ಆಪರೇಷನ್ ಕಮಲ 2ನೇ ಹಂತ: ಎಷ್ಟು ಮಂದಿ ಅತೃಪ್ತ ಶಾಸಕರಿಂದ ರಾಜೀನಾಮೆ?
ಬೆಂಗಳೂರು, ಜನವರಿ 16 : ಕಾಂಗ್ರೆಸ್ -ಜೆಡಿಎಸ್ ನೇತೃತ್ವದ ಕರ್ನಾಟಕ ಸರ್ಕಾರವನ್ನು ಹೇಗಾದರೂ ಉರುಳಿಸಬೇಕು ಎಂಬ ಯತ್ನವನ್ನು ಬಿಜೆಪಿ ಮುಂದುವರೆಸಿದೆ. ಕುಮಾರಸ್ವಾಮಿ ನೇತೃತ್ವದ ಬಹುಮತ ಕಳೆದುಕೊಳ್ಳಲಿದೆಯೇ? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಾಧ್ಯವಿಲ್ಲ. ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿರುವುದಾಗಿ ಮುಂಬೈನಲ್ಲಿ ಘೋಷಣೆ ಮಾಡಿದ್ದಾರೆ.
ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಎಚ್.ನಾಗೇಶ್ ಬೆಂಬಲ ವಾಪಸ್ ಪಡೆಯುವಂತೆ ಮಾಡುವ ಮೂಲಕ ಬಿಜೆಪಿ ಪ್ರಾಥಮಿಕ ಯಶಸ್ಸು ಕಂಡಿದೆ.
ಇದು ಆಪರೇಷನ್ ಕಮಲದ ಮೊದಲ ಹಂತ ಎನ್ನಲಾಗಿದ್ದು, ಎರಡನೇ ಹಂತದಲ್ಲಿ ಕಾಂಗ್ರೆಸ್‌ನ 6 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ನಿನ್ನೆ ತನಕ ಹರಿದಾಡುತ್ತಿತ್ತು. ಆದರೆ, ಈಗ ಈ ಪಟ್ಟಿಗೆ ಮತ್ತೊಬ್ಬ ಶಾಸಕ ಸೇರ್ಪಡೆಯಾಗಿದ್ದು, 7 ಮಂದಿ ಶಾಸಕರು ಬಿಜೆಪಿಯತ್ತ ವಾಲಿದ್ದಾರೆ ಎಂಬ ಮಾಹಿತಿಯಿದೆ.
ಆಪರೇಷನ್ ಕಮಲದ 2ನೇ ಹಂತವಾಗಿ ಕಾಂಗ್ರೆಸ್‌ನ ಏಳು ಶಾಸಕರು ರಾಜೀನಾಮೆ ನೀಡಲಿದ್ದಾರೆ. ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರಿಗೂ ಗಾಳ ಹಾಕಲಾಗಿದೆಯಾದರೂ, ಪರಂಪರಾಗತವಾಗಿ ಕಟ್ಟಾ ಕಾಂಗ್ರೆಸ್ಸಿಗರಾದ ನಾವು, ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಗುರುವಾರದಂದು ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ, ರಾಜೀನಾಮೆ ನೀಡಿ, ಬಿಜೆಪಿ ಬೆಂಬಲಿಸುತ್ತೇವೆ ಎಂದು ಘೋಷಣೆ ಮಾಡುವ ನಿರೀಕ್ಷೆ ಇದೆ.

ರಮೇಶ್ ಜಾರಕಿಹೊಳಿಗೆ ಸೂಕ್ತ ಸ್ಥಾನಮಾನ
ಈ ನಡುವೆ ಬೆಂಗಳೂರಿನಲ್ಲಿರುವ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ. ಕಾಂಗ್ರೆಸ್ ಅತೃಪ್ತ ಶಾಸಕರ ನಾಯಕತ್ವವನ್ನು ರಮೇಶ್ ಜಾರಕೊಹೊಳಿ ಅವರು ವಹಿಸಿಕೊಂಡಿರುವ ಸಾಧ್ಯತೆ ಇದೆ. ರಮೇಶ್ ಅವರಿಗೆ ಬೇಕಾದ ಸ್ಥಾನ ಮಾನವನ್ನು ನೀಡಲು ಕಾಂಗ್ರೆಸ್ ಸಿದ್ಧವಿದೆ ಎಂಬ ಸಂದೇಶ ನೀಡಲಾಗಿದೆ.

