Gold: ನಿಧಿ ಸಿಕ್ಕರೆ ಏನು ಮಾಡಬೇಕು? 1878ರ ಕಾನೂನು ಪಾಲನೆ ಮಾಡದೇ ಇದ್ದರೆ ಚಿನ್ನ ಅಲ್ಲ ಜೈಲು ಗ್ಯಾರಂಟಿ!
ಚಿನ್ನ.. ಚಿನ್ನ.. ಚಿನ್ನ... ಈಗಿನ ಕಾಲದಲ್ಲಿ ಬಂಗಾರಕ್ಕೆ ಭಾರಿ ಬೆಲೆ ಇದ್ದು, ಹೀಗಾಗಿಯೇ ಜನರು ಚಿನ್ನ ಖರೀದಿಗೆ ಪರದಾಡುವಂತೆ ಆಗಿದೆ. ಹೀಗಿದ್ದಾಗ ನಿಮ್ಮ ಮನೆ ಅಥವಾ ನಿಮ್ಮ ಜಾಗದಲ್ಲೇ ಚಿನ್ನ ನಿಧಿಯ ರೂಪದಲ್ಲಿ ಸಿಕ್ಕರೆ ಖುಷಿ ಆಗೇ ಆಗುತ್ತದೆ ಅಲ್ವಾ? ಆದರೆ ನಿಮಗೆ ಈ ನಿಧಿ ಸಿಕ್ಕರೆ ಮೊದಲು ಮಾಡಬೇಕಾದ ಕೆಲಸ ಸಾಕಷ್ಟು ಇದೆ. ಅದರಲ್ಲೂ ನಿಧಿ ಸಿಕ್ಕ ವಿಚಾರವನ್ನು ಯಾರಿಗೂ ತಿಳಿಸದೆ & ಅದನ್ನ ನಿಮ್ಮ ಮನೆಯಲ್ಲೇ ಇಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನ ಮಾಡಿದರೆ ಸಾಲು ಸಾಲು ಸಂಕಷ್ಟ ಗ್ಯಾರಂಟಿ. ಹಾಗಾದರೆ ನಿಧಿ ಸಿಕ್ಕರೆ ಏನು ಮಾಡಬೇಕು? 1878ರ ಕಾನೂನು ಹೇಳುವುದು ಏನು?
ಗದಗ ಜಿಲ್ಲೆ ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಎನ್ನುವವರು ಮನೆಯನ್ನ ಕಟ್ಟಿಸಲು ಗುಂಡಿ ತೋಡುವ ಸಮಯದಲ್ಲಿ ನಿಧಿ ಸಿಕ್ಕಿತ್ತು. ಹೀಗೆ ಸಿಕ್ಕ ನಿಧಿಯಲ್ಲಿ ಪುರಾತನ ಕಾಲದ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಅಮೂಲ್ಯ ವಸ್ತುಗಳು ಪತ್ತೆಯಾಗಿದ್ದವು. ಆ ನಂತರ ನಿಧಿ ವಿಚಾರವಾಗಿ ಇದೀಗ ದೊಡ್ಡ ಚರ್ಚೆ ನಡೆಯುತ್ತಿದೆ. ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ನಂತರ ಕುಟುಂಬಸ್ಥರು ಸರ್ಕಾರಕ್ಕೆ ಅದನ್ನು ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದರು. ಆದರೆ ಅಕಸ್ಮಾತ್ ನಿಧಿ ಸಿಕ್ಕ ನಂತರ ಅದನ್ನ ಸರ್ಕಾರಕ್ಕೆ ಒಪ್ಪಿಸದೇ ಇದ್ದರೆ ಏನಾಗುತ್ತದೆ ತಿಳಿದಿದೆಯಾ?

ಚಿನ್ನ ಅಲ್ಲ ಜೈಲು ಗ್ಯಾರಂಟಿ!
