HD Kumaraswamy: ಕಾಂಗ್ರೆಸ್ ಸರ್ಕಾರದಿಂದ ಏನೆಲ್ಲ ದರ ಏರಿಕೆ? ಪಟ್ಟಿ ಕೊಟ್ಟ ಹೆಚ್‌ಡಿಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಆಸ್ತಿ ತೆರಿಗೆ ಜೊತೆಗೆ ಕಸಕ್ಕೂ ಟ್ಯಾಕ್ಸ್ ಹಾಕುವ ನಿಯಮವನ್ನು ಇಂದಿನಿಂದ (ಏಪ್ರಿಲ್ 1) ಜಾರಿ ಮಾಡಿದೆ. ಈ ಬಗ್ಗೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಕೂಡ ಈ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದಿನಕ್ಕೊಂದು ಸುಳ್ಳು, ತಿಂಗಳಿಗೊಂದು ದರ ಏರಿಕೆ. ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಸರಕಾರದ ಆಡಳಿತದ ವೈಖರಿ ಇದು ಎಂದು ಕಿಡಿಕಾರಿದ್ದಾರೆ.
ಇಂದಿನಿಂದ ಕಾಂಗ್ರೆಸ್ ಕಂಪನಿ ಸರ್ಕಾರ ಕಸದ ಮೇಲೆಯೂ ಸೆಸ್ ವಿಧಿಸುತ್ತಿದೆ. ನೆಪ ಪಂಚ ಗ್ಯಾರೆಂಟಿ, ದುರುದ್ದೇಶ ಜನರ ಲೂಟಿ, ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ ಕೂಡ ನಾಚುವಂತೆ ಕನ್ನಡಿಗರ ಮೇಲೆ ದರ ಏರಿಕೆ ದಂಡಯಾತ್ರೆ ನಡೆಯುತ್ತಿದೆ ಎಂದು ದೂರಿದ್ದಾರೆ. ದುರಾಡಳಿತದಿಂದ ಸಮೃದ್ಧ ಕರ್ನಾಟಕವನ್ನು ಬರ್ಬಾದ್ ಮಾಡಿರುವ ಕಾಂಗ್ರೆಸ್ ಕಂಪನಿ ಸರಕಾರ ದರಬೀಜಾಸುರ ರೂಪ ತಳೆದು ಜನರ ರಕ್ತ ಹೀರುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನೀರು, ಮೆಟ್ರೋ ರೈಲು, ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್, ಹಾಲಿನ ದರ 3 ಸಲ ಏರಿಕೆ, ಮೊಸರು, ವಿದ್ಯುತ್, ಮುದ್ರಾಂಕ ಶುಲ್ಕ, ಮಾರ್ಗದರ್ಶಿ ಮೌಲ್ಯ, ಅಬಕಾರಿ ಸುಂಕ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಗಳ ಶುಲ್ಕ, ಶವದ ಮರಣೋತ್ತರ ಪರೀಕ್ಷೆ ಶುಲ್ಕ, ವೈದ್ಯಕೀಯ ಪ್ರಮಾಣ ಪತ್ರದ ದರ, ಲ್ಯಾಬ್‌ನಲ್ಲಿ ಪರೀಕ್ಷೆ ಶುಲ್ಕ, ವೃತ್ತಿಪರ ತೆರಿಗೆ, ಬಿತ್ತನೆ ಬೀಜಗಳ ದರವನ್ನು ಏರಿಕೆ ಮಾಡಿದೆ ಈ ದರಬೀಜಾಸುರ ಕಾಂಗ್ರೆಸ್ ಸರಕಾರ ಎಂದು ಆಕ್ರೋಶ ಹೊರಹಾಕಿದ್ದಾರೆ. ಇಷ್ಟು ಸಾಲದು ಎಂಬಂತೆ ಜನರ ಮೇಲೆ ಏಪ್ರಿಲ್ 1ರಿಂದ ಕಸದ ಸೆಸ್ ಹೇರುತ್ತಿದೆ ದರಬೀಜಾಸುರ ಸರಕಾರ. ಕಸ ಹೆಸರಿನಲ್ಲಿ ಕೋಟಿ ಕೋಟಿ ಸುಲಿಗೆ ಗುರಿ ಹೊಂದಿದೆ ಎಂದು ಆರೋಪಿಸಿದ್ದಾರೆ.
