ಜೆಡಿಎಸ್ ನಾಯಕನಿಗೆ ಲೀಗಲ್ ನೋಟಿಸ್ ಕೊಟ್ಟ ಪ್ರಹ್ಲಾದ್ ಜೋಶಿ!
ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೆಡಿಎಸ್ ನಾಯಕ, ಎಂಎಲ್‌ಸಿ ಎಸ್. ಎಲ್. ಭೋಜೇಗೌಡಗೆ ನೋಟಿಸ್ ನೀಡಿದ್ದಾರೆ
ಬೆಂಗಳೂರು, ಮಾರ್ಚ್ 01; ಜೆಡಿಎಸ್ ನಾಯಕ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ವಿರುದ್ಧ ಬಿಜೆಪಿ ನಾಯಕ, ಕೇಂದ್ರ ಸಚಿವ ಕಾನೂನು ಹೋರಾಟ ಆರಂಭಿಸಿದ್ದಾರೆ. ತಾವು ಮಾಡಿರುವ ಆರೋಪ ವಾಪಸ್ ಪಡೆಯದಿದ್ದಲ್ಲಿ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತೇನೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಸಚಿವ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಎಂಎಲ್‌ಸಿಗೆ ಈಗ ಸಂಕಷ್ಟ ಎದುರಾಗಿದೆ.
ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಸ್. ಎಲ್. ಭೋಜೇಗೌಡಗೆ ನೋಟಿಸ್ ನೀಡಿದ್ದಾರೆ. ತಾವು ಮಾಡಿರುವ ಆರೋಪವನ್ನು ಒಂದು ವಾರದಲ್ಲಿ ಹಿಂಪಡೆದು ಕ್ಷಮೆ ಕೇಳಬೇಕು. ಇಲ್ಲವಾದರೆ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತೇನೆ ಎಂದು ಪ್ರಹ್ಲಾದ್ ಜೋಶಿ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿ ಸಿಬ್ಬಂದಿ ಲಂಚ ಕೇಳಿದ್ದಾರೆ ಎಂದು ಎಸ್. ಎಲ್. ಭೋಜೇಗೌಡ ಆರೋಪ ಮಾಡಿದ್ದರು. ಇದಕ್ಕೆ ಪ್ರಹ್ಲಾದ್ ಜೋಶಿ ಖಡಕ್ ಆಗಿ ತಿರುಗೇಟು ನೀಡಿದ್ದರು. ತಮ್ಮ ಆರೋಪವನ್ನು ಸಾಬೀತು ಮಾಡಿ ಎಂದು ಸವಾಲು ಹಾಕಿದ್ದರು. ಕಾನೂನು ಹೋರಾಟ ಮಾಡುವುದಾಗಿಯೂ ಎಚ್ಚರಿಕೆ ಕೊಟ್ಟಿದ್ದರು. ಈಗ ವಕೀಲರ ಮೂಲಕ ಕಾನೂನು ಹೋರಾಟ ಆರಂಭಿಸಿದ್ದಾರೆ.
ಕೇಂದ್ರ ಸಚಿವರ ಪ್ರತಿಕ್ರಿಯೆ; ಎಂಎಲ್‌ಸಿ ಎಸ್. ಎಲ್. ಭೋಜೇಗೌಡರು ಆರೋಪ ಮಾಡಿದಾಗ ಪ್ರತಿಕ್ರಿಯೆ ನೀಡಿದ್ದ ಪ್ರಹ್ಲಾದ್ ಜೋಶಿ, "ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಭೋಜೇಗೌಡರು ಆರೋಪ ಮಾಡುವಾಗ ದಾಖಲೆ ಮರೆಮಾಚಿದ್ದೇಕೆ?. ಭೋಜೇಗೌಡರು ಹೇಳುವ ವ್ಯಕ್ತಿ ನಮ್ಮ ಕಚೇರಿಯಲ್ಲೇ ಇಲ್ಲ. ಭೋಜೇಗೌಡರು ಪ್ರದರ್ಶಿಸಿರುವ ಪತ್ರ ಡಾಕ್ಟರೊಬ್ಬರಿಗೆ ಬರೆದ ಪತ್ರ. ನಾನು ಡಾಕ್ಟರ್ ಅಲ್ಲ. ನನ್ನ ಕಚೇರಿಗೂ ಇದಕ್ಕೂ ಸಂಬಂಧವಿಲ್ಲ" ಎಂದು ಹೇಳಿದ್ದರು.

"ಅಷ್ಟೊಂದು ಖಚಿತ ಇದ್ದಿದ್ದರೆ ಪತ್ರದಲ್ಲಿ ಕೆಲಸದ ವಿಚಾರಗಳನ್ನು ಹೈಡ್ ಮಾಡಿರುವುದು ಏಕೆ?. ತಳ ಬುಡವಿಲ್ಲದೇ, ಜನರನ್ನು ದಾರಿ ತಪ್ಪಿಸುವ ಆಪಾದನೆಯನ್ನು ಭೋಜೇಗೌಡರು ಮಾಡಿದ್ದು, ಈ ತರಹದ ಆಧಾರರಹಿತ ಆಪಾದನೆಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಇದು ನನ್ನ ತೇಜೋವಧೆ ಮಾಡುವ ಹುನ್ನಾರವಾಗಿದ್ದು, ತಮ್ಮ ನಾಯಕ ಎಚ್. ಡಿ. ಕುಮಾರಸ್ವಮಿ ಮೆಚ್ಚಿಸಲು ಭೋಜೇಗೌಡರು ಸುಳ್ಳು ಆರೋಪ ಮಾಡಿ ಸಿಕ್ಕಿಹಾಕಿಕೊಂಡರಾ? ಎಂಬ ಪ್ರಶ್ನೆ ಈಗ ಎದುರಾಗಿದೆ" ಎಂದು ಜೋಶಿ ಪ್ರತಿಕ್ರಿಯಿಸಿದ್ದರು.
ಎಸ್. ಎಲ್. ಭೋಜೇಗೌಡರು, ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್.ಎಂ.ಸಿ) ಸದಸ್ಯರನ್ನಾಗಿ ನೇಮಿಸಲು ಶಿವಮೊಗ್ಗದ ವೈದ್ಯರೊಬ್ಬರಿಂದ ಪ್ರಹ್ಲಾದ್ ಜೋಶಿ ಅವರ ಕಚೇರಿಯಲ್ಲಿ ಲಂಚ ಪಡೆಯಲಾಗಿತ್ತು ಎಂದು ಆರೋಪಿಸಿದ್ದರು.












Click it and Unblock the Notifications