ಬರೀ ಪುಂಗಿ ಬಿಡುವುದಷ್ಟೇ ಜೇಟ್ಲಿ ಕೆಲಸ : ಸಿದ್ದರಾಮಯ್ಯ!
ಬೆಂಗಳೂರು, ಫೆಬ್ರವರಿ 01 : 'ಭರವಸೆಗಳು ಇಲ್ಲದ ನಿರುಪಯುಕ್ತ ಬಜೆಟ್ ಇದಾಗಿದೆ. ಇದೊಂದು ಕಣ್ಣುಕಟ್ಟು ರೀತಿಯ ಆಗಿದೆ. ಬರೀ ಪುಂಗಿ ಬಿಡುವುದಷ್ಟೇ ಇವರ ಕೆಲಸ. ಇವರು ಪುಂಗಿ ಗಿರಾಕಿಗಳು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾರ ಮಧ್ಯಾಹ್ನ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದರು. 'ಕರ್ನಾಟಕ ರಾಜ್ಯಕ್ಕೆ ಬಜೆಟ್‌ನಲ್ಲಿ ಏನೂ ವಿಶೇಷ ಕೊಡುಗೆ ಸಿಕ್ಕಿಲ್ಲ' ಎಂದರು.
'ಕೃಷಿ ಬೆಳೆಗಳ ಎಂಎಸ್‌ಡಿ ಜಾರಿಯಾಗಿಲ್ಲ. ಘೋಷಿಸಿರುವ ಎಂಎಸ್‌ಡಿ ರೈತರ ನಿರೀಕ್ಷೆಗೆ ತಕ್ಕಹಾಗೆ ಇಲ್ಲ. ಮಾರುಕಟ್ಟೆ, ಕಾಸ್ಟ್ ಆಫ್ ಪ್ರೊಡಕ್ಟ್ ಇಂತಹ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿಲ್ಲ. ರೈತರ ಅಲ್ಪಾವಧಿ ಸಾಲ ಮನ್ನಾ ಮಾಡುವ ನಿರೀಕ್ಷೆ ಇತ್ತು. ಅದನ್ನು ಮಾಡಿಲ್ಲ' ಎಂದು ಹೇಳಿದರು.
'ನಮ್ಮ ಬಜೆಟ್ ಯಾವಾಗಲೂ ಜನರ ನಿರೀಕ್ಷೆಗೆ ತಕ್ಕಂತೆ ಇರುತ್ತದೆ. ಹಿಂದಿನ ಐದು ಬಜೆಟ್‌ಗಳು ಹೀಗೆ ಇತ್ತು. ಮುಂದಿನ ಬಜೆಟ್ ಸಹ ಹಾಗೆ ಇರುತ್ತದೆ' ಎಂದು ಸಿದ್ದರಾಮಯ್ಯ ತಿಳಿಸಿದರು.

ನಮ್ಮ ಸರ್ಕಾರದ ಮಾದರಿ
'ಆನ್‌ಲೈನ್ ಮಾರುಕಟ್ಟೆಗೆ 2 ಸಾವಿರ ಕೋಟಿ ಮೀಸಲಾಗಿಟ್ಟಿದ್ದಾರೆ. ಇದು ಉತ್ತಮವಾದ ಯೋಜನೆ. ನಮ್ಮ ಸರ್ಕಾರದ ಮಾದರಿ ಯೋಜನೆ ಇದಾಗಿದೆ' ಎಂದು ಸಿದ್ದರಾಮಯ್ಯ ಹೇಳಿದರು.

ಕಣ್ಣುಕಟ್ಟು ಬಜೆಟ್
'ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ಮಂಡಿಸಿದ್ದಾರೆ. ದಿಕ್ಕು-ದೆಸೆ ದೃಷ್ಟಿಕೋನ ಇಲ್ಲದ ಬಜೆಟ್ ಇದಾಗಿದೆ. ಸುಮ್ಮನೆ ಭರವಸೆಗಳ ಘೋಷಣೆ ಮಾಡಿದ್ದಾರೆ. ಬರೀ ಭರವಸೆ ಕೊಟ್ಟು ಕಣ್ಣುಕಟ್ಟು ಕಥೆ ಮಾಡಿದ್ದಾರೆ' ಎಂದು ಸಿದ್ದರಾಮಯ್ಯ ದೂರಿದರು.

