Urdu: ಶೀಘ್ರವೇ ಉರ್ದು ಸೇರಿದಂತೆ ಇತರ ವಿಷಯಗಳ ಶಿಕ್ಷಕರ ನೇಮಕಾತಿ ಪ್ರಕ್ರಿಯೆ: ಸಚಿವ ಮಧು ಬಂಗಾರಪ್ಪ
ಶೀಘ್ರವೇ ಉರ್ದು ಸೇರಿದಂತೆ ಇತರ ವಿಷಯಗಳ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಉರ್ದು ಭಾಷೆ ಸೇರಿದಂತೆ ಈಗ ನಡೆಯುತ್ತಿರುವ 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಯಲ್ಲಿ ಬಿಟ್ಟುಹೋಗಿರುವ ವಿಷಯಗಳ ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲೇ ಇನ್ನೊಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಘೋಷಿಸಿದ್ದಾರೆ.
ಉರ್ದು ಸೇರಿದಂತೆ, ಇನ್ನೂ ನೇಮಕವಾಗಬೇಕಾಗಿರುವ ವಿಷಯಗಳ ಶಿಕ್ಷಕರ ನೇಮಕಾತಿಗೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯ ಅನುಮತಿಗಾಗಿ ಕಳುಹಿಸಲಾಗಿದ್ದು, ಆರ್ಥಿಕ ಇಲಾಖೆಯ ಅನುಮತಿ ದೊರೆತ ಕೂಡಲೇ, ಸಚಿವ ಸಂಪುಟದ ಒಪ್ಪಿಗೆ ಪಡೆದು ಅಧಿಸೂಚನೆ ಹೊರಡಿಸಲಾಗುವುದು ಎಂದು ಅವರು ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.

ಈಗ ನಡೆಯುತ್ತಿರುವ 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಯಲ್ಲಿ ಉರ್ದು ಮಾಧ್ಯಮದ ಭಾಷಾ ಸೇರಿದಂತೆ ಬಿಟ್ಟು ಹೋದ ಬೇರೆ ಬೇರೆ ವಿಷಯಗಳ ಶಿಕ್ಷಕರನ್ನು ಹೊರತುಪಡಿಸಿರುವ ಕುರಿತು ವಿಧಾನ ಪರಿಷತ್ ಸದಸ್ಯರಾದ ಬಲ್ಕೀಷ್ ಬಾನು, ಎಂ. ನಾಗರಾಜು, ಶಿವಕುಮಾರ್ ಕೆ. ಹಾಗೂ ಡಿ.ಟಿ. ಶ್ರೀನಿವಾಸಗೌಡ ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಮಾನ್ಯ ಸಚಿವರು, ಈ ಎಲ್ಲಾ ಶಿಕ್ಷಕರ ನೇಮಕಾತಿಗೆ ಇಲಾಖೆ ಕ್ರಮ ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ.
ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾನ್ಯ ಸಭಾಪತಿಗಳಾದ ಸಲೀಂ ಅಹಮದ್ ಅವರ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಿದ್ದೇವೆ. ಉರ್ದು ಹಾಗೂ ಬಿಟ್ಟುಹೋಗಿರುವ ಇತರೆ ವಿಷಯಗಳ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸಚಿವರು ಸ್ಪಷ್ಟಪಡಿಸಿದರು.
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ. ಈ ಕುರಿತು ಸಚಿವ ಸಂಪುಟದಲ್ಲಿಯೂ ಚರ್ಚೆ ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉರ್ದು ಸೇರಿದಂತೆ ಬಿಟ್ಟುಹೋಗಿರುವ ವಿಷಯಗಳ ಶಿಕ್ಷಕರ ನೇಮಕಾತಿಗೆ ಮೌಖಿಕವಾಗಿ ಸಮ್ಮತಿ ಸೂಚಿಸಿದ್ದಾರೆ ಎಂದು ಸಚಿವರು ತಿಳಿಸಿದರು.
