Tungabhadra Dam Gate Cut: ಸರ್ಕಾರ ಅಣೆಕಟ್ಟು ಹಾಗೂ ಜನರ ಸುರಕ್ಷತೆಗೆ ಗಮನ ನೀಡಲಿ
ಬೆಂಗಳೂರು, ಆಗಸ್ಟ್ 11: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪ ಇರುವ ತುಂಗಭದ್ರಾ ಜಲಾಶಯದ ಕ್ರಸ್ಟ ಗೇಟ್ ಚೈನ್ ತುಂಡಾಗಿದೆ. ಇದರಿಂದ ವ್ಯಾಪಕ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ಡ್ಯಾಂ ಸಮೀಪ ಗ್ರಾಮಗಳ ಜನರು, ರೈತರು ಆತಂಕದಲ್ಲಿದ್ದಾರೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಎಲ್ಲೆಡೆ ಕೇಳಿ ಬಂದಿದೆ.
ಕರ್ನಾಟಕ ಸರ್ಕಾರ ತುಂಗಭದ್ರಾ ಅಣೆಕಟ್ಟೆಯ ಡ್ಯಾಂ ಮ್ಯಾನೇಜ್ ಮೆಂಟ್ ಕಮಿಟಿ ನೀಡಿರುವ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದರಿಂದ ಡ್ಯಾಮ್ ನ ಕ್ರಸ್ಟ್ ಗೇಟ್ ಮುರಿದು ಸಮಸ್ಯೆ ಎದುರಿಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ತುಂಗಭದ್ರಾ ಡ್ಯಾಂ ಸ್ವತಂತ್ರ ಪೂರ್ವದಲ್ಲಿ ನಿರ್ಮಾಣ ಆಗಿದೆ. ಅದು ಕಾಲ ಕಾಲಕ್ಕೆ ಹಲವಾರು ಸಮಸ್ಯೆ ಎದುರಿಸುತ್ತಾ ಬಂದಿದೆ. ಹೂಳು ತುಂಬಿರುವ ಬಗ್ಗೆ ಬಹಳ ದೊಡ್ಡ ಸಮಸ್ಯೆ ಆಗಿತ್ತು. ಹೀಗಾಗಿ ಸಮಾನಾಂತರವಾದ ಅಣೆಕಟ್ಟು ಕಟ್ಟಬೇಕು ಅಂತ ನಮ್ಮ ಅವಧಿಯಲ್ಲಿ ಡಿಪಿಆರ್ ಮಾಡಿ ಸಿದ್ಧತೆ ಮಾಡಲಾಗಿತ್ತು.
ಕಮಿಟಿ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬೇಕು
ಇನ್ನೂ ಜಲಾಶಯದ ನಿರ್ವಹಣಾ ಸಮಿತಿ ಸದಸ್ಯರು ಡ್ಯಾಂ ವಿಚಾರವಾಗಿ ಹಲವು ಸಲಹೆಗಳನ್ನು ಈಗಾಗಲೇ ಕೊಟ್ಟಿದ್ದಾರೆ. ಅವರ ಸಲಹೆಗಳನ್ನು ರಾಜ್ಯ ಸರ್ಕಾರ ಒತ್ತು ಕೊಟ್ಟು ಜಾರಿ ಮಾಡಬೇಕು. ಆದರೆ, ಸರ್ಕಾರ ಗಂಭೀರವಾಗಿ ಅವರ ಸಲಹೆಗಳನ್ನು ತೆಗೆದುಕೊಂಡಿಲ್ಲ ಎಂದನಿಸುತ್ತದೆ. ತಜ್ಞರ ಸಲಹೆ ಗಂಭೀರವಾಗಿ ಪರಿಗಣಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಸರ್ಕಾರ ಈ ಕೂಡಲೇ ತುಂಗ್ರಭದ್ರಾ ಡ್ಯಾಂ ಚೈನ್ ಅಷ್ಟೇ ಅಲ್ಲ, ಸಂಪೂರ್ಣ ಗೇಟ್ ಭದ್ರಗೊಳಿಸಬೇಕು. ಹಣ ಬಿಡುಗಡೆ ಮಾಡಿ ಗೇಟ್ ದುರಸ್ತಿ ಕೆಲಸ ಮಾಡಬೇಕು. ಡ್ಯಾಂ ಹಾಗೂ ಜನರ ಸುರಕ್ಷತೆಯನ್ನು ಸರ್ಕಾರ ಗಮನಿಸಬೇಕು. ಸರ್ಕಾರದ ನಿರ್ಲಕ್ಷ್ಯತನದಿಂದಲೇ ಹೀಗೆ ಆಗಿರಬಹುದು. ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ.

ತನಿಖೆ ನಡೆಸಿದರೆ ಸತ್ಯ ಹೊರ ಬರುತ್ತದೆ
ಹಣಕಾಸು ಅಥವಾ ತಾಂತ್ರಿಕ ಸಮಸ್ಯೆ ಆಗಿರಬಹುದು. ನೋಡೋಣ ಏನಾಗಿದೆ ಎಂದು ಗೊತ್ತಾಗುತ್ತದೆ. ಜಲಾಶಯ ಬಗ್ಗೆ ಇಂಜಿನಿಯರ್ ಗಳು, ತಾಂತ್ರಿಕ ತಜ್ಞರು ಸ್ಥಳದಲ್ಲಿದ್ದರು. ಅವರೆಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿತ್ತು. ಈ ವರ್ಷ ಅತೀ ಹೆಚ್ಚು ಮಳೆ ಬರುತ್ತದೆ ಅಂತ ಮೊದಲೇ ಹವಾಮಾನ ತಜ್ಞರು ಹೇಳಿದ್ದರು. ಅದನ್ನು ಅರ್ಥ ಮಾಡಿಕೊಂಡು ಇವರು ಕೆಲಸ ಮಾಡಬೇಕಿತ್ತು. ಆದರೆ ಸರಿಯಾದ ನಿರ್ವಹಣೆ ಮಾಡದೇ ಈ ಸಮಸ್ಯೆ ಆಗಿದೆ. ಈ ಬಗ್ಗೆ ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ ಎಂದು ಅವರು ಆಗ್ರಹಿಸಿದರು.
ಸದ್ಯ ತುಂಗಭದ್ರಾ ಡ್ಯಾಂ ಕುರಿತು ಜಲಸಂಪನ್ಮೂಲ ಅಧಿಕಾರಿಗಳ ಜೊತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಚರ್ಚೆ ನಡೆಸಿದ್ದಾರೆ. ಡ್ಯಾಂ ದುರಸ್ತಿ, ಜನರ ಸುರಕ್ಷತೆ ಸೇರಿದಂತೆ ಒಂದಷ್ಟು ವಿಷಯಗಳನ್ನು ಚರ್ಚಿಸಿದ್ದಾರೆ. ಅಧಿಕಾರಿಗಳ ಅಗತ್ಯ ಸೂಚನೆ ನೀಡಿದ್ದಾರೆ.












Click it and Unblock the Notifications