗುವುದು. ಅದರಂತೆ ಕ್ರಮವಹಿಸಿ" ಎಂದು ತಿಳಿಸಿದರು.
ಸಚಿವರ ಪೋಸ್ಟ್; ಕಲಬುರಗಿ ಪ್ರವಾಸ ಕೈಗೊಂಡ ಭಾನುವಾರ ರಾತ್ರಿ ಸಚಿವ ಕೃಷ್ಣ ಬೈರೇಗೌಡರು ಫೇಸ್‌ಬುಕ್ ಪೋಸ್ಟ್ ಒಂದನ್ನು ಹಾಕಿದ್ದರು. 1200 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮುಗಿಸಿ ರಾತ್ರಿ ಟ್ರೈನ್‌ನಲ್ಲಿ ಕಲಬುರಗಿಗೆ ಹೊರಟಿದ್ದೇನೆ. ಪ್ರಯಾಣದ ಬಿಡುವಿನ ಸಮಯದಲ್ಲಿ ಬಹು ಉಪಯುಕ್ತ ಇ ಫೈಲ್- ಆನ್‌ಲೈನ್ ಇ-ಆಫೀಸ್ ಮೂಲಕ ಕೆಲ ಫೈಲ್‌ಗಳನ್ನು ನೋಡುತ್ತಿದ್ದೇನೆ ಎಂದು ಫೋಟೋವೊಂದನ್ನು ಶೇರ್ ಮಾಡಿದ್ದರು.
ಏಜೆಂಟ್‌ಗಳ ಹಾವಳಿ ತಡೆಗೆ ಕ್ರಮ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಏಜೆಂಟ್‌ಗಳ ಹಾವಳಿ ತಡೆಯುವ ಬಗ್ಗೆ ಸಹ ಮಾತನಾಡಿದ್ದಾರೆ. "ರಾಜ್ಯದಲ್ಲಿ ಹೊಸದಾಗಿ ಸಬ್ ರಿಜಿಸ್ಟಾರ್ ಕಚೇರಿ ಸ್ಥಾಪನೆ ಸಂಬಂಧ ಪ್ರಸ್ತುತ ಇರುವ ಎಸ್. ಆರ್. ಓ. ಕಚೇರಿಯಲ್ಲಿ ದೈನಂದಿನ ವ್ಯವಹಾರಗಳ ಮಾಹಿತಿ ಕಲೆ ಹಾಕಲಾಗುತ್ತಿದೆ. 2 ತಿಂಗಳಿನಲ್ಲಿ ಮಾಹಿತಿ ಸಿಗಲಿದ್ದು, ತದನಂತರ ಹೆಚ್ಚಿನ ಕಾರ್ಯದೊತ್ತಡ ಇರುವ ತಾಲೂಕಿನಲ್ಲಿ ಹೊಸದಾಗಿ ಎಸ್. ಆರ್. ಓ. ಕಚೇರಿ ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗುತ್ತದೆ" ಎಂದರು.
"ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಆಸ್ತಿಗಳ ಮಾರಾಟ, ಒಪ್ಪಂದ ಪ್ರಕರಣದಲ್ಲಿ ನಿಗದಿತ ಮೌಲ್ಯಕ್ಕಿಂತ ಕಡಿಮೆ ಮೌಲ್ಯ ದಾಖಲಿಸಿ ಸರ್ಕಾರಕ್ಕೆ ಬರಬೇಕಾದ ಕಂದಾಯ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಪರಿಶೀಲನೆಗೆ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳ ತಂಡ ಸಬ್ ರಿಜಿಸ್ಟಾರ್ ಕಚೇರಿಗೆ ಕಳುಹಿಸಿ ತಪಾಸಣೆ ಮಾಡಲಾಗುತ್ತದೆ. ಈ ಮೂಲಕ ಸರ್ಕಾರಕ್ಕೆ ಆಗುತ್ತಿರುವ ನಷ್ಟ ತಪ್ಪಿಸಲಾಗುವುದು" ಎಂದು ಹೇಳಿದರು.
"ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮೂರನೇ ವ್ಯಕ್ತಿ ಹಾವಳಿ ತಪ್ಪಿಸಲು ಕಾವೇರಿ 2.0 ತಂತ್ರಾಂಶ ಜಾರಿಗೆ ತರಲಾಗಿದೆ. ಸಾರ್ವಜನಿಕರು ನೋಂದಣಿ ಮುನ್ನ ತಮ್ಮ ದಾಖಲೆಗಳನ್ನು ಆನ್‌ಲೈನ್ ಮೂಲಕ ಸಬ್ ರಿಜಿಸ್ಟಾರ್ ಕಚೇರಿಗೆ ಸಲ್ಲಿಸಿದಾಗ ಸದರಿ ದಾಖಲೆಗಳು ಸರಿಯಾಗಿವೆ? ಅಥವಾ ಇಲ್ಲವೇ? ಎಂಬುದನ್ನು ಆನ್‌ಲೈನ್ ಮೂಲಕವೇ 3 ದಿನದಲ್ಲಿ ನೋಂದಣಿ ಕಚೇರಿಯಿಂದ ಅರ್ಜಿದಾರರಿಗೆ ಮಾಹಿತಿ ನೀಡಲಾಗುತ್ತದೆ. ನಂತರ ಅರ್ಜಿದಾರ ನಿಗದಿತ ಶುಲ್ಕ ಪಾವತಿಸಿ ನೋಂದಣಿಗೆ ದಿನಾಂಕ ಮತ್ತು ಸಮಯ ಅರ್ಜಿದಾರನೇ ನಿಗದಿಗೊಳಿಸಲು ಅವಕಾಶ ನೀಡಲಾಗಿದೆ" ಎಂದರು.












Click it and Unblock the Notifications