ಕೇಂದ್ರದ ಮೇಲೆ ಯಾವುದೇ ಹೊರ ಇಲ್ಲ
'ಬೆಂಗಳೂರು ಸಬ್ ಅರ್ಬನ್ ರೈಲ್ವೆ ಬಗ್ಗೆ ಘೋಷಣೆ ಮಾಡಲಾಗಿದೆ. ಈಕ್ವಿಟಿ ನಿಗದಿ ಮಾಡಿದ್ದಾರೆ. ಮೊದಲೇ ನಮ್ಮ ಸರ್ಕಾರ ಈ ಕೆಲಸ ಮಾಡಿದೆ. ಸ್ಪೆಷಲ್ ಪರ್ಪಸ್ ವೆಹಿಕಲ್ ಘೋಷಣೆ ಮಾಡಲಾಗಿದೆ. ಇದರಿಂದ ಕೇಂದ್ರದ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ' ಎಂದು ಸಿದ್ದರಾಮಯ್ಯ ಹೇಳಿದರು.

ಸಾಲ ಮನ್ನಾ, ಉದ್ಯೋಗ ಸೃಷ್ಟಿ ಇಲ್ಲ
'ರೈತರ ಅಲ್ಪಾವಧಿ ಸಾಲ ಮನ್ನಾ ಮಾಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಮನಮೋಹನ್ ಸಿಂಗ್ ಸರ್ಕಾರ 72,000 ಕೋಟಿ ಮನ್ನಾ ಮಾಡಿತ್ತು. ಕೃಷಿಗೆ ಹೆಚ್ಚು ಒತ್ತು ಕೊಡಲಾಗಿದೆ ಎಂಬುದು ಕೇವಲ ಘೋಷಣೆಯಾಗಿದೆ. ಉದ್ಯೋಗ ಸೃಷ್ಟಿ ಬಗ್ಗೆ ಏನೂ ಹೇಳಿಲ್ಲ. ಕಳೆದ ಬಾರಿ ಘೋಷಣೆ ಮಾಡಿದ್ದ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಯೇ ಇನ್ನೂ ಜಾರಿಯಾಗಿಲ್ಲ' ಎಂದು ಸಿದ್ದರಾಮಯ್ಯ ದೂರಿದರು.

ಪೆಟ್ರೋಲ್, ಡೀಸೆಲ್
'ಕರ್ನಾಟಕ ರಾಜ್ಯಕ್ಕೆ ಈ ಬಜೆಟ್‌ನಲ್ಲಿ ಏನೂ ವಿಶೇಷ ಕೊಡುಗೆ ಸಿಕ್ಕಿಲ್ಲ. ರಾಜ್ಯದ ಜನರಿಗೆ ನಿರಾಶೆಯಾಗಿದೆ. ನಮ್ಮ ಬಜೆಟ್ ಯಾವಾಗಲೂ ಜನರ ನಿರೀಕ್ಷೆಗೆ ತಕ್ಕಂತೆ ಇರುತ್ತವೆ. ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ 2 ರೂ ಇಳಿಕೆ ಮಾಡಿದರೆ ಏನೂ ಪ್ರಯೋಜನವಿಲ್ಲ. 10 ರೂ. ಗಿಂತ ಹೆಚ್ಚು ಏರಿಕೆ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲೆ ಉಳಿತಾಯವಾದ ಸೆಸ್ ಹಣದಲ್ಲಿ ಸ್ವಲ್ಪವಾದರೂ ಗ್ರಾಹಕರಿಗೆ ವರ್ಗಾಯಿಸಿದ್ದರೆ ಅನುಕೂಲವಾಗುತ್ತಿತ್ತು' ಎಂದರು.

ವೈದ್ಯಕೀಯ ಕಾಲೇಜುಗಳು
'ಕೇಂದ್ರ ಬಜೆಟ್‌ನಲ್ಲಿ ಮೂರು ಲೋಕಸಭೆಗೊಂದು ಮೆಡಿಕಲ್ ಕಾಲೇಜು ಘೋಷಿಸಿದ್ದಾರೆ. ನಾವು ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಆಸ್ಪತ್ರೆ ಮಾಡಿದ್ದೇವೆ. ಪ್ರಸ್ತುತ 13 ಮೆಡಿಕಲ್ ಕಾಲೇಜುಗಳಿವೆ' ಎಂದು ಸಿದ್ದರಾಮಯ್ಯ ವಿವರಣೆ ನೀಡಿದರು.












Click it and Unblock the Notifications