Urdu: ಆರೋಗ್ಯ ಇಲಾಖೆಯ ಉರ್ದು ಜಾಹೀರಾತು ವಿವಾದ: ಕನ್ನಡಪರ ಸಂಘಟನೆಗಳ ಆಕ್ಷೇಪ, ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು
Urdu: ಆರೋಗ್ಯ ಇಲಾಖೆಯು ಉರ್ದು ಭಾಷೆಯಲ್ಲಿ ನೀಡಿರುವ ಜಾಹೀರಾತು ತೀವ್ರ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಈ ಜಾಹೀರಾತಿಗೆ ಕನ್ನಡಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ ಈ ಜಾಹೀರಾತನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರವು ಸಮರ್ಥಿಸಿಕೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಕರ್ನಾಟಕ ಸರ್ಕಾರ ಕನ್ನಡ ಮರೆತುಬಿಟ್ರಾ, ಯಾಕೆ ಉರ್ದುವಿನಲ್ಲಿ ಪತ್ರ, ಕರ್ನಾಟಕದ ಆಡಳಿತ ಭಾಷೆ ಕನ್ನಡವೇ ಹೊರೆತು ಉಳಿದ್ಯಾವ ಭಾಷೆಗಳಲ್ಲ. ನಾವು ಯಾವ ಭಾಷೆಯ ವಿರೋಧಿಗಳಲ್ಲ ಆದ್ರೆ ಈ ರೀತಿ ನಮ್ಮ ಮೇಲೆ ಹೇರಿಕೆ ಮಾಡೋದು ನಾವು ಖಂಡಿಸುತ್ತೇವೆ. ಕೂಡಲೇ ಇದನ್ನ ಹಿಂಪಡೆದು ಕನ್ನಡ ಪತ್ರಕ್ಕಾಗಿ ಒತ್ತಾಯಿಸುತ್ತೇವೆ ಎಂದು ಆಗ್ರಹಿಸಿದ್ದಾರೆ.

ಇನ್ನು ಈ ವಿಚಾರವಾಗಿ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಒಂದು ಅಧಿಕೃತ ಆಮಂತ್ರಣ ಪತ್ರಿಕೆಗೂ ಮತ್ತು ಪತ್ರಿಕಾ ಜಾಹೀರಾತಿಗೂ ವ್ಯತ್ಯಾಸ ತಿಳಿಯದಷ್ಟು ಬಿಜೆಪಿ ನಾಯಕರ ಬುದ್ಧಿ ಮಂಕಾಗಿದೆಯೇ? ಅಥವಾ ಜನರನ್ನು ದಾರಿ ತಪ್ಪಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದೀರಾ?
ಆರೋಗ್ಯ ಇಲಾಖೆಯ ಜಾಹೀರಾತನ್ನು ಹಿಡಿದು "ನಾಡದ್ರೋಹಿ" ಎಂದು ಬೊಬ್ಬೆ ಹೊಡೆಯುತ್ತಿರುವ ಕರ್ನಾಟಕ ಬಿಜೆಪಿ ಮಿತ್ರರೇ, ವಿಶ್ವ ಗುರು ಫೋಟೋ ಸೇರಿಸಿ ನಿಮ್ಮದೇ ಅಧಿಕಾರಾವಧಿಯ ಎಷ್ಟು ಜಾಹೀರಾತು ನೀಡಿದ್ದಿರಿ ಅಂತ ಒಮ್ಮೆ ತಿರುಗಿ ನೋಡಿ. ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದಾಗ ಉರ್ದು ಪತ್ರಿಕೆಗಳಲ್ಲಿ ಜಾಹೀರಾತುಗಳು ಪ್ರಕಟವಾಗಿರಲಿಲ್ಲವೇ ಎಂದು ಪ್ರಶ್ನೆ ಮಾಡಿದೆ.