ಕುಮಾರಸ್ವಾಮಿ ಅವರಿಂದ ತೀಕ್ಷ್ಣ ಪ್ರತಿಕ್ರಿಯೆ
ರಾಜ್ಯ ರಾಜಕೀಯದ ಬೆಳವಣಿಗೆಯ ಕ್ಷಣಕ್ಷಣದ ಮಾಹಿತಿ ಸಿಎಂ ಆಗಿ ನನಗೆ ಸಿಗುತ್ತಲೇ ಇದೆ. ಯಾವ ಶಾಸಕರನ್ನು ರೆಸಾರ್ಟಿಗೆ ಶಿಫ್ಟ್ ಮಾಡುತ್ತಿಲ್ಲ. ಯಡಿಯೂರಪ್ಪ ಅವರು ಕುದುರೆ ವ್ಯಾಪಾರಕ್ಕಿಳಿದಿದ್ದಾರೆ. ನನಗೆ ಯಾವ ಟೆನ್ಶನ್ ಇಲ್ಲ, ಏನೇನೋ ಸುದ್ದಿ ಪ್ರಸಾರ ಮಾಡಿ, ನೀವು ಫೂಲ್ ಆಗುವುದಷ್ಟೇ ಅಲ್ಲದೆ, ಜನರನ್ನು ಫೂಲ್ ಮಾಡಬೇಡಿ ಎಂದು ಮಾಧ್ಯಮದವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಲಹೆ ನೀಡಿದರು.

ರಾಜೀನಾಮೆ ನೀಡಲು ಸಿದ್ಧರಿರುವ ಶಾಸಕರು
* ರಮೇಶ್ ಜಾರಕಿಹೊಳಿ -ಗೋಕಾಕ್
* ನಾಗೇಂದ್ರ - ಬಳ್ಳಾರಿ ಗ್ರಾಮಾಂತರ
* ಉಮೇಶ್ ಜಾಧವ್ - ಚಿಂಚೋಳಿ
* ಮಹೇಶ್ ಕುಮಟಳ್ಳಿ - ಅಥಣಿ
* ಭೀಮಾ ನಾಯ್ಕ್ - ಹಗರಿಬೊಮ್ಮನಳ್ಳಿ
* ಜೆ.ಎನ್.ಗಣೇಶ್ - ಕಂಪ್ಲಿ
* ಪ್ರತಾಪ್ ಗೌಡ ಪಾಟೀಲ್- ಮಸ್ಕಿ

ಬಿಜೆಪಿಯ ಮುಂದಿನ ನಡೆಯೇನು?
* ಆಪರೇಷನ್ ಕಮಲ ಮುಂದುವರೆಸುವುದು
* ಸದನದಲ್ಲಿ ಸಂಖ್ಯಾಬಲ 211ಕ್ಕೆ ಇಳಿಸುವುದು
* ಸರಳ ಬಹುಮತಕ್ಕೆ ಬೇಕಾದ 106 ಗಡಿ ದಾಟುವುದು
* ಕನಿಷ್ಟ 14 ಶಾಸಕರನ್ನು ಸೆಳೆದುಕೊಳ್ಳುವುದು(ಬಿಜೆಪಿಗೆ ಕನಿಷ್ಟ 16 ಶಾಸಕರ ಅಗತ್ಯವಿದೆ)
* ಗುರುಗ್ರಾಮ, ಮುಂಬೈನಲ್ಲಿರುವ ಶಾಸಕರನ್ನು ಕಾಯ್ದುಕೊಳ್ಳುವುದು.












Click it and Unblock the Notifications