ಹೌದು, ಭೂಮಿ ಒಳಗೆ ಯಾವುದೇ ನಿಧಿ ಅಥವಾ ನಿಧಿ ರೂಪದಲ್ಲಿ ಚಿನ್ನ & ಬೆಳ್ಳಿ ಸೇರಿದಂತೆ ಯಾವುದೇ ರೀತಿಯ ಅಮೂಲ್ಯ ವಸ್ತುಗಳು ಸಿಕ್ಕರೂ ಅದು ಸರ್ಕಾರದ ಸ್ವತ್ತು ಆಗಿರುತ್ತದೆ. 1878ರ 'ಇಂಡಿಯನ್ ಟ್ರೆಷರ್ ಟ್ರೋವ್ ಆಕ್ಟ್' ಎಂಬ ಕಾನೂನು ಇಂದಿಗೂ ಪಾಲನೆ ಮಾಡಲಾಗುತ್ತಿದ್ದು, ಈ ಆಕ್ಟ್ ಹೇಳುವ ನಿಯಮ ಇಂದಿಗೂ ಜಾರಿಯಲ್ಲಿ ಇದೆ. ಇನ್ನು ನಿಧಿ ಸಿಕ್ಕವರು ಅದನ್ನು ಸರ್ಕಾರಕ್ಕೆ ತಲುಪಿಸದೇ, ಆ ನಿಧಿಯನ್ನು ತಮ್ಮಲ್ಲೇ ಉಳಿಸಿಕೊಂಡು ಮಾರಾಟ ಮಾಡಲು ಪ್ರಯತ್ನ ಮಾಡಿದರೆ, ದೊಡ್ಡ ಕಂಟಕ ಗ್ಯಾರಂಟಿ. ಹಾಗಾದರೆ ಏನೆಲ್ಲಾ ಶಿಕ್ಷೆ ಆಗುತ್ತದೆ? ಮುಂದೆ ತಿಳಿಯೋಣ.
ಎಷ್ಟು ವರ್ಷ ಜೈಲು ಶಿಕ್ಷೆ?
ಭೂಮಿಯ ಒಳಗೆ ಯಾವುದೇ ಅಮೂಲ್ಯ ವಸ್ತು ಸಿಕ್ಕರೂ ಅದು ಸರ್ಕಾರದ ಸ್ವತ್ತಾಗಿರುವ ಹಿನ್ನೆಲೆಯಲ್ಲಿ ಕೂಡಲೇ ನಿಧಿ ಅಥವಾ ಚಿನ್ನ & ಬೆಳ್ಳಿ ಸೇರಿ ಅಮೂಲ್ಯ ವಸ್ತುಗಳು ಸಿಕ್ಕಿರುವ ವಿಚಾರವನ್ನು ಸರ್ಕಾರಕ್ಕೆ ತಿಳಿಸಬೇಕು. ಅಕಸ್ಮಾತ್ ಈ ಕೆಲಸ ಮಾಡದೇ ನಿಧಿ ಸಿಕ್ಕ ವಿಷಯ ಮರೆಮಾಚುವುದು ಅಥವಾ ಅದನ್ನು ಮಾರಾಟ ಮಾಡುವುದು ಮಾಡಿದರೆ ಅದು ಘೋರ ಅಪರಾಧವಾಗಿರುತ್ತದೆ. 100 ವರ್ಷಕ್ಕಿಂತ ಹಳೆಯ ವಸ್ತುಗಳನ್ನು 'ಪ್ರಾಚೀನ ವಸ್ತುಗಳು & ಕಲಾನಿಧಿಗಳ ಕಾಯ್ದೆ-1972' ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಹೀಗಿದ್ದಾಗ ನಿಧಿಯ ವಿಚಾರವನ್ನು ಕೂಡಲೇ ಸರ್ಕಾರಕ್ಕೆ ತಿಳಿಸಬೇಕು, ಇಲ್ಲವಾದರೆ ದಂಡ ಅಥವಾ 1 ವರ್ಷದ ತನಕ ಜೈಲು ಶಿಕ್ಷೆ ವಿಧಿಸಲು ಅವಕಾಶ ಇರುತ್ತದೆ. ಕೆಲವು ಪ್ರಕರಣಗಳಲ್ಲಿ ದಂಡ ಮತ್ತು ಜೈಲು ಶಿಕ್ಷೆ ಎರಡನ್ನೂ ವಿಧಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.












Click it and Unblock the Notifications