ಬಾಲ್ಯದ ಕನಸಿಗೆ ರೆಕ್ಕೆ ಕಟ್ಟಿದ ಕಾರ್ಕಳ ಹುಡುಗಿ: ಉಡುಪಿಯ ಪ್ರಥಮ ಮಹಿಳಾ ಕಮರ್ಷಿಯಲ್ ಪೈಲಟ್ ಆದ ಶೈನಿ ಅಸ್ಮಾ
ಉಡುಪಿ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರದತ್ತ ಮುಖ ಮಾಡುವುದು ಸಾಮಾನ್ಯ. ಆದರೆ, ಉಡುಪಿ ಜಿಲ್ಲೆಯ ಕಾರ್ಕಳದ 20 ವರ್ಷದ ಯುವತಿ ಶೈನಿ ಅಸ್ಮಾ ಸಲ್ಡಾನ್ಹಾ ಅವರು ಮಾತ್ರ ಬೇರೆಯೇ ಮಾರ್ಗ ಕಂಡುಕೊಂಡಿದ್ದಾರೆ. ತಾವು ಬಾಲ್ಯದಲ್ಲಿ ಕಂಡ ಆಕಾಶದಲ್ಲಿ ಹಾರಾಡುವ ಕನಸನ್ನ ನನಸು ಮಾಡಿಕೊಂಡಿದ್ದಾರೆ.
ಹೌದು, ಶೈನಿ ಅವರು ಇಂದಿರಾ ಗಾಂಧಿ ರಾಷ್ಟ್ರೀಯ ಉರಾನ್ ಅಕಾಡೆಮಿಯಲ್ಲಿ ವಾಣಿಜ್ಯ ಪೈಲಟ್ ತರಬೇತಿಯನ್ನ ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಕರಾವಳಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇತರ ವರದಿಗಳು ಹಾಗೂ ಸ್ಥಳೀಯರ ಮಾಹಿತಿಯ ಪ್ರಕಾರ, ಉಡುಪಿ ಜಿಲ್ಲೆಯಿಂದ ಕಮರ್ಷಿಯಲ್ ಪೈಲಟ್ ಅರ್ಹತೆ ಪಡೆದ ಮೊದಲ ಮಹಿಳೆ ಎಂಬ ಅಗ್ಗಳಿಕೆಗೆ ಕೂಡ ಇವರು ಪಾತ್ರರಾಗಿದ್ದಾರೆ.

ಬಾಲ್ಯದ ಕನಸು ನನಸಾಗಿಸಿದ ಶೈನಿ ಅಸ್ಮಾ ಸಲ್ಡಾನ್ಹಾ
ಕಾರ್ಕಳ ನಿವಾಸಿಯಾಗಿರುವ ಅಶೋಕ್ ಜೇಕಬ್ ಸಲ್ಡಾನ್ಹಾ ಮತ್ತು ಮರಿಯಾ ಗ್ರೆಟ್ಟಾ ಸಲ್ಡಾನ್ಹಾ ದಂಪತಿಯ ಪುತ್ರಿಯಾಗಿರುವ ಶೈನಿ, ಬಾಲ್ಯದಿಂದಲೂ ವಿಮಾನ ಹಾರಾಟದ ಬಗ್ಗೆ ವಿಶೇಷ ಆಸಕ್ತಿ ಹಾಗೂ ಕುತೂಹಲ ಹೊಂದಿದ್ದರು. ತಮ್ಮ ಪ್ರಾಥಮಿಕ ಹಾಗೂ ಪದವಿಪೂರ್ವ ಶಿಕ್ಷಣವನ್ನ ಕಾರ್ಕಳದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದ ಅವರು, ಪಿಯುಸಿ ಮುಗಿದ ತಕ್ಷಣವೇ ಪೈಲಟ್ ತರಬೇತಿಗೆ ಸೇರ್ಪಡೆಯಾದರು.
"ನನಗೆ ವೈದ್ಯೆ ಅಥವಾ ಎಂಜಿನಿಯರ್ ಆಗುವ ಬಗ್ಗೆ ಎಂದಿಗೂ ಆಸಕ್ತಿ ಇರಲಿಲ್ಲ. ಎವಿಯೇಶನ್ ಎನ್ನುವುದು ಒಂದು ವಿಭಿನ್ನವಾದ ಕ್ಷೇತ್ರವಾಗಿತ್ತು ಮತ್ತು ಈ ವೃತ್ತಿ ನನಗೆ ಹೆಚ್ಚು ಸೂಕ್ತವೆಂದು ನಾನು ಭಾವಿಸಿದ್ದೆ," ಎಂದು ಶೈನಿ ತಮ್ಮ ನಿರ್ಧಾರವನ್ನ ಹೆಮ್ಮೆಯಿಂದ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಐದನೇ ತರಗತಿಯಲ್ಲಿರುವಾಗಲೇ ಅವರು ಪೈಲಟ್ ಆಗುವ ಕನಸು ಕಂಡಿದ್ದರು ಎಂದು ಅವರ ತಂದೆ ಅಶೋಕ್ ಸ್ಮರಿಸಿಕೊಳ್ಳುತ್ತಾರೆ.
