ಮಾಸ್ತಿ ಗುಡಿ ಚಿತ್ರೀಕರಣದ ದುರಂತಕ್ಕೆ ಹೊಸ ತಿರುವು!
ಬೆಂಗಳೂರು, ಏಪ್ರಿಲ್ 28; ನಟ ದುನಿಯಾ ವಿಜಯ್ ಅಭಿನಯದ ಮಾಸ್ತಿ ಗುಡಿ ಚಲನಚಿತ್ರದ ಚಿತ್ರೀಕರಣದ ವೇಳೆ ನಡೆದ ದುರಂತಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಬೆಂಗಳೂರು ಸಮೀಪದ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಚಿತ್ರೀಕರಣ ಮಾಡುವಾಗ ನೀರಿನಲ್ಲಿ ಮುಳುಗಿ ಖಳ ನಟರಾದ ಉದಯ್ ಮತ್ತು ಅನಿಲ್ ಸಾವನ್ನಪ್ಪಿದ್ದರು.
ಚಿತ್ರದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಉದಯ್ ಹಾಗೂ ಅನಿಲ್ ಮೃತಪಟ್ಟಿದ್ದರು. ತಮ್ಮ ಸಿಕ್ಸ್ ಪ್ಯಾಕ್ ಪ್ರೇಕ್ಷಕರು ನೋಡಬೇಕೆಂದು ಬಯಸಿ ಸೇಫ್ಟಿ ಜಾಕೆಟ್ ಧರಿಸಲು ಅವರು ನಿರಾಕರಿಸಿದ್ದರು. 2017ರಲ್ಲಿ ಮಾಸ್ತಿ ಗುಡಿ ಸಿನಿಮಾ ಬಿಡುಗಡೆಯಾಗಿತ್ತು.

ಈ ಆಘಾತಕಾರಿ ಅಂಶವನ್ನು ಸಾಹಸ ನಿರ್ದೇಶಕ ರವಿವರ್ಮ ಪರ ವಕೀಲರು ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಗುರುವಾರ ತಿಳಿಸಿದ್ದಾರೆ. ಸಾಹಸ ನಿರ್ದೇಶಕ ರವಿವರ್ಮ ಖಳ ನಟರಿಬ್ಬರ ಉದ್ದೇಶಪೂರ್ವಕವಲ್ಲದ ಕೊಲೆ ಸಂಬಂಧ ತಮ್ಮ ವಿರುದ್ಧದ ಆರೋಪವನ್ನು ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಗರದ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್. ಶ್ರೀಧರ ವಿಚಾರಣೆ ನಡೆಸಿದರು.
ವಕೀಲರ ಹೇಳಿಕೆ ಏನು?; ರವಿವರ್ಮ ಪರ ವಕೀಲರು ವಾದ ಮಂಡಿಸಿ, ಖಳ ನಟರಿಬ್ಬರ ಸಾವು ಆಕಸ್ಮಿಕವಾಗಿ ಜರುಗಿದೆ. ಹೆಲಿಕಾಪ್ಟರ್‌ನಿಂದ ಜಲಾಶಯದ ಹಿನ್ನೀರಿಗೆ ಧುಮುಕುವ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ತಮ್ಮ ದೇಹದ ಸಿಕ್ಸ್ ಪ್ಯಾಕ್ ಅನ್ನು ಪ್ರೇಕ್ಷಕರು ನೋಡಲು ಅನುವು ಮಾಡಿಕೊಳ್ಳುವಂತೆ ಕೇಳಿಕೊಂಡು ಸೇಫ್ಟಿ ಜಾಕೆಟ್ (ರಕ್ಷಾ ಕವಚ) ಧರಿಸಲು ಮೃತರು ಒಪ್ಪಿರಲಿಲ್ಲ ಎಂದು ಹೇಳಿದರು.

