ಕಣ್ಸನ್ನೇ, ಕೈಸನ್ನೇ ಮೂಲಕ ಹಣದ ಆಮಿಷ ಒಡ್ಡಿದ ಮಂಡ್ಯ ಶಾಸಕ: ಸತ್ಯ ಬಿಚ್ಚಿಟ್ಟ ಹೆಚ್ ಡಿ ಕುಮಾರಸ್ವಾಮಿ
ಮಂಡ್ಯ, ಆಗಸ್ಟ್ 28: ವಾಮಮಾರ್ಗದಲ್ಲಿ ಜೆಡಿಎಸ್ ಬಿಜೆಪಿ ಪಕ್ಷಗಳು ಅಧಿಕಾರ ಹಿಡಿದವು ಎಂದು ಶಾಸಕ ಗಣಿಗ ರವಿ ನೀಡಿರುವ ಹೇಳಿಕೆಗೆ ತಿರುಗೇಟು ಕೊಟ್ಟ ಹೆಚ್ ಡಿ ಕುಮಾರಸ್ವಾಮಿ ಅವರು, ಶಾಸಕರ ಪ್ರಕಾರ ವಾಮಮಾರ್ಗದ ಅರ್ಥವೇನು? ಮತದಾನದ ವೇಳೆಯಲ್ಲಿಯೂ ಕಣ್ಸನ್ನೇ, ಕೈಸನ್ನೇ ಮೂಲಕ ನಮ್ಮ ಸದಸ್ಯರಿಗೆ ಹಣದ ಆಮೀಷ ಒಡ್ಡಿದ್ದು ವಾಮಮಾರ್ಗ ಅಲ್ಲದೆ ಮತ್ತೇನು? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾಧ್ಯಮಗಳ ಜತೆ ಮಾತನಾಡಿ, ಇಲ್ಲಿನ ನಗರಸಭೆ ಚುನಾವಣೆ ಮತದಾನದ ವೇಳೆಯಲ್ಲೇ ಚುನಾವಣಾಧಿಕಾರಿ ಸಮಕ್ಷಮದಲ್ಲಿಯೇ ಸ್ಥಳೀಯ ಶಾಸಕರು ನಮ್ಮ ಪಕ್ಷದ ಸದಸ್ಯರಿಗೆ ಅಡ್ಡ ಮತದಾನಕ್ಕೆ ಕುಮ್ಮಕ್ಕು ನೀಡಿ ಕಣ್ಸನ್ನೇ, ಕೈಸನ್ನೇ ಮೂಲಕ ಹಣದ ಆಮೀಷ ಒಡ್ಡಿದರು ಎಂದು ಮಂಡ್ಯ ಲೋಕಸಭೆ ಸದಸ್ಯರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಅತ್ಯಂತ ಗಂಭೀರ ಆರೋಪ ಮಾಡಿದರು.

ನನ್ನ ಜೀವನದಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತ ಹಾಕಲು ಬಂದಿದ್ದೇನೆ. ಕಳೆದ 20 ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆ ಗಮನಿಸಿ ನಾನು ಬರಲೇಬೇಕಾಯಿತು. ದೆಹಲಿಯಲ್ಲಿ ಸಚಿವ ಸಂಪುಟದ ಸಭೆ ನಿಗದಿ ಆಗಿತ್ತು. ನಾನು ಪ್ರಧಾನಮಂತ್ರಿಗಳ ಕಚೇರಿಯ ಅನುಮತಿ ಪಡೆದು ಮತದಾನದಲ್ಲಿ ಭಾಗವಹಿಸಿದೆ. ಕಾಂಗ್ರೆಸ್ ಈ ಜಿಲ್ಲೆಯಲ್ಲಿ ಅಷ್ಟರ ಮಟ್ಟಿಗೆ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ಅವರು ತೀಕಪ್ರಹಾರ ನಡೆಸಿದರು.
