Bandipura: ಫೋಟೋ ಹುಚ್ಚಿನಿಂದ ಆನೆ ದಾಳಿಗೆ ಒಳಗಾದ ಪ್ರಯಾಣಿಕ; ಸಾವಿನ ದವಡೆಯಿಂದ ಪಾರು
ಚಾಮರಾಜನಗರ, ಆಗಸ್ಟ್ 11: ಫೋಟೋ ಗೀಳಿಗಾಗಿ ಆನೆ ಸನಿಹಕ್ಕೆ ತೆರಳಿದ್ದ ಪ್ರಯಾಣಿಕನ ಮೇಲೆ ಒಂಟಿಯಾನೆ ದಾಳಿ ನಡೆಸಿ ಗಾಯಗೊಳಿಸಿದೆ. ಈ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ. ಪ್ರಯಾಣಿಕನ ಈ ಹುಚ್ಚಾಟಕ್ಕೆ ವನ್ಯಜೀವಿ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡಿನಿಂದ ಗುಂಡ್ಲುಪೇಟೆಗೆ ಬರುವ ಮಾರ್ಗ ಮಧ್ಯೆ ರಸ್ತೆ ಬದಿಯಲ್ಲಿ ನಿಂತಿದ್ದ ಒಂಟಿ ಆನೆಯ ಸನಿಹಕ್ಕೆ ತೆರಳಿ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದ ಆಸಾಮಿಯನ್ನ ಅಟ್ಟಿಸಿಕೊಂಡು ಹೋಗಿದೆ. ಈ ವೇಳೆ ಕೆಳಗೆ ಬಿದ್ದ ವ್ಯಕ್ತಿಯನ್ನ ಕಾಲಿನಿಂದ ಒದ್ದು ಅಲ್ಲಿಂದ ತೆರಳಿದೆ. ಅದೃಷ್ಟವಶಾತ್ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಂತರ ಆತನನ್ನ ಜೊತೆಯಲ್ಲಿದ್ದವರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಬಂಡಿಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ತಿಳಿಸಿದ್ದಾರೆ.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ
ನಿನ್ನೆಯಷ್ಟೇ ಅರಣ್ಯ ಭವನದಿಂದ ಅರಮನೆಯಂಗಳಕ್ಕೆ ಪ್ರವೇಶ ಮಾಡಿದ್ದ ಆನೆಗಳಿಗೆ ಇಂದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ತೂಕ ಪರೀಶೀಲನೆ ಮಾಡಲಾಯಿತು. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ ಅಂಡ್ ಕೋ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ಪರೀಶೀಲನೆ ಮಾಡಲಾಯಿತು. ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಿ ತಯಾರಿ ನಡೆಸಲಾಗುವುದು. ಈ ಮೂಲಕ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು ನಡೆಸಲಾಗುವುದು.
ಇನ್ನೂ ನಾಳೆಯಿಂದ ನಿತ್ಯ ತಾಲೀಮು ಆರಂಭವಾಗಲಿದ್ದು, ಜಂಬೂಸವಾರಿ ಮೆರವಣಿಗೆ ಸಾಗಲಿರುವ ಮಾರ್ಗದಲ್ಲಿ ನಡೆಯಲಿರುವ ನಿತ್ಯ ತಾಲೀಮು ನಡೆಯಲಿದೆ. ಬೆಳಿಗ್ಗೆ ಮತ್ತು ಸಂಜೆ ಸೇರಿದಂತೆ ಎರಡು ಬಾರಿ ಅರಮನೆಯಿಂದ ಬನ್ನಿಮಂಟಪದವರೆಗೆ ನಿತ್ಯ ತಾಲೀಮು ನಡೆಯಲಿದ್ದು, ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲಾಗುವುದು.
ಆನೆಗಳ ತೂಕದ ವಿವರ
ಅಭಿಮನ್ಯು - 5,360 ಕೆ ಜಿ
ಧನಂಜಯ - 5,310 ಕೆ ಜಿ
ಕಾವೇರಿ - 3,010 ಕೆ ಜಿ
ಲಕ್ಷ್ಮಿ - 3,730 ಕೆ ಜಿ
ಭೀಮ - 5,465 ಕೆ ಜಿ
ಏಕಲವ್ಯ - 5,305 ಕೆ ಜಿ
ಮಹೇಂದ್ರ - 5,120 ಕೆ ಜಿ
ಕಂಜನ್ - 4,880 ಕೆ ಜಿ
ಪ್ರಶಾಂತ - 5,110 ಕೆ ಜಿ ತೂಕ.












Click it and Unblock the Notifications