Namo Bharat Train: ಕರ್ನಾಟಕಕ್ಕೆ 2 ನಮೋ ಭಾರತ್ ರೈಲು, ಮಾರ್ಗಗಳು
ಹುಬ್ಬಳ್ಳಿ, ಫೆಬ್ರವರಿ 05: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮಾದರಿಯಲ್ಲಿ 'ನಮೋ ಭಾರತ್' ರೈಲುಗಳಿಗೆ ಸಹ ಬೇಡಿಕೆ ಇದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಸಾಮಾನ್ಯ ಬಜೆಟ್‌ನಲ್ಲಿಯೇ ರೈಲ್ವೆ ಬಜೆಟ್ ಸೇರಿರುವ ಕಾರಣ ಬಜೆಟ್ ಭಾಷಣದಲ್ಲಿ 'ನಮೋ ಭಾರತ್' ರೈಲುಗಳ ಬಗ್ಗೆ ಘೋಷಣೆ ಮಾಡಲಾಗಿದೆ. ಕರ್ನಾಟಕ ರಾಜ್ಯಕ್ಕೆ ಎರಡು ನಮೋ ಭಾರತ್ ರೈಲುಗಳು ಸಿಕ್ಕಿವೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ 'ನಮೋ ಭಾರತ್' ರೈಲುಗಳ ಕುರಿತು ಮಾಹಿತಿ ನೀಡಿದ್ದಾರೆ. ಎರಡು ನಗರಗಳ ನಡುವೆ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಮೊದಲು 'ವಂದೇ ಮೆಟ್ರೋ' ಹೆಸರಿನ ರೈಲು ಘೋಷಣೆ ಮಾಡಿತ್ತು. ಬಳಿಕ ಇದರ ಹೆಸರನ್ನು 'ನಮೋ ಭಾರತ್' ಎಂದು ಬದಲಾವಣೆ ಮಾಡಲಾಗಿದೆ.

ಈಗಾಗಲೇ 2024ರ ಸೆಪ್ಟೆಂಬರ್‌ನಲ್ಲಿ ಬುಜ್-ಅಹಮದಾಬಾದ್ ನಡುವಿನ 'ನಮೋ ಭಾರತ್' ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಕರ್ನಾಟಕಕ್ಕೆ ಈಗ ಎರಡು ಈ ಮಾದರಿಯ ರೈಲುಗಳನ್ನು ಘೋಷಣೆ ಮಾಡಲಾಗಿದೆ.
ಯಾವ-ಯಾವ ಮಾರ್ಗ?: ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕರ್ನಾಟಕದ ಎರಡು 'ನಮೋ ಭಾರತ್' ರೈಲುಗಳ ಕುರಿತು ಮಾಹಿತಿ ನೀಡಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಸಚಿವರು, 'ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಪ್ರಮುಖ ನಗರಗಳ ನಡುವೆ 50 ನಮೋ ಭಾರತ್ ರೈಲುಗಳು ಸಂಚಾರ ಸೌಲಭ್ಯ ಕಲ್ಪಿಸಿದ್ದಾರೆ. ಇದರಲ್ಲಿ ನಮ್ಮ ಕರ್ನಾಟಕಕ್ಕೂ 2 ರೈಲುಗಳ ಕೊಡುಗೆ ನೀಡಿದ್ದಾರೆ' ಎಂದು ಹೇಳಿದ್ದಾರೆ.
'ಹುಬ್ಬಳ್ಳಿ-ದಾವಣಗೆರೆ ಮತ್ತು ಬೆಂಗಳೂರು-ಮೈಸೂರು ನಡುವೆ 2 ನಮೋ ಭಾರತ್ ರೈಲುಗಳು ಪ್ರಸಕ್ತ ವರ್ಷದಿಂದಲೇ ಸಂಚರಿಸಲಿವೆ. ಕರ್ನಾಟಕಕ್ಕೆ ಈ ರೈಲು ಸೌಲಭ್ಯ ನೀಡಿದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಮತ್ತು ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ' ಎಂದು ತಿಳಿಸಿದ್ದಾರೆ.
ಭಾರತೀಯ ರೈಲ್ವೆ ಹೆಚ್ಚು ದೂರದ ನಗರಗಳನ್ನು ಸಂಪರ್ಕಿಸಲು ವಂದೇ ಭಾರತ್ ರೈಲು, 100-250 ಕಿ. ಮೀ. ದೂರವಿರುವ ನಗರಗಳನ್ನು ಸಂಪರ್ಕಿಸಲು 'ನಮೋ ಭಾರತ್' ರೈಲುಗಳನ್ನು ಓಡಿಸಲಿದೆ. ಮೈಸೂರು-ಬೆಂಗಳೂರು ನಗರದ ನಡುವೆ ನಮೋ ಭಾರತ್ ರೈಲು ಓಡಿಸಲಾಗುತ್ತದೆ ಎಂದು ರೈಲ್ವೆ ಸಚಿವರು 2024ರ ಡಿಸೆಂಬರ್‌ನಲ್ಲಿಯೇ ಘೋಷಣೆ ಮಾಡಿದ್ದರು.
ಇಂತಹ ರೈಲು ಸೇವೆಯಿಂದ ಪ್ರತಿದಿನ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ವೇಗವಾಗಿ ಈ ರೈಲುಗಳು ಸಂಚಾರ ನಡೆಸುವ ಕಾರಣ ಜನರ ಸಮಯ ಉಳಿತಾಯವಾಗಲಿದೆ.
ನಮೋ ಭಾರತ್ ರೈಲು ಗಂಟೆಗೆ 140 ಕಿ. ಮೀ. ವೇಗದಲ್ಲಿ ಸಂಚಾರವನ್ನು ನಡೆಸಬಲ್ಲದು. ಈ ಮಾದರಿ ರೈಲುಗಳ ಪ್ರಾಯೋಗಿಕ ಸಂಚಾರ ಈಗಾಗಲೇ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಎರಡು ರೈಲುಗಳ ಸಂಚಾರ ಈ ವರ್ಷ ಆರಂಭವಾಗಲಿದೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ.












Click it and Unblock the Notifications