ಮೈಸೂರು ಮಂಡ್ಯದಲ್ಲಿ ಆತ್ಮಹತ್ಯೆಗಳ ಸರಪಳಿ, ನಾಲ್ಕು ಸಾವು
ಮಂಡ್ಯ, ಡಿಸೆಂಬರ್, 16: ಮನೆಯಲ್ಲಿ ನಡೆಯುತ್ತಿದ್ದ ಕಲಹಕ್ಕೆ ನೊಂದ ತುಮಕೂರು ಜಿಲ್ಲೆಯ ಕುಟುಂಬವೊಂದು ಮಂಡ್ಯದ ಬಳಿ ಇರುವ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದೆ. ಮಂಡ್ಯದ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿ ಕಾಳಿಂಗನಹಳ್ಳಿಯ ಕೆರೆಗೆ ಹಾರಿ ಇಡೀ ಕುಟುಂಬ ಸಾವನ್ನಪ್ಪಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ರಾಘಹಳ್ಳಿ ಗ್ರಾಮದ ರಾಮಕೃಷ್ಣ (63), ಪತ್ನಿ ನಾಗಮ್ಮ (58) ಹಾಗೂ ಪುತ್ರ ಆನಂದ (31) ಆತ್ಮಹತ್ಯೆ ಮಾಡಿಕೊಂಡವರು. ಮನೆಯಲ್ಲಿ ನಡೆಯುತ್ತಿದ್ದ ಕಲಹವೇ ಇವರ ಆತ್ಮಹತ್ಯೆಗೆ ಕಾರಣ ಎಂದು ಹೇಳುತ್ತಿದ್ದು, ಆದರೆ ನಿಖರ ಮಾಹಿತಿ ದೊರೆತಿಲ್ಲ.[ಪ್ರಿಯಕರನ ಬಿಡಲೊಲ್ಲೆ ಎಂದ ಹೆಂಡತಿ, ಗಂಡ ಮಾಡಿದ್ದೇನು?]

ಬೆಳ್ಳೂರು ಹೋಬಳಿ ಕಾಳಿಂಗನಹಳ್ಳಿಯ ಕೆರೆಯಲ್ಲಿ ತಂದೆ, ತಾಯಿ ಮತ್ತು ಮಗ ಈ ಮೂವರ ಶವಗಳು ತೇಲುತ್ತಿರುವುದನ್ನು ಕಾಳಿಂಗನಹಳ್ಳಿ ಗ್ರಾಮಸ್ಥರು ಕಂಡಿದ್ದಾರೆ. ತಕ್ಷಣ ಗ್ರಾಮಸ್ಥರು ಬೆಳ್ಳೂರು ಠಾಣೆಗೆ ದೂರು ನೀಡಿದ್ದಾರೆ.
ಗ್ರಾಮಸ್ಥರು ನೀಡಿದ ದೂರಿನ ಅನ್ವಯ ಘಟನಾ ಸ್ಥಳಕ್ಕೆ ಬೆಳ್ಳೂರು ಠಾಣೆಯ ಪಿಎಸ್ ಐ ಬಾಲು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಶವಗಳನ್ನು ನಾಗಮಂಗಲದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರಿಗೆ ಒಪ್ಪಿಸಲಾಗಿದೆ.[ನಿಂದಿಸಿದ ಮಾಜಿ ಪತ್ನಿಗೆ ಚಾಕುವಿನಿಂದ ಇರಿದ ಪತಿರಾಯ]
ಮೈಸೂರಿನಲ್ಲಿ ರೈತ ಮಹಿಳೆ ಆತ್ಮಹತ್ಯೆ
ಮೈಸೂರು, ಡಿಸೆಂಬರ್, 16: ತಂಬಾಕು ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ರೈತ ಮಹಿಳೆಯೊಬ್ಬರು ಬೆಳೆ ಬೆಳೆಯಲು ಮಾಡಿದ ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ನಗರ ತಾಲೂಕಿನ ಕಗ್ಗಳ ಗ್ರಾಮದಲ್ಲಿ ನಡೆದಿದೆ.

ಕಗ್ಗಳ ಗ್ರಾಮದ ನಿವಾಸಿ ಕಮಲಮ್ಮ(60) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಪತಿ ಬಸವೇಗೌಡರ ಸಾವಿನ ಬಳಿಕ ಮನೆಯ ಜವಾಬ್ದಾರಿ ಹೊತ್ತಿದ್ದ ಕಮಲಮ್ಮ ಕೃಷಿಗಾಗಿ ಸುಮಾರು 5 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು. ಆದರೆ ಸಾಲ ತೀರಿಸಲು ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.[ಅರಿಶಿಣದ ಮೈ ಆರುವ ಮುನ್ನ ಮಹಿಳೆ ಜೀವನವೇ ಬಾಡಿತು]












Click it and Unblock the Notifications