ಸಾರಿಗೆ ಮುಷ್ಕರ ಅಂತ್ಯ, ಬುಧವಾರದ 5 ಪ್ರಮುಖ ಬೆಳವಣಿಗೆಗಳು

Posted By:
Subscribe to Oneindia Kannada

ಬೆಂಗಳೂರು, ಜುಲೈ 27 : ವೇತನ ಹೆಚ್ಚಳ ಸೇರಿದಂತೆ 42 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಇಲಾಖೆ ನೌಕರರು ನಡೆಸುತ್ತಿದ್ದ ಮೂರು ದಿನಗಳ ಮುಷ್ಕರ ಅಂತ್ಯಗೊಂಡಿದೆ. ಹಲವು ಸುತ್ತಿನ ಮಾತುಕತೆಗಳ ಬಳಿಕ ಸರ್ಕಾರ ಶೇ 12.5ರಷ್ಟು ವೇತನ ಹೆಚ್ಚಳ ಮಾಡಲು ಒಪ್ಪಿಗೆ ನೀಡಿದೆ.

'ನೌಕರರ ಬೇಡಿಕೆಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಸರ್ಕಾರ ಸಿದ್ಧವಿದೆ. ಮುಷ್ಕರವನ್ನು ಕೈ ಬಿಟ್ಟು ಎಲ್ಲರೂ ಮಾತುಕತೆಗೆ ಬನ್ನಿ. ಅರ್ಧಗಂಟೆಯಲ್ಲಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬೆಳಗ್ಗೆ ನೌಕರರಿಗೆ ಮನವಿ ಮಾಡಿದ್ದರು.[ಸಾರಿಗೆ ನೌಕರರ ಮುಷ್ಕರ : ಬುಧವಾರ ಏನಾಯ್ತು?]

ಸಚಿವ ರಾಮಲಿಂಗಾ ರೆಡ್ಡಿ ಮತ್ತು ನೌಕರರು, ಸಚಿವರು ಮತ್ತು ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸರಣಿ ಸಭೆ ನಡೆಯಿತು. ನಂತರ ರಾಮಲಿಂಗಾ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.[ಸಾರಿಗೆ ಮುಷ್ಕರ ವಾಪಸ್]

ಬುಧವಾರ ಸಂಜೆ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಎಐಟಿಯುಸಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಅನಂತ ಸುಬ್ಬರಾವ್ ಮತ್ತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಎಚ್‌.ವಿ.ಅನಂತ ಸುಬ್ಬರಾವ್ ಅವರು ಮುಷ್ಕರವನ್ನು ವಾಪಸ್ ಪಡೆಯುತ್ತಿರುವುದಾಗಿ ಘೋಷಣೆ ಮಾಡಿದರು.....

ಮೂರನೇ ದಿನದ ಮುಷ್ಕರ ಆರಂಭ

ಮೂರನೇ ದಿನದ ಮುಷ್ಕರ ಆರಂಭ

ಬುಧವಾರ ಬೆಳಗ್ಗೆ ಸಾರಿಗೆ ನೌಕರರ 3ನೇ ದಿನದ ಮುಷ್ಕರ ಆರಂಭವಾಯಿತು. ಆದರೆ, ಸರ್ಕಾರ ಪೊಲೀಸರ ಸಹಕಾರದಿಂದ ಬೆಂಗಳೂರಿನ ಮೆಜೆಸ್ಟಿಕ್-ಶಾಂತಿನಗರ ನಡುವೆ ಬಸ್ ಓಡಿಸಿತು. ಚಿತ್ರದುರ್ಗ-ಶಿವಮೊಗ್ಗ ನಡುವೆಯೂ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭವಾಯಿತು.

ಮುಷ್ಕರ ಕೈ ಬಿಡಲು ಕರೆ

ಮುಷ್ಕರ ಕೈ ಬಿಡಲು ಕರೆ

ಬೆಳಗ್ಗೆ ಶಾಂತಿನಗರದ ಕೆಎಸ್ಆರ್‌ಟಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಮಲಿಂಗಾ ರೆಡ್ಡಿ ಅವರು, 'ಮಧ್ಯಾಹ್ನದ ತನಕ ನೌಕರರ ಸಂಘದ ಜೊತೆ ಮಾತುಕತೆ ನಡೆಸುತ್ತೇವೆ. ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸಲಾಗುತ್ತದೆ. ಜನರ ಹಿತದೃಷ್ಠಿಯಿಂದ ಮುಷ್ಕರವನ್ನು ಕೈಬಿಡಿ' ಎಂದು ಸಚಿವರು ಮನವಿ ಮಾಡಿದರು.

ನೌಕರರ ಸಂಘದವರ ಜೊತೆ ಸರಣಿ ಸಭೆ

ನೌಕರರ ಸಂಘದವರ ಜೊತೆ ಸರಣಿ ಸಭೆ

ಎಐಟಿಯುಸಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಅನಂತ ಸುಬ್ಬರಾವ್ ಸೇರಿದಂತೆ ನೌಕರರ ಸಂಘದವರ ಜೊತೆ ಸಚಿವ ರಾಮಲಿಂಗಾ ರೆಡ್ಡಿ ಸರಣಿ ಸಭೆಗಳನ್ನು ನಡೆಸಿದರು. ನಂತರ ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಚಿವರು ಸಭೆ ನಡೆಸಿದರು.

ಸಿದ್ದರಾಮಯ್ಯ ಭೇಟಿ ಮಾಡಿದ ರಾಮಲಿಂಗಾ ರೆಡ್ಡಿ

ಸಿದ್ದರಾಮಯ್ಯ ಭೇಟಿ ಮಾಡಿದ ರಾಮಲಿಂಗಾ ರೆಡ್ಡಿ

ನೌಕರರು, ವ್ಯವಸ್ಥಾಪಕ ನಿರ್ದೇಶಕರ ಜೊತೆಗಿನ ಸಭೆಯ ಬಳಿಕ ರಾಮಲಿಂಗಾ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಸಿದ್ದರಾಮಯ್ಯ ಅವರು 12.5ರಷ್ಟು ವೇತನ ಹೆಚ್ಚಳ ಮಾಡಲು ಒಪ್ಪಿಗೆ ನೀಡಿದರು.

ಮುಷ್ಕರ ಅಂತ್ಯಗೊಳಿಸಿದ ನೌಕರರು

ಮುಷ್ಕರ ಅಂತ್ಯಗೊಳಿಸಿದ ನೌಕರರು

ಸಂಜೆ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಎಐಟಿಯುಸಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಅನಂತ ಸುಬ್ಬರಾವ್ ಮತ್ತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು. 'ತಕ್ಷಣದಿಂದಲೇ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ, ಎಲ್ಲಾ ನೌಕರರು ಮುಷ್ಕರ ಅಂತ್ಯಗೊಳಿಸಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ' ಎಂದು ಎಚ್‌.ವಿ.ಅನಂತ ಸುಬ್ಬರಾವ್ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka State Road Transport Corporation employees called off the strike on July 27, 2016 after government approved for 12.5 percent salary hike. Here are the top 5 development of Wednesday.
Please Wait while comments are loading...