ನಿಮ್ಮ ತರ್ಕದ ಪ್ರಕಾರ ನೋಡೋದಾದ್ರೆ, ಅಂದು ಉರ್ದುವಿನಲ್ಲಿ ಜಾಹೀರಾತು ನೀಡಿದ್ದ ಬಿಜೆಪಿ ನಾಯಕರೆಲ್ಲರೂ "ನಾಡದ್ರೋಹಿ"ಗಳಾ? ಅಥವಾ ಬಿಜೆಪಿ ಮಾಡಿದಾಗ ಅದು "ಮಾಹಿತಿ ಪ್ರಸಾರ", ಕಾಂಗ್ರೆಸ್ ಮಾಡಿದರೆ ಅದು "ನಾಡದ್ರೋಹ"ವಾ. ಇಲ್ಲಿ ಯಾವುದೇ ಆಮಂತ್ರಣ ಪತ್ರಿಕೆ ಉರ್ದುವಿನಲ್ಲಿಲ್ಲ; ಆಯಾ ಭಾಷೆಯ ಓದುಗರಿಗೆ ಮಾಹಿತಿ ತಲುಪಿಸಲು ಪತ್ರಿಕೆಗಳ ಭಾಷೆಯಲ್ಲೇ ಜಾಹೀರಾತು ನೀಡುವುದು ಆಡಳಿತದ ಸಾಮಾನ್ಯ ಪ್ರಕ್ರಿಯೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಿರುವುದು ನಿಮ್ಮ ರಾಜಕೀಯ ದಿವಾಳಿತನಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಇನ್ನೂ ನಮ್ಮ ಮನೆಯ ಆಡುಭಾಷೆಯ ಬಗ್ಗೆ ಅತಿಯಾದ ಆಸಕ್ತಿ ತೋರುತ್ತಿರುವ ನಿಮಗೆ ನಾನೊಂದು ಸೌಹಾರ್ದಯುತ ಆಹ್ವಾನ ನೀಡುತ್ತಿದ್ದೇನೆ; ಒಮ್ಮೆ ನಮ್ಮ ಮನೆಗೆ ಬನ್ನಿ, ನಿಮ್ಮನ್ನು ಸತ್ಕರಿಸುವುದಕ್ಕೆ ನಮಗೆ ಖುಷಿಯಿದೆ. ಜೊತೆಯಾಗಿ ಕೂತು ಊಟ ಮಾಡೋಣ, ವಿಶ್ವಾಸದಿಂದ ಮಾತಾಡೋಣ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ "ಸರ್ವ ಜನಾಂಗ ಶಾಂತಿಯ ತೋಟ" ನಿರ್ಮಿಸೋಣ. ಇನ್ನೂ ಸತ್ಯದ ಪರಾಮರ್ಶೆ ನಡೆಸದೆ ಬಿಜೆಪಿಯ ಸುಳ್ಳುಗಳನ್ನೇ ನಂಬಿ ಸುದ್ದಿ ಎಂದು ಬಿತ್ತರಿಸುತ್ತಿರುವ ಕೆಲವು ಮಾಧ್ಯಮಗಳೇ, ಇದು ಪತ್ರಿಕಾ ಧರ್ಮವೇ? ಇನ್ನಾದರೂ ಈ ನಡೆಯನ್ನು ನಿಲ್ಲಿಸಬೇಕು ಎಂಬುದು ನನ್ನ ವಿನಂತಿ ಎಂದೂ ಅವರು ಹೇಳಿದ್ದಾರೆ.
ಇದೊಂದು ಸುಳ್ಳು ಸುದ್ದಿ
ಇನ್ನು ಉರ್ದುವಿನಲ್ಲಿ "ಆಮಂತ್ರಣ ಪತ್ರಿಕೆ" ಮುದ್ರಿಸಲಾಗಿದೆ ಎಂಬಂತೆ ಕೆಲವು ಟಿವಿ ಮಾಧ್ಯಮಗಳು ಪುನಃ ಪುನಃ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿರುವುದು ಅತ್ಯಂತ ಆಘಾತಕಾರಿ. ಮಾಧ್ಯಮಗಳಿಗೆ ಸತ್ಯಾಸತ್ಯತೆ ಪರಿಶೀಲಿಸುವ ಜವಾಬ್ದಾರಿ ಇಲ್ಲವೇ?
ಸ್ಪಷ್ಟಪಡಿಸಬೇಕಾದ ಸಂಗತಿ ಏನೆಂದರೆ ಇದು ಆಮಂತ್ರಣ ಪತ್ರಿಕೆ ಅಲ್ಲ. ಇದು ಒಂದು ಪತ್ರಿಕಾ ಜಾಹೀರಾತು ಮಾತ್ರ. ಕನ್ನಡ, ಇಂಗ್ಲಿಷ್ ಸೇರಿದಂತೆ ಇತರೆ ಭಾಷಾ ಪತ್ರಿಕೆಗಳಲ್ಲಿಯೂ ಸರ್ಕಾರಗಳು ಜಾಹೀರಾತು ನೀಡುವಂತೆ, ಉರ್ದು ದಿನಪತ್ರಿಕೆಗಳಲ್ಲಿಯೂ ಎಲ್ಲಾ ಸರ್ಕಾರಗಳು - ಬಿಜೆಪಿ, ಜೆಡಿಎಸ್ ಸೇರಿದಂತೆ - ವರ್ಷಗಳಿಂದ ಜಾಹೀರಾತು ನೀಡುತ್ತಲೇ ಬಂದಿವೆ. ಇದರಲ್ಲಿ ಹೊಸದೇನೂ ಇಲ್ಲ. ಜಾಹೀರಾತನ್ನು ಉದ್ದೇಶಪೂರ್ವಕವಾಗಿ "ಆಮಂತ್ರಣ" ಎಂದು ತಪ್ಪಾಗಿ ಪ್ರಚಾರ ಮಾಡುವುದು ತಪ್ಪು ಮಾತ್ರವಲ್ಲ - ಅದು ಜನರನ್ನು ತಪ್ಪು ದಾರಿಗೆಳೆವ ಕಾರ್ಯ.
ಮಾಧ್ಯಮ ಸ್ವಾತಂತ್ರ್ಯ ಅತ್ಯಂತ ಮಹತ್ವದ್ದು. ಆದರೆ ಅದರ ಜೊತೆಗೆ ಜವಾಬ್ದಾರಿಯೂ ಅಷ್ಟೇ ಮಹತ್ವದ್ದು. ಸತ್ಯವನ್ನು ತಿರುವುಮಾಡಿ ಸಂಚಲನ ಸೃಷ್ಟಿಸುವುದು ಜನರ ನಂಬಿಕೆಗೆ ಧಕ್ಕೆ ತರುತ್ತದೆ.ಜವಾಬ್ದಾರಿಯುತ ಪತ್ರಿಕೋದ್ಯಮವೇ ಪ್ರಜಾಪ್ರಭುತ್ವದ ಬಲ ಎಂದೂ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.












Click it and Unblock the Notifications