ಸಿದ್ದರಾಮಯ್ಯ ಅವರಿಂದ ಎರಡು ಹೊಸ ಜಿಲ್ಲೆ ಘೋಷಣೆ? ಇದರ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?
ಬೆಂಗಳೂರು, ಫೆಬ್ರವರಿ 15: ರಾಜ್ಯದಲ್ಲಿ ಹೊಸ ಜಿಲ್ಲೆಗಳ ರಚನೆ ಬೇಡಿಕೆ ಕುರತು ಮತ್ತೆ ಸದ್ದು ಮಾಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಹೊಸ ಜಿಲ್ಲೆಗಳ ರಚನೆ ಬೇಡಿಕೆ ಹೆಚ್ಚಾಗಿದ್ದು, ಹೊಸ ಜಿಲ್ಲೆಯ ರಚನೆ ಹಿಂದೆ ರಾಜಕೀಯ ಲೆಕ್ಕಾಚಾರ ಜೋರಾಗಿದೆ.
ಹೌದು, ರಾಜ್ಯದ ಅತಿ ದೊಡ್ಡ ಜಿಲ್ಲೆಯಾಗಿದ್ದ ಬೆಳಗಾವಿ ಡಿವೈಡ್ ಆಗೋ ಕಾಲ ಹತ್ತಿರದಲ್ಲಿದೆ. ಚಿಕ್ಕೋಡಿ ಹಾಗೂ ಗೋಕಾಕ್‌ಗಳನ್ನ ಪ್ರತ್ಯೇಕ ಜಿಲ್ಲೆ ಮಾಡಿ ಫೆಬ್ರುವರಿ 16ಕ್ಕೆ ಸಿಎಂ ಸಿದ್ಧರಾಮಯ್ಯ ಘೋಷಿಸಲಿದ್ದಾರೆ ಅಂತ ಹೇಳಲಾಗ್ತಿದೆ. ಈ ಮೂಲಕ ಬೆಳಗಾವಿ ಭಾಗದ ಜನರ ಬಹುದಿನಗಳ ಕನಸು ನನಸಾಗಾಲಿದೆ. ಬಜೆಟ್ ಮಂಡನೆಗೂ ಮುನ್ನ ಈ ಬಗ್ಗೆ ಎಲ್ಲಾ ವಿವರಗಳನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಸೂಚಿಸಿತ್ತು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾಗಿಯೂ ಕಾರ್ಯ ನಿರ್ವಹಿಸುತ್ತಿದೆ. ಮೂರನೇ ಜಿಲ್ಲೆಯಾಗಿ ಬೈಲಹೊಂಗಲ ಅಥವಾ ಗೋಕಾಕ್ ವಿಚಾರದಲ್ಲಿ ಸ್ಪಷ್ಟನೆ ಇಲ್ಲ. ಗೋಕಾಕ್ ಬದಲು ಬೈಲಹೊಂಗಲ ಆದರೆ ಸೂಕ್ತ ಎನ್ನುವ ಒತ್ತಡಗಳಿದ್ದರೆ, ಜಾರಕಿಹೊಳಿ ಕುಟುಂಬಸ್ಥರು ಗೋಕಾಕ್ ಜಿಲ್ಲೆಗೆ ಪಟ್ಟು ಹಿಡಿದಿದ್ದಾರೆ.
ಈ ಹಿಂದೆ ಧಾರವಾಡ ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಭಜಿಸಿದಂತೆಯೇ ಬೆಳಗಾವಿಯ ವಿಭಜನೆಯೂ ಆಗಲೇ ಆಗಿ ಹೋಗುವ ಅವಕಾಶಗಳಿದ್ದರೂ ಪ್ರತಿಷ್ಠೆಯಿಂದ ಹಾಗೆಯೇ ಉಳಿದಿದೆ. ಈ ಬಾರಿಯೂ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್ ಅವರು ಹೊಸ ಜಿಲ್ಲೆಯ ಬಗ್ಗೆ ಮಾತನಾಡಿದ್ದಾರೆ. ಬೆಳಗಾವಿ ವಿಭಜನೆ ಎರಡೋ ಮೂರೋ ಎನ್ನುವ ಪ್ರಶ್ನೆ ಇದೆ. ಇತ್ತ ಶುಕ್ರವಾರ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ ಹಲವು ರಾಜಕೀಯ ಲೆಕ್ಕಾಚಾರವನ್ನ ಹಾಕಿಕೊಂಡಿದ್ದಾರೆ. ಇನ್ನು ಮುಂಬರುವ ಚುನಾವಣೆಯಲ್ಲಿ ಹೊಸ ಜಿಲ್ಲೆಗಳ ಉದಯದ ಕ್ರಿಡಿಟ್ ಪಡೆಯುವ ಲೆಕ್ಕಾಚಾರವನ್ನ ಕೈ ಪಡೆ ಹಾಕಿಕೊಂಡಿದೆ ಎನ್ನಲಾಗಿದೆ.

ಕುಂದ ನಗರ ಬೆಳಗಾವಿ ಜಿಲ್ಲೆಯೂ ಬರೋಬ್ಬರಿ 15 ತಾಲೂಕುಗಳು, 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಇನ್ನೂ ದಶಕಗಳಿಂದಲೂ ಚಿಕ್ಕೋಡಿ, ಗೋಕಾಕ್, ಬೈಲಹೊಂಗಲ ಮತ್ತು ಅಥಣಿ ಜಿಲ್ಲೆಗಳನ್ನು ರಚಿಸುವಂತೆ ನಿರಂತರ ಹೋರಾಟ ನಡೆಯುತ್ತಿದೆ. ಈ ಹಿನ್ನೆಲೆ ಸ್ಥಳೀಯ ಜಿಲ್ಲಾ ಹೋರಾಟ ಸಮಿತಿ ಸಲ್ಲಿಸಿದ್ದ ಮನವಿಯನ್ನು ರಾಜ್ಯ ಸರ್ಕಾರ ಪುರಸ್ಕರಿಸಿದ್ದು, ನಿಗದಿತ ಸಮಯದಲ್ಲಿ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆನ್ನವರ ಆದೇಶಿಸಲಾಗಿದೆ.
ಸರ್ಕಾರ ಆಡಳಿತ ಅನುಕೂಲಕ್ಕಾಗಿ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಬೇಕು. ಚಿಕ್ಕೋಡಿ ಮತ್ತು ಗೋಕಾಕ ತಾಲೂಕುಗಳನ್ನು ಹೊಸ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು. ಈ ಎರಡೂ ಪಟ್ಟಣಗಳು ಜಿಲ್ಲಾ ಕೇಂದ್ರವಾಗಲು ಅಗತ್ಯವಿರುವ ಮೂಲಸೌಕರ್ಯ ಮತ್ತು ಮಾನವಶಕ್ತಿಯನ್ನು ಹಿಂದಿವೆ" ಎಂದು ವಿವಿಧ ಸಂಘಟನೆಗಳ ಮುಖಂಡರು ಹೇಳಿದ್ದಾರೆ. ಚಿಕ್ಕೋಡಿ, ಗೋಕಾಕ ಭಾಗದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಕೂಡ ಈ ಎರಡು ತಾಲೂಕುಗಳನ್ನು ಹೊಸ ಜಿಲ್ಲೆಗಳನ್ನಾಗಿ ಘೋಷಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದಕ್ಕೆ ಅನೇಕ ರಾಜಕೀಯ ವ್ಯವಸ್ಥೆ ಸಹ ಅಡ್ಡ ಬಂದಿದೆ ಎನ್ನಲಾಗಿದೆ.












Click it and Unblock the Notifications