ಅಲ್ಲದೆ, ತಮಗೆ ಈಜು ಬರುವುದಾಗಿಯೂ ತಿಳಿಸಿದ್ದರು. ಅವರ ಒಪ್ಪಿಗೆ ಮೇರೆಗೆ ಚಿತ್ರೀಕರಣ ನಡೆಸಲಾಗಿತ್ತು. ಈ ಅಂಶ ಪೊಲೀಸರೇ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ ನ್ಯಾಯಾಲಯಕ್ಕೆ ವಕೀಲರು ವಿವರಿಸಿದರು. ಅಲ್ಲದೇ, ಈಜು ಬರುವುದಾಗಿ ಹೇಳಿದ್ದರೂ ಮೃತರ ಹಿತ ದೃಷ್ಟಿ ಗಮನದಲ್ಲಿರಿಸಿಕೊಂಡು ಚಿತ್ರೀಕರಣದ ವೇಳೆ ಅರ್ಜಿದಾರರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಈಜುಗಾರರು ಮತ್ತು ಮೋಟಾರ್ ಬೋಟ್ ಅನ್ನು ಸ್ಥಳದಲ್ಲಿ ಸಿದ್ಧವಾಗಿರಿಸಿಕೊಳ್ಳಲಾಗಿತ್ತು. ಆದರೆ, ಮೋಟಾರ್ ಬೋಟ್‌ನಲ್ಲಿ ಉಂಟಾದ ತಾಂತ್ರಿಕ ದೋಷ ಉಂಟಾಗಿ, ಅದು ನೀರಿನಲ್ಲಿ ಖಳನಾಯಕರು ಬಿದ್ದ ಜಾಗಕ್ಕೆ ಕ್ರಮಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ದುರಂತಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಉದ್ದೇಶಪೂರ್ವಕವಾಗಿ ಯಾವುದೇ ಶಿಕ್ಷಾರ್ಹ ಅಪರಾಧ ಎಸಗಿಲ್ಲ. ಅವರ ವಿರುದ್ಧದ ಆರೋಪ ಕೈಬಿಡಬೇಕು ಎಂದು ಕೋರಿದರು. ನ್ಯಾಯಾಲಯವು ಹೆಚ್ಚಿನ ವಾದ ಮಂಡನೆಗೆ ಮೇ 30ಕ್ಕೆ ವಿಚಾರಣೆ ನಿಗದಿಪಡಿಸಿತು.
ಪ್ರಕರಣದ ಹಿನ್ನೆಲೆ: ಮಾಸ್ತಿ ಗುಡಿ ಚಲನಚಿತ್ರದ ಸಾಹಸದೃಶ್ಯ ಚಿತ್ರೀಕರಣದ ಭಾಗವಾಗಿ 2016ರ ನ.7ರಂದು ಖಳ ನಟರಾದ ಉದಯ್ ಹಾಗೂ ಅನಿಲ್, ನಾಯಕ ನಟ ದುನಿಯಾ ವಿಜಯ್ ಜೊತೆಯಲ್ಲಿ ಹೆಲಿಕಾಪ್ಟರ್‌ನಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಧುಮುಕಿದ್ದರು. ಆದರೆ, ಈಜಿ ದಡ ಸೇರಲು ಸಾಧ್ಯವಾಗದೇ ಖಳ ನಟರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಪ್ರಕರಣದ ರಾಜ್ಯಾದ್ಯಂತರ ತೀವ್ರ ಸಂಚಲನ ಮೂಡಿಸಿತ್ತು. ತನಿಖೆ ನಡೆಸಿದ್ದ ತಾವರೆಕೆರೆ ಪೊಲೀಸರು, ಚಿತ್ರದ ಸಾಹಸ ನಿರ್ದೇಶಕ ರವಿವರ್ಮ ಹಾಗೂ ಇತರೆ ಐವರ ವಿರುದ್ಧ ಭಾರತ ದಂಡ ಸಂಹಿತೆ ಸೆಕ್ಷನ್ 304 ಅಡಿಯಲ್ಲಿ ದುಡುಕಿನ ಮತ್ತು ನಿರ್ಲಕ್ಷ್ಯ ಕ್ರಿಯೆಯಿಂದ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಪ್ರಕರಣದಡಿ (ಉದ್ದೇಶಪೂರ್ವಕವಲ್ಲದ ಕೊಲೆ) ಸಂಬಂಧ ಆರೋಪ ಪಟ್ಟಿ ಸಲ್ಲಿಸಿದ್ದರು.












Click it and Unblock the Notifications