ಗಂಡನನ್ನು ಕಳೆದುಕೊಂಡವರ ಬಗ್ಗೆ ಕೀಳಾಗಿ ಮಾತಾಡೊಲ್ಲ: ಸಿದ್ದರಾಮಯ್ಯಗೆ ಗೌಡರ ಚಾಟಿ

ಬೆಂಗಳೂರು, ಮಾರ್ಚ್ 29: ತಮ್ಮ ನಗುವಿನ ಬಗ್ಗೆ ಲೇವಡಿ ಮಾಡಿದ್ದ ಮಾಜಿ ಮುಖ್ಯಮಂತ್ರಿ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಡಿ.ವಿ. ಸದಾನಂದ ಗೌಡ ಅವರು ನಗುವುದನ್ನು ಬಿಟ್ಟರೆ ಕ್ಷೇತ್ರದಲ್ಲಿ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದರು.

ಸಿದ್ದರಾಮಯ್ಯ ಅವರ ಟೀಕೆಗೆ ಸದಾನಂದಗೌಡ ಅವರು ಸರಣಿ ಟ್ವೀಟ್‌ಗಳಲ್ಲಿ ತಿರುಗೇಟು ನೀಡಿದ್ದಾರೆ.

'ಹೌದು, ನನ್ನದು ನಗುಮುಖ, ನನ್ನ ಆಲೋಚನೆಗಳು ಯಾವತ್ತೂ ಧನಾತ್ಮಕವಾಗಿರುತ್ತವೆ. ಹೀಗಾಗಿ ನನ್ನ ಮುಖದಲ್ಲಿ ನಗು ಎಂದೆಂದಿಗೂ ಇರುತ್ತದೆ ಎಂದು ಸದಾನಂದಗೌಡ ಅವರು ತೀಕ್ಷ್ಣ ಉತ್ತರ ಕೊಟ್ಟಿದ್ದಾರೆ. ರಾಜಕೀಯವನ್ನು ರಾಜಕೀಯವಾಗಿ ನಡೆಸಿ. ವೈಯಕ್ತಿಕ ನಿಂದನೆ ನಿಮ್ಮ ವ್ಯಕ್ತಿತ್ವದ ತೂಕವನ್ನು ಅಳೆಯುತ್ತದೆ ಎಂಬ ಭಾವನೆ ನಿಮ್ಮಲ್ಲಿ ಇರಲಿ ಎಂದು ಕಿಡಿಕಾರಿದ್ದಾರೆ.

ಹಸನ್ಮುಖಿ ಸದಾನಂದಗೌಡ ಅವರು ತಮ್ಮ ನಗುವಿನ ಕಾರಣಕ್ಕೆ ಅನೇಕ ಬಾರಿ ವಿರೋಧಪಕ್ಷಗಳ ವ್ಯಂಗ್ಯಕ್ಕೆ ಗುರಿಯಾಗಿದ್ದಾರೆ. ಸಿದ್ದರಾಮಯ್ಯ ಅವರು ಗುರುವಾರ ಮಾಡಿರುವ ಟೀಕೆ ಅವರನ್ನು ಕೆರಳಿಸಿದೆ. 'ಗಂಡನನ್ನು ಕಳೆದುಕೊಂಡವರ ಬಗ್ಗೆ ಕೀಳಾಗಿ ಮಾತನಾಡುವ ಕೆಟ್ಟ ಆಲೋಚನೆ ನನಗೆ ಯಾವತ್ತೂ ಬಂದಿಲ್ಲ' ಎಂದು ವಿರೋಧಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ಅವರ ಟ್ವೀಟ್‌ಗಳ ಪಠ್ಯ ಇಲ್ಲಿದೆ.

ನನ್ನ ಆಲೋಚನೆಗಳು ಧನಾತ್ಮಕ

ಹೌದು ನನ್ನದು ನಗು ಮುಖ, ನನ್ನ ಆಲೋಚನೆಗಳು ಯಾವತ್ತೂ ಧನಾತ್ಮಕ. ಅದಕ್ಕೆ ನಾನು ನಗು ಮುಖದಲ್ಲಿ ಇರುತ್ತೇನೆ. ಗಂಡನನ್ನು ಕಳೆದುಕೊಂಡವರ ಬಗ್ಗೆ ಕೀಳಾಗಿ ಮಾತನಾಡುವ ಋಣಾತ್ಮಕ ಚಿಂತನೆ ನನಗೆ ಯಾವತ್ತೂ ಬಂದಿಲ್ಲ. ಅಧಿಕಾರಕ್ಕೋಸ್ಕರ ಬದುಕಿ ಬಂದ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡು ಹೀನವಾಗಿ ಬದುಕುವ ಜಾಯಮಾನ ನನ್ನದಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಸದಾನಂದಗೌಡ ತಿರುಗೇಟು ನೀಡಿದ್ದಾರೆ.