ಗಾಳಿ ಬಿಟ್ಟು ಎಲ್ಲದಕ್ಕೂ ಟ್ಯಾಕ್ಸ್: ವಿಜಯೇಂದ್ರ
ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಖಂಡಿಸಿದ್ದಾರೆ. ದೇಶದಲ್ಲಿ ಅತ್ಯಂತ ದುಬಾರಿ ಜೀವನ ನಡೆಸುವಂತಹ ಸ್ಥಿತಿಯನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದೆ. ಗಾಳಿಯೊಂದನ್ನ ಬಿಟ್ಟು ಉಳಿದೆಲ್ಲದಕ್ಕೂ ರಾಜ್ಯ ಸರ್ಕಾರ ತೆರಿಗೆ ವಿಧಿಸಿ, ಬೆಲೆ ಏರಿಕೆ ಮಾಡುತ್ತಿದೆ. ಯಾವ ಮತದಾರರು ಸರ್ಕಾರಕ್ಕೆ ಆಡಳಿತ ನಡೆಸಲು ಅವಕಾಶ ಕಲ್ಪಿಸಿದರೋ, ಅದೇ ಮತದಾರರಿಗೆ ಸಿದ್ದರಾಮಯ್ಯ ಸರ್ಕಾರ ಶಾಪವಾಗಿ ಪರಿಣಮಿಸುತ್ತಿದೆ. ರಾಜ್ಯದಲ್ಲಿ ಜನಸಾಮಾನ್ಯರು ಪರದಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರ ಜೀವ ಹಿಂಡುತ್ತಿದೆ. ದಿನನಿತ್ಯ ಬೆಲೆ ಏರಿಕೆಯದ್ದೇ ಸದ್ದು. ಬೆಳಿಗ್ಗೆ ಏಳುವಾಗಲೇ ಬೆಲೆ ಏರಿಕೆ ಎಂಬ ದುಸ್ವಪ್ನ ಜನರನ್ನು ಕಾಡುತ್ತಿದೆ. ಹಾಲು, ಸಕ್ಕರೆ, ಮೆಣಸು, ವಿದ್ಯುತ್, ನೀರು ಸೇರಿದಂತೆ ಎಲ್ಲ ರೀತಿಯ ದಿನಬಳಕೆ ವಸ್ತು, ಸೇವೆಗಳ ಬೆಲೆ, ದರಗಳನ್ನು ಏರಿಸಿರುವ ಸಿದ್ದರಾಮಯ್ಯ ಸರ್ಕಾರದ ಕಣ್ಣು ಇದೀಗ ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದಿದೆ ಎಂದು ಬಿಜೆಪಿ ಕೂಡ ಕಿಡಿಕಾರಿದೆ.
ಟ್ರಾನ್ಸ್‌ಫಾರ್ಮರ್ ಪರಿಶೀಲನೆಯ ದರವನ್ನು ಮನಸೋ ಇಚ್ಛೆ ಏರಿಸುವ ಮೂಲಕ ಮತ್ತೊಂದು ಬರೆ ಎಳೆದಿದೆ. ಸರ್ಕಾರದ ಬೊಕ್ಕಸವನ್ನು ತುಂಬಿಸಲು ರಾಜ್ಯದ ಜನತೆಯ ಕಿಸೆಯನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಮತ್ತೊಂದು ಜನವಿರೋಧಿ ನಡೆ ಎಂದು ಟೀಕಿಸಿದೆ.












Click it and Unblock the Notifications