ಸಾಲು ಮರದ ತಿಮ್ಮಕ್ಕನ ಸಾಲಿನಲ್ಲಿ ಉತ್ತರ ಕನ್ನಡದ ವೃಕ್ಷ ಪ್ರೇಮಿ ತುಳಸಿ ಗೌಡ

ಕಾರವಾರ, ಅಕ್ಟೋಬರ್ 16: ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆ, ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ಅವರ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ವಿಶಿಷ್ಠ ಸಾಧನೆಯ ಮೂಲಕ ಗಮನ ಸೆಳೆಯುತ್ತಿರುವ ಮತ್ತೋರ್ವ ಮಹಿಳಾ ಸಾಧಕಿ ತುಳಸಿ ಗೌಡ.

ಈಕೆ ಈ ಶತಮಾನ ಕಂಡ ನಿಜವಾದ ಪರಿಸರ ಪ್ರೇಮಿ. ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡರ ಸಾಧನೆ ಅಪಾರ. ವೃಕ್ಷಮಾತೆ ಎಂದೆನಿಸಿಕೊಂಡಿರುವ ಈಕೆ ಬೆಳೆಸಿದ ಮರಗಳು ಒಂದಲ್ಲಾ, ಎರಡಲ್ಲಾ.. ಲಕ್ಷಗಟ್ಟಲೇ!

ಹೊನ್ನಳ್ಳಿ ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಗೆ 1944 ರಲ್ಲಿ ಜನಿಸಿದವರು ತುಳಸಿ ಗೌಡರು. ಬಡತನದ ಜತೆಗೆ ತನ್ನ ಎರಡನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ಶಾಲೆ ಮೆಟ್ಟಿಲನ್ನು ಏರದೆ ತಾಯಿಯ ಜೊತೆ ಕೂಲಿ ಕೆಲಸಕ್ಕೆ ತೆರಳಲು ಪ್ರಾರಂಭಿಸಿದ್ದರು. ಗೋವಿಂದೇ ಗೌಡ ಎನ್ನುವವರ ಜತೆ ಬಾಲ್ಯ ವಿವಾಹವಾದ ತುಳಸಿ ಗೌಡರು, ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನೂ ಕಳೆದುಕೊಂಡು ವಿಧವೆಯಾದರು.

ಹುಟ್ಟು ಪರಿಸರ ಪ್ರೇಮಿ

ಹುಟ್ಟು ಪರಿಸರ ಪ್ರೇಮಿ

ಪರಿಸರ ಪ್ರೇಮ ಅನ್ನುವುದು ಈಕೆಗೆ ಹುಟ್ಟಿನಿಂದ ಬಂದಿತ್ತು. ಊರಿನವರ ಜೊತೆ ಕಟ್ಟಿಗೆ ತರುವ ಕೆಲಸವನ್ನ ಮಾಡಿ ಪ್ರತಿನಿತ್ಯ ಐದರಿಂದ ಆರು ರೂಪಾಯಿ ದುಡಿಯುತ್ತಿದ್ದ ತುಳಸಿಗೆ ಅರಣ್ಯ ಇಲಾಖೆ ಬೀಜಗಳನ್ನು ಶೇಖರಣೆ ಮಾಡಿ ಸಸಿಗಳನ್ನಾಗಿ ಮಾಡಿಕೊಡುವ ಕೆಲಸವನ್ನು ಹಚ್ಚಿತು.

ಪರಿಸರದ ಮೇಲೆ ಕಾಳಜಿ ಇದ್ದುದರಿಂದ ಬೀಜಗಳನ್ನು ತಂದು ಸಸಿ ಮಾಡುವ ಕೆಲಸ ಪ್ರಾರಂಭಿಸಿದರು ತುಳಸಿ ಗೌಡ. ಕೇವಲ 1.25 ಪೈಸೆ ದಿನದ ಕೂಲಿಗೆ ಈ ಕೆಲಸವನ್ನ ಮಾಡುತ್ತಿದ್ದ ತುಳಸಿ ಗೌಡರಿಗೆ, ಕಡಿಮೆ ಕೂಲಿಗೆ ಸಸಿ ಮಾಡುವ ಕೆಲಸ ಬೇಡ ಎಂದು ಎಲ್ಲರೂ ಹೇಳಿದರು. ಆದರೆ ಪರಿಸರ ಕಾಳಜಿಯಿಂದ ಅವರು ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ.