ಚುನಾವಣೆ ಸೋಲಿನ ಭಯದಲ್ಲಿ ಚುನಾವಣೆ ಮುಂದೂಡುವುದರಲ್ಲಿ ಕಾಂಗ್ರೆಸ್ ಎಕ್ಸ್ ಪರ್ಟ್. ಶಾಂತಿಯುತವಾಗಿ ಚುನಾವಣೆ ನಡೆಯಲು ಅಧಿಕಾರಿಗಳು ಸಹಕರಿಸಿದ್ದಾರೆ. ಆದರೆ, ಏನಾದರೂ ಕಿತಾಪತಿ ಮಾಡುವುದಕ್ಕೆ ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಹಿಂದಿನ ಅಧ್ಯಕ್ಷರು ವ್ಯಾಪಾರ ಶುರು ಮಾಡಿದರು. ನಮ್ಮ ಪಕ್ಷದಿಂದ ಗೆದ್ದು ಯಾವ ರೀತಿ ನಡೆದುಕೊಂಡರು ಎನ್ನುವುದು ಗೊತ್ತಿದೆ. ಮಹದೇವು ನಿಷ್ಠಾವಂತ ಜೆಡಿಎಸ್ ಸದಸ್ಯರು. ಪಕ್ಷ ನಿಷ್ಠೆಗೆ ಬೆಲೆ ಕೊಟ್ಟು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿಲ್ಲ. ಕಾಂಗ್ರೆಸ್ ನಾಯಕರು ಇವರ ಕುಟುಂಬದ ಸದಸ್ಯರನ್ನು ಬ್ಲಾಕ್ ಮೇಲ್ ಮಾಡಿದರು. ಮಹದೇವು ಅವರು ತೆಗೆದುಕೊಂಡ ನಿರ್ಧಾರ ಪಕ್ಷನಿಷ್ಠೆಗೆ ಮಾದರಿಯಾಗಿದೆ ಎಂದರು.
ನಮ್ಮ ಸದಸ್ಯರುಗಳು ಆಮಿಷಕ್ಕೆ ಒಳಗಾಗಲಿಲ್ಲ ಎಂದ ನಿಖಿಲ್
ಮಂಡ್ಯ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ನಾಗೇಶ್ ಅವರು ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಅವರು ಆಯ್ಕೆಯಾದರು. ಇವರಿಬ್ಬರಿಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಅಭಿನಂದನೆಗಳು ತಿಳಿಸಿದರು.
ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು ಮಂಡ್ಯದ ನಗರಸಭೆ ಗದ್ದುಗೆಯನ್ನು ಜೆಡಿಎಸ್-ಬಿಜೆಪಿ ಹಿಡಿದಿದೆ.ಒಟ್ಟು 37 ಮತದಾರರಲ್ಲಿ 19 ಮಂದಿ ನಮಗೆ ಮತ ಹಾಕಿದ್ದಾರೆ ಎಂದರು. ಮಂಡ್ಯ ನಗರಸಭೆ ಚುನಾವಣೆ ಯನ್ನ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ರು. ನಾವು ಆ ಸವಾಲು ಸ್ವೀಕಾರ ಮಾಡಿ ಗೆಲುವು ಸಾಧಿಸಿದೆವು..
ನಮ್ಮ ಸದಸ್ಯರು ಯಾವುದೇ ಆಮಿಷಕ್ಕೆ ಒಳಗಾಗಲಿಲ್ಲ.ರಾಜಕೀಯ ಅಂದರೆ ಆಮಿಷ ಎಲ್ಲಾ ಸಹಜ. ಅಂತಿಮವಾಗಿ ನಂಬರ್ ಎನ್ನೋದು ಮುಖ್ಯ. ನಾವು ಆ ನಂಬರ್ ಅನ್ನು ಮುಟ್ಟಿದ್ದೇವೆ.ಮುಂದಿನ ದಿನಗಳಲ್ಲಿ ಇತರೆ ಚುನಾವಣೆಗಳಲ್ಲಿ ಎನ್‌ಡಿಎ ಗೆಲ್ಲುತ್ತೆ ಎಂದು ಭರವಸೆ ನೀಡಿದರು.












Click it and Unblock the Notifications