ಮಂಗಳೂರು; ಕೆವಿಜಿ ಪಾಲಿಟೆಕ್ನಿಕ್ ಪ್ರಾಂಶುಪಾಲರ ಹತ್ಯೆಗೆ ತಿರುವು!
ಮಂಗಳೂರು, ಸೆಪ್ಟೆಂಬರ್ 28; 12 ವರ್ಷದ ಹಿಂದೆ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಎ. ಎಸ್. ರಾಮಕೃಷ್ಣ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕೊಲೆ ಆರೋಪಿಗಳಾದ ಮೃತರ ಸಹೋದರ ಡಾ. ರೇಣುಕಾ ಪ್ರಸಾದ್ ಸೇರಿದಂತೆ 6 ಮಂದಿಯನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ. ಆ 6 ಮಂದಿಯನ್ನು ದೋಷಿಗಳಾಗಿ ತೀರ್ಮಾನಿಸಿ ಕೋರ್ಟ್ ಬುಧವಾರ ಆದೇಶ ಹೊರಡಿಸಿದೆ.
ಪ್ರಕರಣದಲ್ಲಿ ರೇಣುಕಾ ಪ್ರಸಾದ್ ಸೇರಿದಂತೆ 7 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಇವರೇ ಆರೋಪಿಗಳು: ಪ್ರಕರಣದ ಒಟ್ಟು 7 ಮಂದಿ ಆರೋಪಿಗಳ ಪೈಕಿ ಡಾ.ರೇಣುಕಾ ಪ್ರಸಾದ್, ಮನೋಜ್ ರೈ, ಎಚ್. ಆರ್. ನಾಗೇಶ್, ವಾಮನ ಪೂಜಾರಿ, ಶರಣ್ ಪೂಜಾರಿ ಮತ್ತು ಶಂಕರ ಅವರನ್ನು ಮೃತ ಎ. ಎಸ್. ರಾಮಕೃಷ್ಣ ಅವರ ಹತ್ಯೆ ಮತ್ತು ಕೊಲೆಗೆ ಒಳಸಂಚು ರೂಪಿಸಿದ ಪ್ರಕರಣದಲ್ಲಿ ದೋಷಿಗಳೆಂದು ತೀರ್ಮಾನಿಸಿದೆ.
ಆದರೆ, ಏಳನೇ ಆರೋಪಿಯಾಗಿದ್ದ ಎಚ್. ಯು. ನಾಗೇಶ್ ಕುಮಾರ್ ಅವರನ್ನು ಖುಲಾಸೆಗೊಳಿಸಿದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಇದೇ ವೇಳೆ ಮಾನ್ಯ ಮಾಡಿದೆ. ಅಲ್ಲದೆ, ದೋಷಿಗಳಿಗೆ ಶಿಕ್ಷೆ ಪ್ರಮಾಣ ನಿಗದಿಪಡಿಸುವ ಕುರಿತು ಅಕ್ಟೋಬರ್ 5ರಂದು ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ.
ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ ರೇಣುಕಾಪ್ರಸಾದ್ ಹಾಗೂ ಇತರೆ 5 ಆರೊಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಕ್ಷ್ಯಧಾರಗಳ ಸಮೇತ ದೃಢಪಟ್ಟಿದೆ ಎಂದು ತೀರ್ಮಾನಿಸಿರುವ ಹೈಕೋರ್ಟ್, ಎಲ್ಲರನ್ನೂ ಕೊಲೆ ಮತ್ತು ಅಪರಾಧಿಕ ಒಳಸಂಚು ಅರಪಾಧ ಕೃತ್ಯದಲ್ಲಿ ದೋಷಿಯಾಗಿ ತೀರ್ಮಾನಿಸಿದೆ.
ಪ್ರಕರಣದ ಹಿನ್ನೆಲೆ: ಕುರುಂಜಿ ವೆಂಕಟರಮಣ ಗೌಡ ಅವರು ಕೆವಿಜಿ ಅಕಾಡೆಮಿ ಆಫ್ ಲಿಬೆರಲ್ ಎಜುಕೇಷನ್ ಸ್ಪ್ಲಿಂಟರ್ ಇನ್‌ಸ್ಟಿಟ್ಯೂಷನ್ಸ್ ಸಂಸ್ಥಾಪಕರಾಗಿದ್ದಾರೆ. ವಯಸ್ಸಾದ ಮತ್ತು ಅನಾರೋಗ್ಯ ಕಾಡಿದ ಕಾರಣ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ ಹೊಣೆಯನ್ನು ಹಿರಿಯ ಪುತ್ರ ಕೆ. ವಿ. ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್ ಅವರಿಗೆ ವಿಭಜನೆ ಮಾಡಿ ಕೊಡಲಾಗಿತ್ತು. ಆದರೆ, ಮತ್ತೋರ್ವ ಪುತ್ರ ಎ. ಎಸ್. ರಾಮಕೃಷ್ಣ ಅವರು ಕೆವಿಜಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಆಸ್ತಿ, ಶೈಕ್ಷಣಿಕ ಸಂಸ್ಥೆಗಳ ಹೊಣೆಗಾರಿಕೆ ವಿಭಜನೆಯನ್ನು ರಾಮಕೃಷ್ಣ ಅವರ ಸಲಹೆ ಮೇರೆಗೆ ಮಾಡಲಾಗಿದೆ. 2009ರಲ್ಲಿ ಚಿದಾನಂದ ಅವರ ಪರವಾಗಿ ಕೆವಿಜಿ ಮೆಡಿಕಲ್ ಕಾಲೇಜು ವ್ಯವಹಾರಗಳನ್ನು ರಾಮಕೃಷ್ಣ ಅವರು ನೋಡಿಕೊಳ್ಳುತ್ತಿದ್ದರು ಎಂದು ಭಾವಿಸಿದ್ದ ರೇಣುಕಾ ಪ್ರಸಾದ್ , ರಾಮಕೃಷ್ಣ ಕೊಲೆಗೆ ಸುಪಾರಿ ನೀಡಿದ್ದರು.
2011ರ ಏಪ್ರಿಲ್ 28ರಂದು ಬೆಳಗ್ಗೆ 7.45ರ ವೇಳೆಯಲ್ಲಿ ಅಂಬೆಥಡ್ಕ ಬಳಿಯ ಶ್ರೀಕೃಷ್ಣ ಆಯುರ್ವೇದಿಕ್ ಥೆರಪಿ ಕ್ಲಿನಿಕ್ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ರಾಮಕೃಷ್ಣ ಅವರ ಮೇಲೆ ಆರೋಪಿಗಳು ದಾಳಿ ನಡೆಸಿ ಕೊಚ್ಚಿ ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಮೃತನ ಸಹೋದರ ರೇಣುಕಾ ಪ್ರಸಾದ್ ಮೊದಲ ಆರೋಪಿಯಾಗಿದ್ದರು. ಪ್ರಕರಣದಲ್ಲಿ ಒಟ್ಟು 7 ಆರೋಪಿಗಳಿದ್ದು, ಸಾಕ್ಷ್ಯಧಾರಗಳ ಕೊರತೆಯಿಂದ ಅವರೆಲ್ಲರನ್ನೂ ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2016ರ ಅ.21ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರ 2017ರಲ್ಲಿ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿತ್ತು.












Click it and Unblock the Notifications