IGRUA ದಲ್ಲಿ ಅತ್ಯುನ್ನತ ಪೈಲಟ್ ತರಬೇತಿ
ಶೈನಿ ಅವರು 2023ರಲ್ಲಿ ತಮ್ಮ ಕಮರ್ಷಿಯಲ್ ಪೈಲಟ್ ತರಬೇತಿಯನ್ನ ಅಧಿಕೃತವಾಗಿ ಪ್ರಾರಂಭಿಸಿದರು. ಈ ಕಠಿಣ ತರಬೇತಿಯು ತಾಂತ್ರಿಕ ಹಾಗೂ ಸೈದ್ಧಾಂತಿಕ ತರಗತಿಗಳು (ಗ್ರೌಂಡ್ ಟ್ರೈನಿಂಗ್) ಮತ್ತು 200 ಗಂಟೆಗಳ ಕಾಲ ವಿಮಾನ ಹಾರಾಟದ ಪ್ರಾಯೋಗಿಕ ತರಬೇತಿಯನ್ನ ಒಳಗೊಂಡಿತ್ತು. ತಮ್ಮ ಈ ತರಬೇತಿಯ ಅವಧಿಯಲ್ಲಿ ಅವರು ಸಿಂಗಲ್-ಎಂಜಿನ್ 'ಡೈಮಂಡ್ DA40' (Diamond DA40) ಮತ್ತು ಟ್ವಿನ್-ಎಂಜಿನ್ 'ಡೈಮಂಡ್ DA42' (Diamond DA42) ವಿಮಾನಗಳನ್ನ ಯಶಸ್ವಿಯಾಗಿ ಹಾರಿಸುವ ಮೂಲಕ ಅತ್ಯುತ್ತಮ ಕೌಶಲ್ಯ ಪ್ರದರ್ಶಿಸಿದ್ದಾರೆ.
ವಿಮಾನ ಹಾರಾಟದ ಪ್ರತಿಯೊಂದು ಕ್ಷಣವನ್ನೂ ತಾನು ಆನಂದಿಸಿದ್ದೇನೆ ಎನ್ನುವ ಅವರು, ಈ ವೃತ್ತಿಗೆ ಅತಿ ಹೆಚ್ಚು ಏಕಾಗ್ರತೆ, ಪ್ರಾಯೋಗಿಕ ಚಿಂತನೆ ಮತ್ತು ಜಾಗರೂಕತೆ ತುಂಬ ಅಗತ್ಯವಿದೆ. ಹಾಗೆಯೇ ಯಾವುದೇ ಒತ್ತಡವಿಲ್ಲದೆ, ಇಷ್ಟಪಟ್ಟು ಈ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡಿದ್ದರಿಂದ ಕಲಿಯುವುದು ಸುಲಭವಾಯಿತು ಎಂಬುದು ಅವರ ಅಭಿಪ್ರಾಯ.
ಕಮರ್ಷಿಯಲ್ ಏರ್ಲೈನ್ ಸೇರುವ ಮುಂದಿನ ಗುರಿ
ಬಾಲ್ಯದಲ್ಲಿ 'ಬೋಯಿಂಗ್ 777' ವಿಮಾನಗಳು ಶೈನಿಯವರನ್ನು ಹೆಚ್ಚು ಆಕರ್ಷಿಸುತ್ತಿದ್ದವು. ಆದರೆ ಈಗ ಯಾವುದೇ ವಿಮಾನವನ್ನು ಹಾರಿಸಲು ತಾವು ಸಿದ್ಧರಾಗಿದ್ದು, ಸಿಗುವ ಪ್ರತಿಯೊಂದು ಅವಕಾಶವನ್ನು ಅತ್ತಮವಾಗಿ ಬಳಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಪ್ರಸ್ತುತ 200 ಗಂಟೆಗಳ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿರುವ ಅವರು, ಅಕಾಡೆಮಿಯಲ್ಲಿ ದಾಖಲಾತಿ ಮತ್ತು ಪ್ರಮಾಣಪತ್ರ ಪಡೆಯುವ ಅಂತಿಮ ಪ್ರಕ್ರಿಯೆಗಳಲ್ಲಿದ್ದಾರೆ.
"ವರ್ಷಗಳ ಕಾಲ ಈ ಗುರಿಗಾಗಿ ನಿರಂತರವಾಗಿ ಶ್ರಮಿಸಿದ್ದೇನೆ. ಈಗ ನನಗೆ ತುಂಬಾ ಖುಷಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಸಾಧನೆಗೆ ಬರುತ್ತಿರುವ ಶುಭಾಶಯಗಳ ಮಹಾಪೂರವನ್ನು ನೋಡಿ ಮೂಕವಿಸ್ಮಿತಳಾಗಿದ್ದೇನೆ," ಎಂದು ಶೈನಿ ಹರ್ಷ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ವಾಣಿಜ್ಯ ವಿಮಾನಯಾನ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿ ವೃತ್ತಿಜೀವನ ಆರಂಭಿಸಲು ಅವರು ಸಜ್ಜಾಗಿದ್ದಾರೆ.
ಸಾಮಾನ್ಯವಾಗಿ ವಿಮಾನಯಾನ ಕ್ಷೇತ್ರವು ಪುರುಷ ಪ್ರಾಬಲ್ಯದ ವಲಯವೆಂದು ಗುರುತಿಸಿಕೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ಈ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಶೈನಿ ಅವರ ಪೋಷಕರು ಕೂಡ ಮಗಳ ಆಸಕ್ತಿಗೆ ಅಡ್ಡಿಯಾಗದೆ, ಸಂಪೂರ್ಣ ಬೆಂಬಲ ನೀಡಿದ್ದಾರೆ.


Click it and Unblock the Notifications
