ಬಿಲ್ ಆಗಿಲ್ಲವೆಂದು ತುಮಕೂರಿನಲ್ಲಿ ಗುತ್ತಿಗೆದಾರ ಆತ್ಮಹತ್ಯೆ: ಸರ್ಕಾರದ ವಿರುದ್ಧ ಕಮಿಷನ್, ಭ್ರಷ್ಟಾಚಾರದ ಆರೋಪ
ಬೆಂಗಳೂರು, ಡಿಸೆಂಬರ್ 31: ಕರ್ನಾಟಕ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಕೇಳಿಬಂದಿರುವ ನಡುವೆಯೇ ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ಮತ್ತೊಬ್ಬ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತರನ್ನು 50 ವರ್ಷದ ಟಿ.ಎನ್. ಪ್ರಸಾದ್ ಎಂದು ಗುರುತಿಸಲಾಗಿದೆ. ಇವರು ಅಪಾರ ಸಾಲದ ಸುಳಿಯಲ್ಲಿ ಸಿಲುಕಿದ್ದರೆಂದು ವರದಿಯಾಗಿದೆ.
ದೇವರಾಯನದುರ್ಗದ ಅತಿಥಿ ಗೃಹದಲ್ಲಿ ಪ್ರಸಾದ್ ಅವರ ಶವ, ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸಾದ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಅವರು ಮಾಡಿದ ಕಾಮಗಾರಿಗಳ ದುಡ್ಡನ್ನು ಸರ್ಕಾರ ನೀಡಿಲ್ಲ. ಬಿಲ್‌ಗಳು ಬಾಕಿ ಇದ್ದವು. ಈ ಕಾರಣಕ್ಕಾಗಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಸಾದ್ ಸ್ನೇಹಿತರೊಬ್ಬರು ಹೇಳಿಕೊಂಡಿದ್ದಾರೆ.

ಹಲವು ಕಡೆ ಸಾಲ ಮಾಡಿಕೊಂಡಿದ್ದ ಗುತ್ತಿಗೆದಾರ
ಪ್ರಸಾದ್ ಅವರು ಹಲವು ಕಡೆ ಸಾಲಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಅದನ್ನು ಮರುಪಾವತಿಸಲು ಇತ್ತೀಚೆಗೆ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
ತುಮಕೂರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಲರಾಮ್ ಮಾತನಾಡಿ, ಪ್ರಸಾದ್ ಕಳೆದ ಕೆಲವು ತಿಂಗಳಿನಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿಸಿದ್ದಾರೆ.
'ಪ್ರಸಾದ್ ಅವರು ಹಲವು ಕಡೆ ಸಾಲ ಮಾಡಿಕೊಂಡಿದ್ದರು. ಆರು ತಿಂಗಳ ಹಿಂದೆ ಮನೆಯನ್ನೂ ಮಾರಿದ್ದರು. ಅರ್ಹತೆ ಕಳೆದುಕೊಂಡಿದ್ದರಿಂದ ಬೇರೊಬ್ಬರ ಕೈಕೆಳಗೆ ದುಡಿಯುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಖಿನ್ನತೆಗೆ ಒಳಗಾಗಿದ್ದರು. ಜಾಸ್ತಿ ಸಾಲ ಮಾಡಿ ತೀರಿಕೊಂಡರು. ಭ್ರಷ್ಟಾಚಾರ ಹೆಚ್ಚಿದೆ, ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ' ಎಂದು ಬಲರಾಮ್ ಆರೋಪಿಸಿದ್ದಾರೆ.

ಬಾಕಿ ಉಳಿದಿದ್ದ ಹಲವಾರು ಬಿಲ್‌ಗಳು
ಸರ್ಕಾರಿ ಕಚೇರಿಗಳಲ್ಲಿ ಹಲವಾರು ಬಿಲ್‌ಗಳು ಬಾಕಿ ಇವೆ ಎಂದು ಪ್ರಸಾದ್ ಸ್ನೇಹಿತ ರಾಜೇಂದ್ರ ಹೇಳಿದ್ದಾರೆ.
"ಅವರು ನನಗೆ ತುಂಬಾ ಹತ್ತಿರವಾಗಿದ್ದರು ಮತ್ತು ಎಲ್ಲವನ್ನೂ ಹೇಳುತ್ತಿದ್ದರು. ಅವರು ತಮ್ಮ ಜೀವನವನ್ನು ಕೊನೆಗೊಳಿಸಿಕೊಳ್ಳುತ್ತಾರೆ ಎಂಬ ಯಾವುದೇ ಸುಳಿವು ನನಗೆ ಸಿಗಲಿಲ್ಲ. ನಿನ್ನೆ ಮಾತ್ರ ಅವರು ಹಲವಾರು ಬಿಲ್‌ಗಳು ಬಾಕಿ ಉಳಿದಿವೆ ಮತ್ತು ವಿಳಂಬವಾಗುತ್ತಿವೆ ಎಂದು ಹೇಳುತ್ತಿದ್ದರು' ಎಂದು ರಾಜೇಂದ್ರ ತಿಳಿಸಿದ್ದಾರೆ.
ಪೊಲೀಸರು ಸ್ಥಳದಲ್ಲಿ ಡೆತ್ ನೋಟ್ ಅನ್ನು ಪತ್ತೆಹಚ್ಚಿದ್ದಾರೆ ಮತ್ತು ಪತ್ರದಲ್ಲಿರುವ ವಿಚಾರಗಳ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಬೆಳಗಾವಿ ಗುತ್ತಿಗೆದಾರ ಸಂತೋಷ್ ಸಾವು
ಈ ವರ್ಷದ ಆರಂಭದಲ್ಲಿ ಬೆಳಗಾವಿ ಮೂಲದ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಗಾವಿಯ ಹಿಂಡಲಗಾ ಗ್ರಾಮದಲ್ಲಿ ತಾವು ಮಾಡಿದ್ದ ಬಿಲ್‌ಗಳನ್ನು ತೆರವುಗೊಳಿಸಲು ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದರು.
ಸರ್ಕಾರ ಹಲವು ಇಲಾಖೆಗಳಲ್ಲಿ ಶೇ.40 ಕಮಿಷನ್ ಪಡೆದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಪ್ರಸ್ತುತ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘವೂ ಪ್ರತಿಪಾದಿಸಿತ್ತು.
ಪ್ರತಿಪಕ್ಷಗಳ ಒತ್ತಡದ ನಡುವೆಯೇ ಈಶ್ವರಪ್ಪ ಸಚಿವ ಸ್ಥಾನದಿಂದ ಕೆಳಗಿ ಇಳಿದಿದ್ದರು. ಜುಲೈನಲ್ಲಿ ಉಡುಪಿ ಪೊಲೀಸರು 1,890 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಈಶ್ವರಪ್ಪ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಟ್ವೀಟ್
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, 'ಸಂತೋಷ್ ಪಾಟೀಲ್ ಅವರಿಂದ ಹಿಡಿದು ಇಂದು ದೇವರಾಯನದುರ್ಗದ ಗುತ್ತಿಗೆದಾರ ಪ್ರಸಾದ್ ಅವರ ಸಾವಿನವರೆಗೆ ಬಿಜೆಪಿಯ ಭ್ರಷ್ಟಾಚಾರ ಹೆಮ್ಮರವಾಗಿ ಬೆಳೆದು ನಿಂತಿದೆ. 40 ಪರ್ಸೆಂಟ್ ಕಮಿಷನ್‌ನ ದುರಾಸೆ ಮತ್ತೊಬ್ಬ ಅಮಾಯಕ ಗುತ್ತಿಗೆದಾರನ ಕುತ್ತಿಗೆಗೆ ಕುಣಿಕೆಯಾಗಿರುವುದು ಬಿಜೆಪಿಯ ನೀಚ ರಾಜಕಾರಣದ ಪರಮಾವಧಿ' ಎಂದು ವಾಗ್ದಾಳಿ ನಡೆಸಿದ್ದಾರೆ.

40 ಪರ್ಸೆಂಟ್ ಕಮಿಷನ್ ದಾಹಕ್ಕೆ ಗುತ್ತಿಗೆದಾರರ ಬಲಿ
'40 ಪರ್ಸೆಂಟ್ ಕಮಿಷನ್ ದಾಹಕ್ಕೆ ಗುತ್ತಿಗೆದಾರರ ಸರಣಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದೆ. ರಾಜ್ಯದ ಜನರ ಮುಂದೆ ಬಿಜೆಪಿ ಅಸಲಿಯತ್ತು ಬಯಲಾಗಿದ್ದರೂ ರಾಜ್ಯ ಸರ್ಕಾರ ಇನ್ನೂ ತನ್ನ 40% ಕಮಿಷನ್ ದಂಧೆ ಮುಂದುವರೆಸುತ್ತಿರುವುದು ವಿಪರ್ಯಾಸ. ಬಿಜೆಪಿಯ ಭ್ರಷ್ಟಾಚಾರಕ್ಕೆ ಅಂದು ಸಂತೋಷ್ ಪಾಟೀಲ್, ಇಂದು ಪ್ರಸಾದ್, ಮುಂದಿನ ಬಲಿ ಇನ್ಯಾರೋ?' ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳೇ ರಾಜ್ಯದಲ್ಲಿ ಜನ ಸಂಕಲ್ಪ ಯಾತ್ರೆ ಮಾಡುತ್ತಿದ್ದೀರೋ ಅಥವಾ ಜನರ ಶವಯಾತ್ರೆ ಮಾಡುತ್ತಿದ್ದೀರೋ? ಪ್ರಸಾದ್ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಕೂಲಂಕುಷವಾಗಿ ತನಿಖೆಯಾಗಬೇಕು. ಅವರ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು? ಇಲ್ಲವಾದಲ್ಲಿ ನಿಮ್ಮ ಸರ್ಕಾರದ ಅಧಃಪತನ ಖಚಿತ.












Click it and Unblock the Notifications