ನಮ್ಮೊಂದಿಗೆ ಮೋದಿಜಿ ಇದ್ದಾರೆ

ಬೆಂಗಳೂರು ಉತ್ತರ ಕ್ಷೇತ್ರದ ಸಂಸದನಾಗಿ ನಾನೇನು ಮಾಡಿದ್ದೇನೆಂದು ನನ್ನ ಜನರಿಗೆ ಗೊತ್ತಿದೆ. ಸಾಂದರ್ಭಿಕ ಮೈತ್ರಿ ಮಾಡಿಕ್ಕೊಂಡು ಜನರನ್ನು ಏಮಾರಿಸಲು ಹೊರಟ ಹಗಲು ವೇಷಗಾರರಿಗೆ ಮನದಟ್ಟು ಮಾಡುವ ಅಗತ್ಯ ನನಗಿಲ್ಲ. ನಮ್ಮೊಂದಿಗೆ ಮೋದಿಯಂತ ಮೋದಿಜಿಯವರಿದ್ದಾರೆ. ಮೋದಿಜಿಯವರ ಜೊತೆಗಿದ್ದರೆ ದೇಶ ಸುರಕ್ಷಿತ ಎನ್ನುವ ಕೋಟಿ ಕೋಟಿ ಜನರಿದ್ದಾರೆ ಎಂದಿದ್ದಾರೆ.

ವೈಯಕ್ತಿಕ ನಿಂದನೆ ನಿಮ್ಮ ತೂಕ ಅಳೆಯುತ್ತದೆ

ನೀವುಗಳು ಎದೆಯುಬ್ಬಿಸಿ ಹೇಳಿಕೊಳ್ಳುವಂತ ನಿಷ್ಕಳಂಕ ಚಾರಿತ್ರ್ಯದ ಒಬ್ಬನೇ ಒಬ್ಬ ನಾಯಕ ನಿಮ್ಮಲ್ಲಿದ್ದಾನೆ ಅನ್ನುವ ಛಾತಿ ನಿಮಗಿದೆಯಾ? ರಾಜಕೀಯವನ್ನು ರಾಜಕೀಯವಾಗಿ ನಡೆಸಿ, ವೈಯಕ್ತಿಕ ನಿಂದನೆ ನಿಮ್ಮ ತೂಕವನ್ನು ಅಳೆಯುತ್ತೆ ಎನ್ನುವ ಭಾವನೆ ನಿಮಗಿರಲಿ. ಜನ ಗಮನಿಸುತ್ತಾರೆಂಬ ಕನಿಷ್ಠ ಪ್ರಜ್ಞೆ ಕೂಡ ಇರಲಿ ಎಂದು ಟ್ವೀಟ್ ಮಾಡಿದ್ದಾರೆ.

ಅವರಪ್ಪನಾಣೆ ವ್ಯತ್ಯಾಸವಿದೆ!

ಸದಾನಂದಗೌಡ ಅವರಿಗೆ ಮತ್ತೊಬ್ಬ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಬೆಂಬಲ ನೀಡಿದ್ದಾರೆ. ಕರ್ನಾಟಕದ ವ್ಯಾಕರಣ ಮೇಸ್ಟ್ರೇ ಎಂದು ಸಿದ್ದರಾಮಯ್ಯ ಅವರನ್ನು ಕರೆದಿರುವ ಅವರು, ರಾಜಕೀಯದಲ್ಲಿ ಹಾಸ್ಯ/ವ್ಯಂಗ್ಯದಿಂದ ಕಿಚಾಯಿಸುವುದಕ್ಕೂ ಹೀನಾಯವಾಗಿ ಮಾತನಾಡಿ ಅವಹೇಳನ ಮಾಡುವುದಕ್ಕೂ 'ಅವರಪ್ಪನಾಣೆ' ವ್ಯತ್ಯಾಸವಿದೆ (ಸದಾನಂದಗೌಡರ ಮುಖದ ನಗುವಿನ ಬಗ್ಗೆ ನೀವು ಕೀಳಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ) ಎಂದು ಕುಮಾರಸ್ವಾಮಿ ಅವರು ಅವರಪ್ಪನಾಣೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ ವ್ಯಂಗ್ಯವಾಗಿ ಹೇಳಿದ್ದ ಮಾತನ್ನು ನೆನಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+