ವರ್ಷಕ್ಕೆ 30 ಸಾವಿರ ಗಿಡಗಳ ನಾಟಿ

ವರ್ಷಕ್ಕೆ 30 ಸಾವಿರ ಗಿಡಗಳ ನಾಟಿ

ಇದರೊಂದಿಗೆ ತಾನು ಬೆಳೆಸಿದ ಸಸಿಗಳನ್ನು ಹೊನ್ನಳ್ಳಿ ಭಾಗದ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ, ಮನೆಗಳ ಆವರಣ, ರಸ್ತೆಗಳ ಪಕ್ಕದಲ್ಲಿ ನೆಡಲು ಪ್ರಾರಂಭಿಸಿದ್ದರು. ವರ್ಷಕ್ಕೆ ಈಕೆ ಸುಮಾರು 30 ಸಾವಿರ ಸಸಿಗಳನ್ನ ನೆಟ್ಟು ಪೋಷಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬಂದರು. ಈಕೆ ನೆಟ್ಟು ಪೋಷಿಸಿದ ಸಸಿಗಳು ಇಂದು ಬೆಳೆದು ಹೆಮ್ಮರವಾಗಿ ಸಾವಿರಾರು ಜನರಿಗೆ ಗಾಳಿ ನೆರಳನ್ನ ಕೊಡುವ ಕೆಲಸ ಮಾಡುತ್ತಿವೆ.

ಪರಿಸರದ ಮೇಲಿನ ಈಕೆಯ ಪ್ರೀತಿಯನ್ನ ಕಂಡು ಅಂದಿನ ಅರಣ್ಯಾಧಿಕಾರಿಯಾಗಿದ್ದ ಅ.ನಾ ಯಲ್ಲಪ್ಪ ರೆಡ್ಡಿ ಈಕೆಗೆ ಮಾಸ್ತಿಕಟ್ಟೆ ಅರಣ್ಯ ವಲಯದಲ್ಲಿ ಸಸಿಗಳನ್ನು ಪೋಷಿಸುವ ಕೆಲಸವನ್ನು ಸಹ ಕೊಡಿಸಿದ್ದರು.

ಮರಗಳ ವಿಜ್ಞಾನಿ

ಮರಗಳ ವಿಜ್ಞಾನಿ

ತುಳಸಿ ಪರಿಸರ ಪ್ರೀತಿ ಎಷ್ಟಿದೆ ಎಂದರೆ ಈಕೆಯನ್ನ ಮರಗಳ ವಿಜ್ಞಾನಿ ಎಂದೇ ಹೇಳಬಹುದು. ಯಾವ ಯಾವ ಗಿಡಗಳನ್ನ ಯಾವ ಯಾವ ಋತುವಿನಲ್ಲಿ ನೆಡಬೇಕು. ಎಷ್ಟು ನೀರು ಗೊಬ್ಬರ ಬೇಕು. ಯಾವ ಗಿಡಗಳು ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತವೆ. ಹೀಗೆ ಅರಣ್ಯದಲ್ಲಿನ ಸುಮಾರು 300ಕ್ಕೂ ಹೆಚ್ಚು ಪ್ರಭೇದದ ಮರಗಳ ಬಗ್ಗೆ ಇವರ ಅಂಗೈಯಲ್ಲೇ ಮಾಹಿತಿ ಇದೆ.

ಅರಣ್ಯದಲ್ಲಿನ ಪ್ರತಿ ಮರಗಳ ನಾಡಿ ಮಿಡಿತವನ್ನ ಇವರಿಗೆ ಗೊತ್ತು. ತನ್ನ ಸುತ್ತಮುತ್ತಲೂ ಯಾರು ಮರಗಳನ್ನ ಕಡಿಯದಂತೆ ನೋಡಿಕೊಂಡಿದ್ದಾರೆ. ಕೆಲವೊಮ್ಮೆ ಅರಣ್ಯದಲ್ಲಿ ತಾನು ನೆಟ್ಟ ಮರವನ್ನ ಮರಗಳ್ಳರು ಕಡಿದಾಗ ತುಳಸಿ ಕಡಿದ ಮರವನ್ನ ಅಪ್ಪಿ ಅತ್ತ ಘಟನೆಗಳು ಸಾಕಷ್ಟಿವೆ. ಈಕೆ ಲಕ್ಷಾಂತರ ಮರಗಳನ್ನ ಬೆಳೆಸಿಯೂ ಇಂದಿಗೂ ಬೀಜದಿಂದ ಸಸಿ ಮಾಡಿ ನಂತರ ನೆಟ್ಟು ಪೋಷಿಸುವ ಕೆಲಸವನ್ನ ಮುಂದುವರೆಸಿದ್ದಾರೆ.

 ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ

ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ

ತುಳುಸಿ ಗೌಡಳ ಸಾಧನೆಯನ್ನ ಮೆಚ್ಚಿ ಕೇಂದ್ರ ಸರ್ಕಾರ ಪ್ರತಿಷ್ಠಿತ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿಯನ್ನು ಇವರಿಗೆ ನೀಡಿತ್ತು. ಅಂದಿನ ಪ್ರಧಾನಿ ವಿ.ಪಿ ಸಿಂಗ್ ರಿಂದ ಪ್ರಶಸ್ತಿ ಪಡೆಯುವ ಮೂಲಕ ಹಾಲಕ್ಕಿ ಸಮುದಾಯದ ಮಹಿಳೆ ಇಡೀ ದೇಶದ ಗಮನವನ್ನ ಸೆಳೆದಿದ್ದರು. ಇನ್ನು ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು, ಸಂಘ ಸಂಸ್ಥೆಗಳು ನೀಡುವ ಸನ್ಮಾನಗಳು ತುಳಸಿ ಗೌಡರಿಗೆ ಲಭಿಸಿದೆ.

ಆದರೂ ಇಂದಿಗೂ ಎಲೆ ಮರೆಯ ಕಾಯಿಯಂತೆ ತುಳಸಿ ಗೌಡ ತನ್ನ ಕಾಯಕವನ್ನ ಮುಂದುವರೆಸಿದ್ದಾರೆ. ನಿಜಕ್ಕೂ ಹಾಲಕ್ಕಿ ಅನ್ನುವ ಪುಟ್ಟ ಸಮುದಾಯದಲ್ಲಿ ಹುಟ್ಟಿ ತುಳಸಿ ಇಡೀ ರಾಷ್ಟ್ರವೇ ಮೆಚ್ಚುವಂತಹ ಕೆಲಸವನ್ನು ಮಾಡುವ ಮೂಲಕ ಸಾಧಕಿಯಾಗಿದ್ದಾರೆ.

 ಟ್ರೀ ಪಾರ್ಕಿಗೆ ತುಳಸಿ ಗೌಡರ ಹೆಸರಿಡಲು ಒತ್ತಾಯ

ಟ್ರೀ ಪಾರ್ಕಿಗೆ ತುಳಸಿ ಗೌಡರ ಹೆಸರಿಡಲು ಒತ್ತಾಯ

ಇದೀಗ ಕಾರವಾರದಲ್ಲಿ ಅರಣ್ಯ ಇಲಾಖೆ, ಜಿಲ್ಲಾಡಳಿತದ ಸಹಾಯದೊಂದಿಗೆ ಕಾರವಾರದ ಕೋಡಿಬಾಗದಲ್ಲಿ ನಿರ್ಮಿಸಲಾಗುತ್ತಿರುವ ಟ್ರೀ ಪಾರ್ಕಿಗೆ ತುಳಸಿ ಗೌಡರ ಹೆಸರಿಡಲು ಒತ್ತಾಯ ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿ ಮರಗಳನ್ನು ರಕ್ಷಿಸಿ, ಮರ ವಿಜ್ಞಾನಿ, ವೃಕ್ಷ ತಾಯಿ ಎಂದೇ ಖ್ಯಾತಿ ಪಡೆದಿರುವ ಉತ್ತರ ಕನ್ನಡದವರೇ ಆದ ತುಳಸಿ ಗೌಡರ ಹೆಸರಿಡಿ ಎಂಬ ಆಗ್ರಹ ಕೇಳಿ ಬಂದಿದೆ. ಆ ಮೂಲಕ ಆಕೆಗೆ ಗೌರವ ಸಲ್ಲಿಸುವ ಕಾರ್ಯ ಆಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+