ಹೈಕೋರ್ಟ್ ತೀರ್ಪು ಬಳಿಕ ಅಲ್ಪಸಂಖ್ಯಾತ ಆಯೋಗಕ್ಕೆ ಹೊಸ ಅಧ್ಯಕ್ಷರು
ಬೆಂಗಳೂರು, ಜೂನ್ 07; ಹೈಕೋರ್ಟ್ ತೀರ್ಪಿನ ಬಳಿಕ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಹುದ್ದೆಗೆ ಕರ್ನಾಟಕ ಸರ್ಕಾರ ಹೊಸ ಅಧ್ಯಕ್ಷರನ್ನು ನಾಮ ನಿರ್ದೇಶನ ಮಾಡಿದೆ.
ಕರ್ನಾಟಕ ಹೈಕೋರ್ಟ್ ವಿಧಾನ ಪರಿಷತ್‌ನ ಮಾಜಿ ಸದಸ್ಯ ಅಬ್ದುಲ್ ಅಜೀಂ ನಾಮ ನಿರ್ದೇಶನ ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಕೆಲವು ದಿನಗಳ ಹಿಂದೆ ಎತ್ತಿ ಹಿಡಿದಿತ್ತು. ಆದ್ದರಿಂದ ಅವರಿಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿತ್ತು.

ಆದೇಶದ ವಿವರ: ಈ ಕುರಿತು ಜೂನ್ 7ರಂದು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ನಾಗರಾಜ, ಸರ್ಕಾರದ ಅಧೀನ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವ್ಯಕ್ಫ್ ಇಲಾಖೆ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾಯ್ದೆ 1994ರ ಸೆಕ್ಷನ್ 3(1) ಮತ್ತು 4(1) ರಡಿಯಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಯು. ನಿಸಾರ್ ಅಹ್ಮದ್, ನಿವೃತ್ತ ಐಜಿಪಿ, E-83, 6'A' ಕ್ರಾಸ್ ಮಾನ್ಯತಾ ರೆಸಿಡೆನ್ಸಿ ಟೆಕ್ ಪಾರ್ಕ್, ರಾಚೇನಹಳ್ಳಿ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ನಾಮನಿರ್ದೇಶನಗೊಳಿಸಿದೆ ಎಂದು ಹೇಳಿದ್ದಾರೆ.
ಹೈಕೋರ್ಟ್‌ಗೆ ಅರ್ಜಿ: ಅಬ್ದುಲ್ ಅಜೀಂ ತಮ್ಮನ್ನು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರ ಸ್ಥಾನಕ್ಕೆ ನಾಮ ನಿರ್ದೇಶನ ಹಿಂಪಡೆದಿದ್ದ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತ್ತು.
ಮೇ 30ರಂದು ಕೋರ್ಟ್ ಸರ್ಕಾರದ ಅಧೀನದ ಆಯೋಗಗಳಿಗೆ ಅಧ್ಯಕ್ಷರ ನಾಮ ನಿರ್ದೇಶನ ಮಾಡುವುದು ಮತ್ತು ಹಿಂಪಡೆಯುವುದು ಸರ್ಕಾರದ ವಿವೇಚನೆಗೆ ಒಳಪಟ್ಟಿರಲಿದ್ದು, ಈ ಪ್ರಕ್ರಿಯೆಯಲ್ಲಿ ನೋಟಿಸ್ ನೀಡದೆ ಏಕಪಕ್ಷೀಯವಾಗಿ ನಾಮ ನಿರ್ದೇಶನ ಹಿಂಪಡೆಯಲಾಗಿದೆ ಎಂಬುದಾಗಿ ಸರ್ಕಾರದ ಕ್ರಮವನ್ನು ಪ್ರಶ್ನಿಸಲು ಅವಕಾಶವಿಲ್ಲ ಎಂದು ಹೇಳಿತ್ತು.
ಅಬ್ದುಲ್ ಅಜೀಂ ಅವರನ್ನು 2019ರಿಂದ ಮೂರು ವರ್ಷಗಳ ಅವಧಿಗೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಕಾಯಿದೆಯನ್ವಯ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
2022ಕ್ಕೆ ಅವರ ಮೊದಲ ಮೂರು ವರ್ಷದ ಅಧಿಕಾರವಧಿ ಪೂರ್ಣಗೊಂಡಿತ್ತು. ಇದಾದ ನಂತರ ಎರಡನೇ ಅವಧಿಗೆ ನೇಮಕ ಮಾಡಿ ಆದೇಶಿಸಲಾಗಿದ್ದು, 2025ರ ವರೆಗೂ ಅಧಿಕಾರವಧಿ ಜಾರಿಯಲ್ಲಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ಬದಲಾವಣೆ ಆಯಿತು.
ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ ಹೊರಬಿದ್ದ ಟಿಪ್ಪಣಿಯ ಅನುಸಾರವಾಗಿ ಹಿಂದಿನ ಸರ್ಕಾರದ ಅವಧಿಯ ಎಲ್ಲ ನಾಮ ನಿರ್ದೇಶನಗಳನ್ನು ಅನೂರ್ಜಿತಗೊಳಿಸಿ ಆದೇಶಿಸಲಾಗಿತ್ತು. ಅದರಂತೆ ಅರ್ಜಿದಾರ ಅಬ್ದುಲ್ ಅಜೀಂ ಅವರ ಆಯೋಗದ ಅಧ್ಯಕ್ಷ ಸ್ಥಾನವನ್ನು ರದ್ದುಗೊಳಿಸಲಾಗಿತ್ತು.
ಬಳಿಕ ಅಬ್ದುಲ್ ಅಜೀಂ ಮನವಿಯಂತೆ ನಾಮನಿರ್ದೇಶನ ರದ್ದುಪಡಿಸಿದ್ದ ಅಧಿಸೂಚನೆಯನ್ನು ಸರ್ಕಾರ ಹಿಂಪಡೆದಿತ್ತು. ಬಳಿಕ ಅಬ್ದುಲ್ ಅಜೀಂ ಅವರನ್ನು ಆಯೋಗದ ಅಧ್ಯಕ್ಷರ ಹುದ್ದೆಯಿಂದ ರದ್ದುಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
ಕೋರ್ಟ್ ತನ್ನ ತೀರ್ಪಿನಲ್ಲಿ ಸರ್ಕಾರದ ಅಧೀನದ ಆಯೋಗಗಳಿಗೆ ಅಧ್ಯಕ್ಷರ ನಾಮ ನಿರ್ದೇಶನ ಮಾಡುವುದು ಮತ್ತು ಹಿಂಪಡೆಯುವುದು ಸರ್ಕಾರದ ವಿವೇಚನೆಗೆ ಒಳಪಟ್ಟಿರಲಿದ್ದು, ಈ ಪ್ರಕ್ರಿಯೆಯಲ್ಲಿ ನೋಟಿಸ್ ನೀಡದೆ ಏಕಪಕ್ಷೀಯವಾಗಿ ನಾಮ ನಿರ್ದೇಶನ ಹಿಂಪಡೆಯಲಾಗಿದೆ ಎಂಬುದಾಗಿ ಸರ್ಕಾರದ ಕ್ರಮವನ್ನು ಪ್ರಶ್ನಿಸಲು ಅವಕಾಶವಿಲ್ಲ ಎಂದು ಹೇಳಿತ್ತು.












Click it and Unblock the Notifications