7042.69 ಕೋಟಿ ರೂ. ಪೂರಕ ಅಂದಾಜು ಪ್ರಸ್ತಾವನೆ: ವಿಧಾನ ಮಂಡಲದ ಉಭಯ ಸದನಗಳಲ್ಲಿ ಅನುಮೋದನೆ
ಪ್ರಸಕ್ತ ಸಾಲಿನ (2026-27) ಕರ್ನಾಟಕ ಧನ ವಿನಿಯೋಗ ವಿಧೇಯಕದ ಅಡಿ ಪೂರಕ ಅಂದಾಜುಗಳ 7,042.69 ಕೋಟಿ ರೂ. ಮೊತ್ತದ ಮೊದಲನೆ ಕಂತಿನ ಪ್ರಸ್ತಾವನೆಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಸೋಮವಾರ ಅನುಮೋದನೆ ಸಿಕ್ಕಿದೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರಸ್ತಾವನೆಯನ್ನು ಮಂಡಿಸಿ ವಿವರಿಸಿದರು.
ಇದರಲ್ಲಿ 4,324.35 ಕೋಟಿ ರೂ. ರಾಜಸ್ವ ವೆಚ್ಚವಾಗಿದ್ದು, 2718.35 ಕೋಟಿ ರೂ. ಬಂಡವಾಳ ವೆಚ್ಚವಾಗಿದೆ. ಬರದಿಂದ ಸಂಕಷ್ಟದಲ್ಲಿರುವ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಜಲಧಾರೆ- ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ಕೋಟಿ ರೂ.ನಂತೆ ಒಟ್ಟು 289 ಕೋಟಿ ರೂ. ಅನುದಾನ ಹಾಗೂ ಬೆಂಗಳೂರು ನಗರದ ರಸ್ತೆ ಅಭಿವೃದ್ಧಿಗಾಗಿ ಮೂಲ ಸೌಕರ್ಯ ಬಂಡವಾಳದಲ್ಲಿ 1 ಸಾವಿರ ಕೋಟಿ ರೂಗಳ ಬಿಡುಗಡೆಯನ್ನು ಒಳಗೊಂಡಿದೆ.
ಮುಖ್ಯಮಂತ್ರಿಗಳ ಮಂಡಿಸಿದ ಪೂರಕ ಅಂದಾಜುಗಳ ಪ್ರಸ್ತಾವನೆಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ ಯೋಜನೆಗೆ 2,918 ಕೋಟಿ ರೂ.ಗಳು, ಭಾರತ್ ಜೋಡೋ ಯುವ ಸಂಘಗಳಿಗೆ 781 ರೂ., ಅಮೃತ ಯೋಜನೆಯಲ್ಲಿ 708 ಕೋಟಿ ರೂ., ರಸ್ತೆ ಸಾರಿಗೆ ನಿಗಮದ ಸರ್ಕಾರಿ ಮೋಟರ್ ವಾಹನ ತೆರಿಗೆ ಷೇರು ಬಂಡವಾಳ ಬದಲಾವಣೆಗೆ 193.61 ಕೋಟಿ, ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಅಭಿಯಾನಕ್ಕೆ 152.72 ಕೋಟಿ, ಪ್ರಧಾನ ಮಂತ್ರಿ ಆವಾಸ್ ಗ್ರಾಮೀಣ ಯೋಜನೆ 93 ಕೋಟಿ, ವಿಶ್ವೇಶ್ವರಯ್ಯ ಜಲನಿಗಮ 91 ಕೋಟಿ, ಕೆಕೆಆರ್ ಟಿಸಿ ಬಸ್ ಖರೀದಿ ಅನುದಾನ 96 ಕೋಟಿ ಇತರೆ ಯೋಜನೆಗಳಿಗೆ 738 ಕೋಟಿ ರೂ.ಗಳು ಒಳಗೊಂಡಿದ್ದು, ಉಭಯ ಸದನಗಳಲ್ಲಿ ಅನುಮೋದನೆ ದೊರೆತಿದೆ ಎಂದು ಹೇಳಿದ್ದಾರೆ.


Click it and Unblock the Notifications
