Shamvhavi Pathak: ಮನಸು ಕಲಕುವ ಎಳೆಯರ ಸಾವು, ಶಾಂಭವಿ ಪಾಠಕ್ ಸಾವಿಗೆ ಕನ್ನಡಿಗರ ಕಂಬನಿ
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರಿದ್ದ ವಿಮಾನ ಬುಧವಾರ ಬೆಳಗ್ಗೆ ಪತನವಾಯಿತು. ಡಿಸಿಎಂ ಮತ್ತು ಐವರು ಮೃತಪಟ್ಟಿದ್ದಾರೆ. ಈ ವಿಚಾರ ದೊಡ್ಡ ಸುದ್ದಿಯಾಗಿದ್ದು, ಅಜಿತ್ ಪವಾರ್ ಅವರ ಸಾವಿಗೆ ಪ್ರಧಾನಿ ಸೇರಿ ಗಣ್ಯಾತಿಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆ ಅವರೊಂದಿಗೆ ಮೃತಪಟ್ಟ ಇತರ ವ್ಯಕ್ತಿಗಳು ಮತ್ತವರ ಕುಟುಂಬಸ್ಥರ ಆಕ್ರಂದನವು ಮುಗಿಲು ಮುಟ್ಟಿದೆ. ಡಿಸಿಎಂ ಜೊತೆಗೆ ಮೃತಪಟ್ಟ ಇತರ ವ್ಯಕ್ತಿಗಳು, ಅವರ ಕನಸುಗಳು ಅದರಲ್ಲೂ ವಿಶೇಷವಾಗಿ ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಕುರಿತು ಬರಹಗಾರಗಾರ್ತಿ ದೀಪಾ ಹಿರೇಗುತ್ತಿ ಅವರು ವಿವರಿಸಿದ ಫೇಸ್‌ಬುಕ್ ಬರಹ ಮುಂದಿದೆ.
'ಒಂದು ಅಪಘಾತವಾದರೆ, ಮೃತಪಟ್ಟವರಲ್ಲಿ ಪ್ರಸಿದ್ಧರಿದ್ದರೆ ಉಳಿದವರು ಕೇವಲ ಸಂಖ್ಯೆಗಳಾಗಿಬಿಡುತ್ತಾರೆ. ಡಿಸಿಎಂ ಅಜಿತ್ ಪವಾರ್ ಮತ್ತು ಐದು ಮಂದಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹೀಗೆಯೇ ಮುಗಿದು ಹೋಗುತ್ತದೆ. ಆದರೆ ಆ ಐದು ಮಂದಿಗೂ ಕನಸುಗಳಿದ್ದವು, ಕುಟುಂಬಗಳಿವೆ, ಆಪ್ತರಿದ್ದಾರೆ...ಯಾಕೋ ಅಜಿತ್ ಪವಾರ್ ಅವರು ಪಯಣಿಸುತ್ತಿದ್ದ ವಿಮಾನದ ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಅವರ ಅಕಾಲಿಕ ಸಾವನ್ನು ನೋಡಿ ನಿಜಕ್ಕೂ ಬೇಸರವಾಯಿತು.

ಪೈಲಟ್-ಇನ್-ಕಮಾಂಡ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಾಂಭವಿ, ಮುಂಬೈ ವಿಶ್ವವಿದ್ಯಾಲಯದಿಂದ ಏರೋನಾಟಿಕ್ಸ್, ವಾಯುಯಾನ ಮತ್ತು ಏರೋಸ್ಪೇಸ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಿಎಸ್‌ಸಿ ಪೂರ್ಣಗೊಳಿಸಿದ್ದರು. ನಂತರ ಅವರು ನ್ಯೂಜಿಲೆಂಡ್ ಅಂತಾರಾಷ್ಟ್ರೀಯ ವಾಣಿಜ್ಯ ಪೈಲಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಅದೆಷ್ಟು ಕನಸುಗಳನ್ನು ಹೊತ್ತು ಈ ಕೆಲಸಕ್ಕೆ ಬಂದಿದ್ದರೋ...ಇನ್ನೊಬ್ಬ ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್ ಕೂಡ ಅಷ್ಟೇ. ನಿಜ, ಯಾರೂ ಸಾಯಬಾರದಿತ್ತು. ಆದರೆ ಎಳೆಯರ ಸಾವುಗಳು ಮನಸ್ಸನ್ನು ಮತ್ತಷ್ಟು ಮ್ಲಾನವಾಗಿಸುತ್ತವೆ' ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರ ಭಾವುಕ ಪ್ರತಿಕ್ರಿಯೆ
ಅವರ ಈ ಪೋಸ್ಟ್‌ಗೆ ಹಲವು ಭಾವುಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. 'ನಿಜ ಮೇಡಂ. ತುಂಬಾ ದುಃಖದ ಸಂಗತಿ. ಈ ಹೆಣ್ಣು ಮಗಳ ಫೋಟೋ ನೋಡಿ ಮನಸ್ಸು ಇನ್ನೂ ಕಲಕಿತು. ಅವರೆಲ್ಲರ ಕುಟುಂಬಗಳಿಗೆ ಶಕ್ತಿ ಬರಲಿ' ಎಂದು ನೆಟ್ಟಿಗರೊಬ್ಬರು ದೇವರಲ್ಲಿ ಪ್ರಾರ್ಥಿಸಿದ್ದಾರೆ.
'ಮೇಡಂ ಸಣ್ಣ ಹುಡುಗಿ (ಕ್ಯಾಪ್ಟನ್ ಶಾಂಭವಿ ಪಾಠಕ್) ಅವರ ಮನೆಯವರ ಗತಿ ಏನು..ಅಪ್ಪ ಅಮ್ಮ ಇರೋತನಕ ಪ್ರತೀ ಕ್ಷಣ ಸಾಯ್ತಾರೆ..ನನಗೂ ಬೆಳಿಗ್ಗೆಯಿಂದ ಇವಳದ್ದೇ ಮುಖ ಕಣ್ಣಮುಂದೆ..ನನ್ನ ಮಗಳ ವಯಸ್ಸಿರಬಹುದು' ಎಂದು ಮತ್ತೊಬ್ಬರ ನೆಟ್ಟಿಗರ ಮನ ಮಿಡದಿದೆ.
'ಪೈಲೇಟ್ ಗಳಿಗೇಕೆ ಹೆಚ್ಚು ವರಮಾನ ಎಂದು ಟೀಕಿಸುವವರಿಗೆ ಉತ್ತರ ಸಿಕ್ಕಿರಬೇಕಲ್ಲವೇ?', ನೋವಿನ ಸಂಗತಿ ದೇವರು ಅವರಾತ್ಮಕ್ಕೆ ಶಾಂತಿ ಒದಗಿಸಲೆಂದು ಪ್ರಾರ್ಥಿಸುತ್ತೇನೆ' ಎಂದು ಕೆಲವರು ತಿಳಿಸಿದ್ದಾರೆ. ಮತ್ತೆ ಕೆಲವರು ನೀವು ಹೇಳಿದ ಮಾತು, ವಿವರಿಸಿದ ರೀತಿ ನಿಜ' ಎಂದು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications