Tungabhadra Dam: ಡ್ಯಾಂ ಬಹುತೇಕ ಭರ್ತಿ: ಇಂದಿನಿಂದ 90 ದಿನ 4,100 ಕ್ಯೂಸೆಕ್ ನೀರು ಬಿಡುಗಡೆ!
Tungabhadra Dam: ರಾಜ್ಯದ ಅತೀ ದೊಡ್ಡ ಜಲಾಶಯಗಳಲ್ಲಿ ಒಂದಾದ ಕರ್ನಾಟಕ ಸೇರಿ ಮೂರು ರಾಜ್ಯಗಳಿಗೆ ನೀರಾವರಿ ಹಾಗೂ ಕುಡಿಯಲು ನೀರೊದಗಿಸುವ ತುಂಗಭದ್ರಾ ಜಲಾಶಯದಲ್ಲಿ ಭಾರೀ ಒಳಹರಿವು ದಾಖಲಾಗಿದೆ. ಡ್ಯಾಂಗೆ ಹೊಸದಾಗಿ ಕ್ರಸ್ಟ್ ಗೇಟ್ ಅಳವಡಿಸಿದ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸಲಾಗುತ್ತಿತ್ತು. ಹೀಗಾಗಿ ಹೊರಗೆ ಹೆಚ್ಚಿನ ಪ್ರಮಾಣದ ನೀರು ಬಿಡುತ್ತಿರಲಿಲ್ಲ. ಇದೀಗ ಡ್ಯಾಂ ಬಹುತೇಕ ಭರ್ತಿ ಹಂತಕ್ಕೆ ಬಂದಿದ್ದು ನೀರು ಬಿಡುಗಡೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ತುಂಗಭದ್ರಾ ಡ್ಯಾಂ ನೀರು ಬಿಡುಗಡೆ ಬಗ್ಗೆ ಮಾಹಿತಿ ನೀಡಿದರು. ಇಂದು ಮಂಗಳಾವಾರ ಮುನಿರಾಬಾದ್ ಟಿಬಿಪಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

90 ದಿನ ನಿತ್ಯ 4100 ಕ್ಯೂಸೆಕ್ ನೀರು ಬಿಡುಗಡೆ
ತುಂಗಭದ್ರಾ ಜಲಾಶಯದಲ್ಲಿನ ನೀರಿನ ಲಭ್ಯತೆ ಆಧಾರದ ಮೇಲೆ 90 ದಿನಗಳ ಕಾಲ 4100 ಕ್ಯೂಸೆಕ್ ನಂತೆ ಕಾಲುವೆಗಳಿಗೆ ಇಂದಿನಿಂದಲೇ ನೀರು ಹರಿಸಲು ತೀರ್ಮಾನಿಲಾಗಿದೆ. ಪ್ರಸ್ತುತ 82 ಟಿಎಂಸಿ ನೀರಿನ ಸಂಗ್ರಹ ಇದ್ದು, ಮುಂದಿನ ದಿನಗಳಲ್ಲಿ 16 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಮುಂದಿನ ತಿಂಗಳು ಸೆಪ್ಟೆಂಬರ್ 11ರಂದು ಮತ್ತೊಂದು ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಎಡದಂಡೆ, ಬಲದಂಡೆ ಕಾಲುವೆಗಳಿಗೆ ನೀರು
ಜಲಾಶಯದಲ್ಲಿನ ನೀರಿನ ಸಂಗ್ರಹ ಲಭ್ಯತೆಯ ಮೇರೆಗೆ ನೀರಿನ ಬಳಕೆ ಮಾಡಲಾಗುತ್ತಿದೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಆಗಸ್ಟ್ 11ರಿಂದ ನವೆಂಬರ್ 10 ರವರೆಗೆ 4100 ಕ್ಯೂಸೆಕ್ ನಂತೆ,
ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಆ.11ರಿಂದ ನ.10ರವರೆಗೆ 1200 ಕ್ಯೂಸೆಕ್ ನಂತೆ ನೀರನ್ನು ಹರಿಸಲಾಗುವುದು.
ವಿವಿಧ ಕಾಲುವೆಗಳಿಗೆ ವಿವಿಧ ಹಂತದಲ್ಲಿ ನೀರು
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಆ.11ರಿಂದ ನ.10ರವರೆಗೆ 650 ಕ್ಯೂಸೆಕ್ ನಂತೆ, ರಾಯ ಬಸವಣ್ಣ ಕಾಲುವೆಗೆ ಜ.1ರಿಂದ ಡಿ.10ರವರೆಗೆ ಸರಾಸರಿ 180 ಕ್ಯೂಸೆಕ್ ನಂತೆ ಹಾಗೂ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಆ.11ರಿಂದ ನ.10ರವರೆಗೆ 25 ಕ್ಯೂಸೆಕ್ ಮತ್ತು ನದಿಗೆ ಆ.11ರಿಂದ 17ರವರೆಗೆ 500 ಕ್ಯೂಸೆಕ್ ನೀರು ಹರಿಸಲಾಗುವುದು ಎಂದು ಮಾಹಿತಿ ನೀಡಿದರು.
ತೆಲಂಗಾಣದ ಪಾಲು 3 ಟಿಎಂಸಿ, ಆಂಧ್ರದ ಪಾಲು 30 ಟಿಎಂಸಿ, ಡೆಡ್ ಸ್ಟೊರೇಜ್ ಎರಡು ಟಿಎಂಸಿ ಹಾಗೂ ಕುಡಿಯುವ ನೀರಿಗೆ ಬೇಕಾದ ನೀರನ್ನು ಲೆಕ್ಕ ಹಾಕಿ ನಾಲ್ಕು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರೈತರೊಂದಿಗೆ ಚರ್ಚೆ ನಡೆಸಿ ಈ ಮೇಲಿನ ನಿರ್ಧಾರ ಕೈಗೊಳ್ಳಲಾಗಿದೆ. ದೇವರ ಕೃಪೆಯಿಂದ ಮಳೆ ಬಂದು ಜಲಾಶಯಕ್ಕೆ ನೀರು ಬರಲಿ ಎಂದು ಪ್ರಾರ್ಥಿಸುತ್ತೇವೆ. ರೈತರ ಪರವಾಗಿ ನಮ್ಮ ಸರ್ಕಾರ ಸದಾ ಇರಲಿದೆ ಎಂದರು.
ತುಂಗಭದ್ರಾ ಡ್ಯಾಂನ ಇಂದಿನ ನೀರಿನ ಸಂಗ್ರಹ
ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 105 ಟಿಎಂಸಿ
ಇಂದಿನ ನೀರಿನ ಸಂಗ್ರ: 82.60 ಟಿಎಂಸಿ
ಇಂದಿನ ಒಳಹರಿವು: 41,167 ಕ್ಯೂಸೆಕ್
ಹೊರ ಹರಿವು: 1630 ಕ್ಯೂಸೆಕ್


Click it and Unblock the Notifications
